ರಾಜ್ಯದಲ್ಲಿ ಸರಕಾರಿ ಶಾಲಾ ಮಕ್ಕಳಿಗೆ ಇಂಗ್ಲಿಷ್ ಭಾಷೆ ಕಲಿಕೆ

Update: 2020-03-02 16:55 GMT

ಬೆಂಗಳೂರು, ಮಾ.2: ಖಾಸಗಿ ಶಾಲೆಗಳ ಮಾದರಿಯಲ್ಲಿಯೇ ಸರಕಾರಿ ಶಾಲೆಗಳಲ್ಲಿ ಆಂಗ್ಲ ಭಾಷೆ ಕಲಿಸಲು ಶಿಕ್ಷಣ ಇಲಾಖೆ ಮುಂದಾಗಿದ್ದು, 1 ರಿಂದ 3ನೇ ತರಗತಿವರೆಗೆ ಆಂಗ್ಲ ಭಾಷೆ ಕಲಿಸಲು ತೀರ್ಮಾನಿಸಲಾಗಿದೆ.

ರಾಜ್ಯದಲ್ಲಿ ಈಗಾಗಲೇ ಒಂದು ಸಾವಿರ ಶಾಲೆಗಳಲ್ಲಿ ಮಕ್ಕಳಿಗೆ ಆಂಗ್ಲ ಭಾಷೆ ಕಲಿಸಲಾಗುತ್ತಿದೆ. ಇದಕ್ಕೆ ಪೂರಕವಾಗಿ ಮುಂದಿನ ಶೈಕ್ಷಣಿಕ ವರ್ಷದಿಂದ ನಲಿ-ಕಲಿ ಕಾರ್ಯಕ್ರಮದ ಅಡಿಯಲ್ಲಿ ಆಂಗ್ಲ ಭಾಷೆ ಸೇರಿಸಲು ರಾಜ್ಯ ಸರಕಾರ ಮುಂದಾಗಿದೆ.

ಸರಕಾರಿ ಶಾಲೆಗಳ ಕಡೆಗೆ ಮಕ್ಕಳನ್ನು ಆಕರ್ಷಿಸಲು 2008-09 ರಲ್ಲಿ ರಾಜ್ಯ ಸರಕಾರವು ಈ ನಲಿ-ಕಲಿ ಅಭಿಯಾನದ ಆರಂಭಿಸಲಾಯಿತು. ಈ ಅಭಿಯಾನದ ಅಡಿಯಲ್ಲಿ 1 ರಿಂದ 3 ನೇ ತರಗತಿಯ ಮಕ್ಕಳಿಗೆ ಕನ್ನಡ, ಗಣಿತ, ಪರಿಸರ ಅಧ್ಯಯನ ವಿಷಯಗಳನ್ನು ಹೇಳಿಕೊಡಲಾಗುತ್ತಿದೆ.

ಪ್ರಾಯೋಗಿಕ ಯಶಸ್ಸು: 2015-16 ನೇ ಸಾಲಿನಲ್ಲಿ ಯೂನಿಸೆಫ್ ಸಂಸ್ಥೆಯ ಸಹಯೋಗದೊಂದಿಗೆ ಕೇಂದ್ರ ಸರಕಾರ ಸಮಗ್ರ ಶಿಕ್ಷಣ ಕರ್ನಾಟಕದಡಿ ತುಮಕೂರು, ರಾಮನಗರ, ಮೈಸೂರು, ದಕ್ಷಿಣ ಕನ್ನಡ ಜಿಲ್ಲೆಯ ಆಯ್ದ 75 ಶಾಲೆಗಳಲ್ಲಿ ಮೊದಲ ಬಾರಿಗೆ ನಲಿ-ಕಲಿ ಯೋಜನೆಯನ್ನು ಪ್ರಾಯೋಗಿಕವಾಗಿ ಅನುಷ್ಠಾನ ಮಾಡಲಾಗಿತ್ತು.

2019-20 ನೇ ಸಾಲಿನಲ್ಲಿ ಎರಡು ಸಾವಿರ ಶಾಲೆಗಳಲ್ಲಿ ಅನುಷ್ಠಾನ ಮಾಡಲಾಗಿತ್ತು. ಈ ಎಲ್ಲ ಶಾಲೆಗಳ ಪ್ರಗತಿ ಪರಿಶೀಲಿಸಿ ವರದಿ ಪಡೆದಾಗ ಉತ್ತಮ ಫಲಿತಾಂಶ ಬಂದಿದೆ. ಈ ನಿಟ್ಟಿನಲ್ಲಿ ಎಲ್ಲ ಶಾಲೆಗಳಲ್ಲಿ ಇದನ್ನು ಆರಂಭಿಸಲು ನಿರ್ಧರಿಸಲಾಗಿದೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದು ಕೇಂದ್ರ ಸರಕಾರದ ಯೋಜನೆಯಾಗಿದ್ದು, ಇದಕ್ಕೆ 27 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಇಲಾಖೆ ರಾಜ್ಯ ಸರಕಾರದ ಆಡಳಿತಾತ್ಮಕ ಅನುಮೋದನೆ ಪಡೆದು ಮುಂದಿನ ಶೈಕ್ಷಣಿಕ ವರ್ಷದಿಂದಲೇ ಅನುಷ್ಠಾನ ಮಾಡಲಾಗುತ್ತಿದೆ.

ಪಠ್ಯ ಹೇಗಿರಲಿದೆ: ಮಕ್ಕಳ ವಯಸ್ಸಿಗೆ ಅನುಗುಣವಾಗಿ ಅವರು ಕಲಿಯಲು ಸುಲಭವಾದ ಪಠ್ಯಕ್ರಮವನ್ನು ಯೂನಿಸೆಫ್ ಸಂಸ್ಥೆ ರೂಪಿಸಿದೆ. ಅದರಲ್ಲಿ ಮಕ್ಕಳಿಗೆ ಪದ್ಯ, ಮಾತನಾಡುವ ಭಾಷೆ, ಸಣ್ಣ ಕಥೆಗಳು, ಆಕರ್ಷಣೀಯ ಗೊಂಬೆಗಳು ಸೇರಿವೆ. ಇದನ್ನು ಪಠ್ಯಕ್ರಮ ಎನ್ನುವುದರ ಬದಲಿಗೆ ವರ್ಕ್ ಬುಕ್ ಎನ್ನಲಾಗಿದ್ದು, ಇದನ್ನು ಮುದ್ರಿಸಿ ನೀಡಲು ಕರ್ನಾಟಕ ಪಠ್ಯ ಪುಸ್ತಕ ಸಂಘಕ್ಕೆ ಜವಾಬ್ದಾರಿ ವಹಿಸಲಾಗಿದೆ.

ಶಿಕ್ಷಕರಿಗೆ ಅಗತ್ಯ ತರಬೇತಿ: ಮಕ್ಕಳಿಗೆ ಆಂಗ್ಲ ಭಾಷೆ ಕಲಿಸಲು ಈಗಾಗಲೇ 2700 ಶಿಕ್ಷಕರಿಗೆ ಇಲಾಖೆಯಿಂದ ಅಗತ್ಯ ತರಬೇತಿ ನೀಡಲಾಗಿದೆ. ತರಬೇತಿ ಪಡೆದವರು ಆಯಾ ಸರಕಾರಿ ಶಾಲೆಯಲ್ಲಿರುವ ಇತರೆ ಶಿಕ್ಷಕರಿಗೆ ಮಾರ್ಗದರ್ಶನ ನೀಡುವ ಮೂಲಕ ತರಬೇತಿಗೊಳಿಸುತ್ತಾರೆ. ಈ ಪ್ರಕ್ರಿಯೆ ಶೀಘ್ರದಲ್ಲಿಯೇ ಆರಂಭವಾಗಲಿದ್ದು, ಮುಂದಿನ ಶೈಕ್ಷಣಿಕ ವರ್ಷ ಆರಂಭವಾಗುವ ವೇಳೆಗೆ ತರಬೇತಿಗಳು ಮುಗಿಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News