ಮೈಸೂರು: 15 ಲಕ್ಷ ರೂ. ಮೌಲ್ಯದ ಮೊಬೈಲ್ ಗಳನ್ನು ದೋಚಿದ ಕಳ್ಳರು
Update: 2020-03-02 23:45 IST
ಮೈಸೂರು,ಮಾ.2: ಮೊಬೈಲ್ ಅಂಗಡಿಯೊಂದರ ಶಟರ್ ನ ಬೀಗ ಮುರಿದ ದುಷ್ಕರ್ಮಿಗಳು 15 ಲಕ್ಷ ರೂ. ಮೌಲ್ಯದ ಮೊಬೈಲ್ ಎಗರಿಸಿ ಪರಾರಿಯಾಗಿರುವ ಘಟನೆ ಕುವೆಂಪುನಗರದ ನ್ಯೂ ಕಾಂತರಾಜೇ ಅರಸ್ ರಸ್ತೆಯಲ್ಲಿ ನಡೆದಿದೆ.
ಕುವೆಂಪು ನಗರದ ನ್ಯೂ ಕಾಂತರಾಜೇ ಅರಸ್ ರಸ್ತೆಯಲ್ಲಿನ ಜೆಎಸ್ ಎಸ್ ಕಾನೂನು ಬಿಲ್ಡಿಂಗ್ ಮೊಬೈಲ್ ಅಂಗಡಿಯಲ್ಲಿ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ. ಅಂಗಡಿಯ ಮಾಲಕ ಸತೀಶ್ ಕುಮಾರ್ ಕೆಲಸ ಮುಗಿಸಿ ಬೀಗ ಹಾಕಿಕೊಂಡು ರಾತ್ರಿ ಮನೆಗೆ ಹೋಗಿದ್ದರು. ಮರುದಿನ ಬೆಳಗ್ಗೆ ಬಂದು ನೋಡಿದಾಗ ಕಳ್ಳತನ ನಡೆದಿರುವುದು ತಿಳಿದು ಬಂದಿದೆ.
ಅಂಗಡಿ ಬಾಗಿಲ ರೋಲಿಂಗ್ ಶಟರ್ ನ ಬೀಗ ಮುರಿದು ಒಳನುಗ್ಗಿರುವ ಕಳ್ಳರು ಸುಮಾರು 15 ಲಕ್ಷ ರೂ. ಮೌಲ್ಯದ ಮೊಬೈಲ್ ಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆಂದು ಸತೀಶ್ ಕುಮಾರ್ ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.