ಕಾಡಾನೆ ದಾಳಿಗೆ ಅರಣ್ಯ ಇಲಾಖೆ ಸಿಬ್ಬಂದಿ ಸೇರಿ ಇಬ್ಬರು ಬಲಿ

Update: 2020-03-02 18:34 GMT

ಕೋಲಾರ, ಮಾ.2: ಜಿಲ್ಲೆಯ ಮಾಲೂರು ತಾಲೂಕಿನ ನೂಟ್ ವೇ ಗ್ರಾಮದ ಹೊರವಲಯದಲ್ಲಿ ಇಂದು ಸಂಜೆ ವೇಳೆಗೆ ಆನೆಗಳ ದಾಳಿಗೆ ಅರಣ್ಯ ಇಲಾಖೆಯ ಸಿಬ್ಬಂದಿ ಸೇರಿ ಇಬ್ಬರು ಮೃತಪಟ್ಟಿದ್ದಾರೆ.

ತಮಿಳುನಾಡಿನ ಕೃಷ್ಣಗಿರಿ ಅರಣ್ಯ ಪ್ರದೇಶದಿಂದ ಆಗಮಿಸಿದೆ ಎನ್ನಲಾದ ಆನೆಗಳ ಹಿಂಡು ಇವರ ಮೇಲೆ ದಾಳಿ ನಡೆಸಿದ್ದು, ತೀವ್ರ ಗಾಯಗೊಂಡು ಇಬ್ಬರು ಮೃತಪಟ್ಟಿದ್ದಾರೆ. ಮೃತರನ್ನು ಅರಣ್ಯ ಇಲಾಖೆಯಲ್ಲಿ ವೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಮುನಿಯಪ್ಪ ಹಾಗೂ ಗ್ರಾಮದ ಆನಂದಯ್ಯ ಎಂದು ಗುರುತಿಸಲಾಗಿದೆ.

ತಲಾ 7.5 ಲಕ್ಷ ರೂ. ಪರಿಹಾರ 

ಮೃತರ ಕುಟುಂಬಕ್ಕೆ 7.5 ಲಕ್ಷ ಪರಿಹಾರ ನೀಡಲಾಗುವುದು ಹಾಗೂ ಮೃತ ಮುನಿಯಪ್ಪ ಕುಟುಂಬದ ಒಬ್ಬ ಸದಸ್ಯರಿಗೆ ಉದ್ಯೋಗ ನೀಡಲು ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಸಚಿವ ಆನಂದ್ ಸಿಂಗ್ ಅವರು ತಿಳಿಸಿದ್ದಾರೆ.

ಇಂದು ಕೋಲಾರದ ಎಸ್ಎನ್ಆರ್ ಆಸ್ಪತ್ರೆಗೆ ಭೇಟಿ ನೀಡಿ ಮೃತ ಮುನಿಯಪ್ಪ ಅವರ ಕುಟುಂಬದವರಿಗೆ ಸಾಂತ್ವನ ಹೇಳಿ ಅವರು ಮಾತನಾಡಿದರು. ಮುನಿಯಪ್ಪ ಅವರು 15 ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ವಾಚರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಆನೆಗಳ ದಾಳಿಯಿಂದ ಮೃತಪಟ್ಟಿದ್ದಾರೆ. ಅಲ್ಲದೆ ಆನಂದಯ್ಯ ಎಂಬವರು ಸಹ ದಾಳಿಗೆ ಸಿಲುಕಿ ಮೃತಪಟ್ಟಿದ್ದು ಸಾರ್ವಜನಿಕರು ಆನೆಯ ಬಳಿ ಹೋಗಲು ಇಲಾಖೆಯವರು ಏಕೆ ಅವಕಾಶ ಮಾಡಿಕೊಟ್ಟರು ಎಂಬುದರ ಕುರಿತು ತನಿಖೆ ನಡೆಸಲಾಗುವುದು ಎಂದು ತಿಳಿಸಿದರು.

ಆನೆಗಳ ದಾಳಿಯನ್ನು ಶಾಶ್ವತವಾಗಿ ತಡೆಗಟ್ಟಲು ರೈಲ್ವೆ ಹಳಿಗಳಿಂದ ಬ್ಯಾರಿಕೇಡ್ ಅನ್ನು ನಿರ್ಮಿಸಲು ಇಲಾಖೆಯಿಂದ ಕ್ರಮಕೈಗೊಳ್ಳಲಾಗುವುದು.  ಮಾನವನು ಅರಣ್ಯವನ್ನು ನಾಶಪಡಿಸುತ್ತಿರುವದರಿಂದ ಪ್ರಾಣಿಗಳು ಆಹಾರವನ್ನು ಅರಸಿ ನಾಡಿಗೆ ಬರುತ್ತಿವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಅಬಕಾರಿ ಸಚಿವ ಹೆಚ್.ನಾಗೇಶ್, ಮಾಲೂರು ಶಾಸಕ ಕೆ.ವೈ ನಂಜೇಗೌಡ, ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಿ.ಎಸ್ ವೆಂಕಟೇಶ್, ಪ್ರಭಾರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ವಿ.ದರ್ಶನ್, ಉಪವಿಭಾಗಾಧಿಕಾರಿ ಸೋಮಶೇಖರ್, ಅರಣ್ಯಾಧಿಕಾರಿ ಚಕ್ರಪಾಣಿ, ತಹಶೀಲ್ದಾರ್ ಶೋಭಿತ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News