ಕೊರೋನ ಭೀತಿ: ಸಭೆಗೆ ಮಾಸ್ಕ್ ಧರಿಸಿ ಆಗಮಿಸಿದ ಮೈಸೂರು ಮೇಯರ್
Update: 2020-03-04 23:50 IST
ಮೈಸೂರು,ಮಾ.4: ರಾಜ್ಯದೆಲ್ಲೆಡೆ ಕೊರೋನ ವೈರಸ್ ಸೋಂಕಿನ ಭೀತಿ ಹೆಚ್ಚಾಗಿದೆ. ಅಂತೆಯೇ ಕೊರೋನ ವೈರಸ್ ಭೀತಿ ಮೈಸೂರು ಮಹಾನಗರ ಪಾಲಿಕೆ ಸಭೆಗೂ ತಟ್ಟಿದೆ.
ಕೊರೋನ ವೈರಸ್ ಭೀತಿಯಿಂದಾಗಿ ಮೇಯರ್ ತಸ್ನೀಂ, ಉಪಮೇಯರ್ ಶ್ರೀಧರ್ ಹಾಗೂ ನಗರಪಾಲಿಕೆ ಸದಸ್ಯರು ಇಂದು ಮಾಸ್ಕ್ ಧರಿಸಿ ಸಭೆಯಲ್ಲಿ ಭಾಗವಹಿಸಿದರು. ಸದ್ಯ ಮೈಸೂರಿನಲ್ಲಿ ಕೊರೋನ ವೈರಸ್ ಭಯವಿಲ್ಲದಿದ್ದರೂ ಸಹ ಮೇಯರ್ ತಸ್ನೀಂ ಮಾಸ್ಕ್ ಧರಿಸಿ ಸಭೆಗೆ ಹಾಜರಾಗಿ ಅಚ್ಚರಿ ಮೂಡಿಸಿದರು.
ರಾಜ್ಯದಲ್ಲಿ ಎಲ್ಲಿಯೂ ಕೊರೋನ ವೈರಸ್ ಸೋಂಕು ದೃಢಪಟ್ಟಿಲ್ಲ. ಹೀಗಿರುವಾಗ ನೀವು ಮಾಸ್ಕ್ ಧರಿಸಿರುವುದು ಜನರಲ್ಲಿ ಮತ್ತಷ್ಟು ಆತಂಕ ಮೂಡಿಸುವುದಿಲ್ಲವೇ ಎಂದು ಪತ್ರಕರ್ತರು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್ ತಸ್ನೀಂ, ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಮಾಸ್ಕ್ ಧರಿಸಿದ್ದೇವೆ ಎಂದು ಸ್ಪಷ್ಟನೆ ನೀಡಿದರು.
ಇನ್ನು ಮೈಸೂರಿನಲ್ಲಿ ಕೊರೋನ ಬಗ್ಗೆ ಭಯಪಡುವ ಅವಶ್ಯಕತೆ ಇಲ್ಲ ಎಂದು ಜಿಲ್ಲಾ ಆರೋಗ್ಯಧಿಕಾರಿ ಹೇಳಿದ್ದಾರೆ.