ಭಾರತದಲ್ಲಿ ಬದುಕುವ ಹಕ್ಕು ನನಗಿಲ್ಲದ ಪರಿಸ್ಥಿತಿ ಇದೆ: ದಿಲ್ಲಿ ಹಿಂಸಾಚಾರದ ಕುರಿತು ಮಾಜಿ ಸೈನಿಕನ ನೋವಿನ ಮಾತು

Update: 2020-03-03 06:01 GMT
Photo: ndtv.com

ಹೊಸದಿಲ್ಲಿ, ಮಾ.3: ಕೇಂದ್ರ ಮೀಸಲು ಪೊಲೀಸ್ ಪಡೆ(ಸಿಆರ್‌ಪಿಎಫ್)ಯಲ್ಲಿ 22 ವರ್ಷಗಳ ಕಾಲ ಸೇವೆ ಸಲ್ಲಿಸಿ 2002ರಲ್ಲಿ ಮುಖ್ಯ ಕಾನ್‌ಸ್ಟೇಬಲ್ ಆಗಿ ನಿವೃತ್ತಿಯಾಗಿರುವ 58ರ ಹರೆಯದ ಐಶ್ ಮುಹಮ್ಮದ್ ಈಶಾನ್ಯ ದಿಲ್ಲಿಯಲ್ಲಿರುವ ತಾತ್ಕಾಲಿಕ ಪರಿಹಾರದ ಶಿಬಿರದಲ್ಲಿ ಪರಿಸ್ಥಿತಿಗೆ ಹೊಂದಿಕೊಳ್ಳಲು ಕಷ್ಟಪಡುತ್ತಿದ್ದಾರೆ.

ಕಳೆದ ವಾರ ದಿಲ್ಲಿಯಲ್ಲಿ ನಡೆದ ಹಿಂಸಾಚಾರದಲ್ಲಿ ಮುಹಮ್ಮದ್ ಸಹಿತ ನೂರಾರು ಜನರು ಸಂತ್ರಸ್ತರಾಗಿದ್ದು, ಅವರಿಗೆ ಮುಸ್ತಫಾಬಾದ್‌ನ ಈದ್ಗಾದಲ್ಲಿ ತಾತ್ಕಾಲಿಕ ಶಿಬಿರದಲ್ಲಿ ಆಶ್ರಯ ನೀಡಲಾಗಿದೆ.

ಭಾಗೀರಥಿ ವಿಹಾರ ಪ್ರದೇಶದ ಸಮೀಪ ಮುಹಮ್ಮದ್ ಅವರ ಮನೆಯಿತ್ತು. ಫೆ.25ರಂದು ನಡೆದ ಹಿಂಸಾಚಾರದ ವೇಳೆ ದುಷ್ಕರ್ಮಿಗಳು ಮುಹಮ್ಮದ್ ಮನೆಗೂ ಬೆಂಕಿ ಹಚ್ಚಿದ್ದಾರೆ.

‘‘200ರಿಂದ 300 ಗಲಭೆಕೋರರು ಆಗಮಿಸಿ ಕಲ್ಲು ತೂರಾಟ ನಡೆಸಿದರು. ಬುಲೆಟ್‌ಗಳನ್ನು ಸಿಡಿಸಿದರು. ಆ ನಂತರ ಮನೆಗೆ ಬೆಂಕಿ ಹಚ್ಚಿದರು. ನಾನು ನನ್ನ 26ರ ವಯಸ್ಸಿನ ಮಗನೊಂದಿಗೆ ಮನೆಯೊಳಗಿದ್ದೆ. ನಾವು ಟೆರೇಸ್‌ಗೆ ತೆರಳಿ ಪಕ್ಕದ ಮನೆಯ ಮಹಡಿಯ ಮೇಲೆ ಜಿಗಿದು ಪಾರಾದೆವು. ನನ್ನ ಸೋದರನಿಗೆ ಮಾ.29ರಂದು ಮದುವೆ ನಿಗದಿಯಾಗಿತ್ತು. ಒಂದಷ್ಟು ಚಿನ್ನಾಭರಣ ಮನೆಯಲ್ಲಿತ್ತು. ಅದನ್ನು ದುಷ್ಕರ್ಮಿಗಳು ದೋಚಿದ್ದಾರೆ’’ ಎಂದು ಮುಹಮ್ಮದ್ 'ಎನ್‌ಡಿಟಿವಿ'ಗೆ ತಿಳಿಸಿದರು.

ಮುಹಮ್ಮದ್ ತನ್ನ ಪತ್ನಿ ಹಾಗೂ ಇಬ್ಬರು ಪುತ್ರರನ್ನು ತವರುಪಟ್ಟಣ ಬುಲಂದ್‌ಶಹರ್‌ಗೆ ಕಳುಹಿಸಿಕೊಟ್ಟ್ಟಿದ್ದಾರೆ. ಅವರ ಮನೆಯ ಮೊದಲ ಮಹಡಿ ಬೆಂಕಿಗಾಹುತಿಯಾಗಿದ್ದು, ಎರಡು ಬೈಕ್‌ಗಳು ಮನೆಯಲ್ಲಿದ್ದವು. ಮನೆಯಲ್ಲಿ ಅಳಿದುಳಿದ ವಸ್ತುಗಳನ್ನು ರಕ್ಷಿಸಿಕೊಳ್ಳಲು ವಾಪಸ್ ತೆರಳಲು ನಿರ್ಧರಿಸಿದ್ದಾರೆ.

‘‘ನಾನು 1991ರಲ್ಲಿ ಕಾಶ್ಮೀರದಲ್ಲಿ ಸೇವೆ ಸಲ್ಲಿಸಿದ್ದೆ. ಆಗ ನನಗೆ ಗಾಯವಾಗಿತ್ತು. ಇದೀಗ ಗಲಭೆಯ ವೇಳೆ ನಡೆಸಿದ ಕೃತ್ಯವನ್ನೇಲ್ಲಾ ನೋಡಿದಾಗ ನನಗೆ ಈ ದೇಶದಲ್ಲಿ ಇರುವ ಹಕ್ಕಿಲ್ಲ ಎಂಬ ಭಾವನೆ ಉಂಟಾಗುತ್ತದೆ’’ಎಂದು ಭಾವುಕರಾಗಿ ನುಡಿದರು.

ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿ ಪರ-ವಿರೋಧ ಗುಂಪುಗಳ ನಡುವೆ ಕಳೆದ ಸೋಮವಾರ ಉಂಟಾಗಿರುವ ಹಿಂಸಾಚಾರದಲ್ಲಿ ಯುದ್ಧಭೂಮಿಯಂತಾಗಿರುವ ದಿಲ್ಲಿಯ ಹಲವು ಪ್ರದೇಶಗಳ ಪೈಕಿ ಭಗೀರಥ ವಿಹಾರ ಕೂಡ ಒಂದಾಗಿತ್ತು. ನಾಲ್ಕು ದಿನಗಳಿಗೂ ಹೆಚ್ಚು ಕಾಲ ನಡೆದ ಹಿಂಸಾಚಾರದಲ್ಲಿ ಕಬ್ಬಿಣ ರಾಡ್‌ಗಳು, ಕಲ್ಲು ಹಾಗೂ ಹಾಕಿ ಸ್ಟಿಕ್‌ಗಳನ್ನು ಹಿಡಿದು ಬೀದಿಗಿಳಿದಿದ್ದ ದಂಗೆಕೋರರು ಅಮಾಯಕರ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಬೆಂಕಿ ಹಚ್ಚಿ, ಲೂಟಿ ಮಾಡಿದ್ದರು. ಹಿಂಸಾಚಾರದಲ್ಲಿ 46 ಮಂದಿ ಮೃತಪಟ್ಟಿದ್ದು, 200ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News