ದ್ವಿತೀಯ ಪಿಯುಸಿ ಪರೀಕ್ಷೆಗೆ 8670 ವಿದ್ಯಾರ್ಥಿಗಳು ಗೈರು

Update: 2020-03-04 16:21 GMT

ಬೆಂಗಳೂರು, ಮಾ.4: ಇಂದಿನಿಂದ(ಬುಧವಾರ) ಆರಂಭವಾದ ದ್ವಿತೀಯ ಪಿಯುಸಿ ಪರೀಕ್ಷೆಯ ಮೊದಲ ದಿನವೇ ಪರೀಕ್ಷೆ ಆರಂಭವಾದ ಗಂಟೆಯೊಳಗೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು, ವಿದ್ಯಾರ್ಥಿಗಳಲ್ಲಿ ಆತಂಕ ಸೃಷ್ಟಿಸಿದೆ.

ಶಿಕ್ಷಣ ಇಲಾಖೆ ಸಾಕಷ್ಟು ಮುಂಜಾಗ್ರತಾ ಹಾಗೂ ಭದ್ರತಾ ಕ್ರಮದ ಹೊರತಾಗಿಯೂ ಪರೀಕ್ಷೆ ಆರಂಭಗೊಂಡ ಒಂದೇ ಗಂಟೆಯಲ್ಲಿ ವಿಜಯಪುರ ಜಿಲ್ಲೆಯ ಪರೀಕ್ಷಾ ಕೇಂದ್ರವೊಂದರಿಂದ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಮಹತ್ವದ ಪರೀಕ್ಷೆಯೆನಿಸಿದ ದ್ವಿತೀಯ ಪಿಯುಸಿ ಪರೀಕ್ಷೆಯ ಮೊದಲ ದಿನವೇ ಪ್ರಶ್ನೆ ಪತ್ರಿಕೆ ಸೋರಿಕೆಯ ಗುಮ್ಮ ಕಾಡಿದೆ. ಇದು ನಿರ್ದಿಷ್ಟ ಪರೀಕ್ಷಾ ಕೇಂದ್ರದ ಭದ್ರತಾ ಲೋಪವಾಗಿದ್ದು, ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ. ಈ ಸಂಬಂಧ ಯಾವುದೇ ಮರುಪರೀಕ್ಷೆ ನಡೆಸದಿರಲು ತೀರ್ಮಾನಿಸಲಾಗಿದೆ ಎಂದು ಇಲಾಖೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಮೊದಲ ದಿನವಾದ ಇಂದು(ಬುಧವಾರ) ಭೌತಶಾಸ್ತ್ರ ಹಾಗೂ ಇತಿಹಾಸ, ಬೇಸಿಕ್ ಮ್ಯಾಥ್ಸ್ ಪರೀಕ್ಷೆಯು ನಡೆದಿದೆ. ಪರೀಕ್ಷೆ ಆರಂಭವಾದ ಒಂದು ಗಂಟೆಯೊಳಗೆ ವಿಜಯಪುರ ಜಿಲ್ಲೆ ಇಂಡಿ ಪಟ್ಟಣದ ಕಾಲೇಜಿನ ಪರೀಕ್ಷಾ ಕೇಂದ್ರದಿಂದ ವಾಟ್ಸ್ ಆ್ಯಪ್ ಮೂಲಕ ಭೌತಶಾಸ್ತ್ರ ಪ್ರಶ್ನೆಪತ್ರಿಕೆ ಹೊರಗಡೆ ಹೋಗಿದೆ. ಆದರೆ, ಇದು ಸೋರಿಕೆಯಲ್ಲ, ಕಿಡಿಗೇಡಿಗಳ ಕುಚೇಷ್ಟೆ ಎಂದು ಶಿಕ್ಷಣ ಇಲಾಖೆ ಬಿಂಬಿಸಿದೆ. ಸೋರಿಕೆಗೆ ಕಾರಣರಾದ ಒಬ್ಬ ವಿದ್ಯಾರ್ಥಿಯನ್ನು ಡಿಬಾರ್ ಮಾಡಲಾಗಿದ್ದು, ಕೊಠಡಿ ಮೇಲ್ವಿಚಾರಕನನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಅಲ್ಲದೆ, ಫೋಟೋ ಕ್ಲಿಕ್ಕಿಸಿ, ವಾಟ್ಸ್ ಆ್ಯಪ್‌ನಲ್ಲಿ ಹರಿಬಿಟ್ಟ ಖಾಸಗಿ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಮತ್ತೊಂದು ವಿಶೇಷ ಏನೆಂದರೆ, ಇದೇ ಕೇಂದ್ರದಲ್ಲಿ ಸಾಮೂಹಿಕವಾಗಿ ನಕಲು ಮಾಡುತ್ತಿದ್ದಂತಹ 7 ಜನರನ್ನು ಡಿಬಾರ್ ಮಾಡಿದ್ದು, ಉಳಿದಂತೆ ರಾಜ್ಯದ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸುಗಮವಾಗಿ ಪರೀಕ್ಷೆ ನಡೆದಿದೆ.

ಘಟನೆ ವಿವರ: ವಿಜಯಪುರ ಜಿಲ್ಲೆ ಇಂಡಿ ಪಟ್ಟಣದ ಶಾಂತೇಶ್ವರ ಪದವಿಪೂರ್ವ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಪ್ರಾರಂಭವಾದ ಒಂದು ಗಂಟೆಯ ನಂತರ, ಅಂದರೆ ಬೆಳಗ್ಗೆ 11.30ರ ಸುಮಾರಿಗೆ ಕಿಡಿಗೇಡಿಯೊಬ್ಬ ಕಿಟಿಕಿ ಮೂಲಕ ಮೊಬೈಲ್ ಫೋನ್‌ನಲ್ಲಿ ಭೌತಶಾಸ ಪ್ರಶ್ನೆ ಪತ್ರಿಕೆಯ ಕೆಲವು ಪುಟಗಳ ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ. ಪ್ರಶ್ನೆ ಪತ್ರಿಕೆಯನ್ನು ತೋರಿಸುವ ಮೂಲಕ ಮೊಬೈಲ್ ಫೋನ್‌ನಲ್ಲಿ ಫೋಟೋ ತೆಗೆಯಲು ಕಿಡಿಗೇಡಿಗೆ ಪರೀಕ್ಷಾರ್ಥಿಯೊಬ್ಬ ಸಹಕರಿಸಿದ್ದ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಪಿಯು ಇಲಾಖೆ ನಿರ್ದೇಶಕಿ ಎಂ. ಕನಗವಲ್ಲಿ, ಪರೀಕ್ಷೆ ಆರಂಭವಾದ ಬಳಿಕ ಕೇಂದ್ರದ ಕಿಟಕಿಯಿಂದ ಪ್ರಶ್ನೆಪತ್ರಿಕೆಯನ್ನು ಫೋಟೋ ತೆಗೆದು ಹರಿಬಿಡಲಾಗಿದೆ. ಫೋಟೋ ತೆಗೆದವರ ಹಾಗೂ ಅದಕ್ಕೆ ಸಹಕರಿಸಿದವರ ಮೇಲೆ ಅಕ್ರಮವೆಂದು ಪರಿಗಣಿಸಿ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

ಕಿಡಿಗೇಡಿ ಬಂಧನ: ಪ್ರಕರಣಕ್ಕೆ ಸಂಬಂಧಿಸಿದಂತೆ ಭೌತಶಾಸ ಪ್ರಶ್ನೆ ಪತ್ರಿಕೆಯನ್ನು ಮೊಬೈಲ್‌ನಲ್ಲಿ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಕಿಡಿಗೇಡಿ ಬಾಗಪ್ಪ ಸಗರ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈ ಕೃತ್ಯಕ್ಕೆ ಸಹಕರಿಸಿದ ವಿದ್ಯಾರ್ಥಿಯನ್ನು ಸಹ ವಶಕ್ಕೆ ಪಡೆದು, ಕರ್ನಾಟಕ ಶಿಕ್ಷಣ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

8670 ವಿದ್ಯಾರ್ಥಿಗಳು ಗೈರು
ಇತಿಹಾಸ ಪರೀಕ್ಷೆಗೆ 2,76,588 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, 2,71,906 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 4682 ವಿದ್ಯಾರ್ಥಿಗಳು ಗೈರಾಗಿದ್ದರು. ಭೌತಶಾಸ್ತ್ರ ಪರೀಕ್ಷೆಗೆ 1,99,889 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, 1,95,926 ವಿದ್ಯಾರ್ಥಿಗಳು ಹಾಜರಾಗಿದ್ದರೆ, 3963 ವಿದ್ಯಾರ್ಥಿಗಳು ಗೈರಾಗಿದ್ದರು. ಇನ್ನು ಬೇಸಿಕ್ ಮ್ಯಾಥ್ಸ್ ಪರೀಕ್ಷೆಗೆ 8002 ವಿದ್ಯಾರ್ಥಿಗಳು ನೋಂದಾಯಿಸಿಕೊಂಡು, 7,977 ವಿದ್ಯಾರ್ಥಿಗಳು ಹಾಜರಾಗಿದ್ದು, 25 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಒಟ್ಟಾರೆ 8670 ವಿದ್ಯಾರ್ಥಿಗಳಿಂದು ಗೈರಾಗಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News