ನ್ಯಾಯ ದೇವತೆಯ ಕಣ್ಣಿನ ಬಟ್ಟೆ ಬಿಚ್ಚಿ, ನ್ಯಾಯಾಧೀಶರ ಕಣ್ಣಿಗೆ ಕಟ್ಟಬೇಕು: ಸಚಿವ ಸಿ.ಟಿ.ರವಿ

Update: 2020-03-04 17:12 GMT

ಬೆಂಗಳೂರು, ಮಾ.4: ಪ್ರತಿಯೊಬ್ಬರಿಗೂ ನ್ಯಾಯ ದೊರೆಯಬೇಕೆಂದರೆ ಮೊದಲು ನ್ಯಾಯ ದೇವತೆಯ ಕಣ್ಣಿಗೆ ಕಟ್ಟಿರುವ ಬಟ್ಟೆ ಬಿಚ್ಚಿ, ನ್ಯಾಯಾಧೀಶರ ಕಣ್ಣಿಗೆ ಕಟ್ಟಬೇಕು ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದರು.

ಬುಧವಾರ ಮಧ್ಯಾಹ್ನ ಭೋಜನ ವಿರಾಮದ ನಂತರ ವಿಧಾನಸಭೆಯಲ್ಲಿ ಭಾರತ ಸಂವಿಧಾನ ಕುರಿತ ವಿಶೇಷ ಚರ್ಚೆಯಲ್ಲಿ ಬಿಜೆಪಿ ಶಾಸಕ ಎ.ಎಸ್.ನಡಹಳ್ಳಿ ಅವರು, ನ್ಯಾಯಾಂಗ ವ್ಯವಸ್ಥೆಯಲ್ಲಿ ನ್ಯಾಯ ಕೇಳುವ ಬಡವನಿಗೆ ಒಳ್ಳೆಯ ವಕೀಲರನ್ನು ಹಿಡಿಯಬೇಕೆಂದರೆ ಲಕ್ಷಾಂತರ ರೂಪಾಯಿ ಹಣಬೇಕು ಎನ್ನುವ ಮಾತು ಭಯ ಹುಟ್ಟಿಸಿದೆ. ನ್ಯಾಯಾಂಗ ಉಳ್ಳವರ ಪಾಲು ಆಗಬಾರದು, ಇದು ಸಹಜವಾದ ನ್ಯಾಯ ಆಗಿ, ಜನಸಾಮಾನ್ಯರಿಗೆ ದೊರೆಯುವಂತೆ ಆಗಬೇಕೆಂದರು.

ಈ ವೇಳೆ ಮಧ್ಯ ಪ್ರವೇಶಿಸಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಯಾರಿಗೆ ಶಕ್ತಿ ಇಲ್ಲವೋ, ಅವರಿಗೆ ಕಾನೂನು ಸಹಾಯ ವಿಭಾಗದಿಂದ ಸರಕಾರವೇ ಉಚಿತ ವಕೀಲರನ್ನು ಕಳುಹಿಸಿಕೊಡುತ್ತದೆ ಎಂದು ಮಾಹಿತಿ ನೀಡಿದರು.

ಇದಕ್ಕೆ ಉತ್ತರಿಸಿದ ಸಿ.ಟಿ.ರವಿ, ನೀವು ವಕೀಲರನ್ನು ಕೊಡುತ್ತೀರಿ ಸರಿ. ಆದರೆ, ಅಲ್ಲಿ ನ್ಯಾಯ ದೇವತೆ ಕಣ್ಣಿಗೆ ಬಟ್ಟೆ ಕಟ್ಟಲಾಗಿದೆಯೆ ಹೊರತು, ನ್ಯಾಯಾಧೀಶರಿಗೆ ಅಲ್ಲ. ಹಿರಿಯ ವಕೀಲರು ನಿಂತು ವಕಾಲತ್ತು ಮಾಡಿದಾಗಲೇ ಒಂದು ರೀತಿಯ ಆದೇಶ ಬರುತ್ತೆ. ಹೀಗಿರುವಾಗ, ಪಾಪ ನೀವು ಕಳುಹಿಸುವ ವಕೀಲರು, ಕತ್ತು ಎತ್ತಿ ಸಹ ನೋಡುವುದಿಲ್ಲ, ಇದು ವಾಸ್ತವ ಸಂಗತಿ ಎಂದರು.

ಅದಕ್ಕೆ ಏನು ಮಾಡುತ್ತೀರಿ ಎಂದು ಜೆ.ಸಿ.ಮಾಧುಸ್ವಾಮಿಗೆ ಪ್ರಶ್ನಿಸಿದ ಅವರು, ನ್ಯಾಯ ದೊರೆಯಬೇಕೆಂದರೆ ಮೊದಲು ನ್ಯಾಯಾಧೀಶರಿಗೆ ಬಟ್ಟೆ ಕಟ್ಟಬೇಕು. ಆಗ ಫೇಸ್(ಮುಖ) ನೋಡಿ ಬರುವ ಆದೇಶದ ಬದಲಾಗಿ, ಕೇಸ್ ಆಧಾರಿತ ಆದೇಶ ಬರಲಿದೆ ಎಂದು ತಮ್ಮದೇ ದಾಟಿಯಲ್ಲಿ ಹೇಳಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News