ಪ್ರವಾಸಕ್ಕೆಂದು ಬಂದಿದ್ದ ವಿದ್ಯಾರ್ಥಿಗಳಿಬ್ಬರು ನೀರಿನಲ್ಲಿ ಮುಳುಗಿ ಮೃತ್ಯು
Update: 2020-03-04 20:24 IST
ಮಡಿಕೇರಿ, ಮಾ.4: ಪ್ರವಾಸಕ್ಕೆಂದು ಬಂದಿದ್ದ ವಿದ್ಯಾರ್ಥಿಗಳಿಬ್ಬರು ಕಾವೇರಿ ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಸಮೀಪದ ದುಬಾರೆಯಲ್ಲಿ ಬುಧವಾರ ನಡೆದಿದೆ.
ಗೋಣಿಕೊಪ್ಪದ ಖಾಸಗಿ ಶಾಲೆಯ ವಿದ್ಯಾರ್ಥಿಗಳಾದ ಶ್ರೇಯಸ್ ಮತ್ತು ಲೆನಿನ್ ಮೃತ ವಿದ್ಯಾರ್ಥಿಗಳು.
ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ತಂಡದ 39 ವಿದ್ಯಾರ್ಥಿಗಳು ಶಿಕ್ಷಕರೊಂದಿಗೆ ಪ್ರವಾಸಕ್ಕೆಂದು ಬುಧವಾರ ದುಬಾರೆಗೆ ಆಗಮಿಸಿದ್ದರು. ಈ ಸಂದರ್ಭ ತಂಡದಲ್ಲಿದ್ದ ಶ್ರೇಯಸ್ ಮತ್ತು ಲೆನಿನ್ ದೂರ ಉಳಿದು ಆಳವಾದ ಪ್ರದೇಶದಲ್ಲಿ ನೀರಿಗೆ ಇಳಿದಿದ್ದು, ಈ ಸಂದರ್ಭ ನೀರಿನ ಸೆಳೆತಕ್ಕೆ ಸಿಲುಕಿ ಇಬ್ಬರೂ ಮೃತಪಟ್ಟಿದ್ದಾರೆ. ದುಬಾರೆ ರ‍್ಯಾಫ್ಟ್ ಸಿಬ್ಬಂದಿಗಳ ನೆರವಿನೊಂದಿಗೆ ಮೃತದೇಹಗಳನ್ನು ನೀರಿನಿಂದ ಹೊರ ತೆಗೆಯಲಾಯಿತು.
ಶ್ರೇಯಸ್ 9ನೇ ತರಗತಿ ವಿದ್ಯಾರ್ಥಿಯಾಗಿದ್ದು ಲೆನಿನ್ 10ನೇ ತರಗತಿ ವಿದ್ಯಾರ್ಥಿ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಸಿದ್ದಾಪುರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.