ಪ್ರಿಯತಮೆಯೊಂದಿಗೆ ಗಲಾಟೆ: ಟಿಕ್ ಟಾಕ್ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾದ ಯುವಕ
ಮೈಸೂರು,ಮಾ.4: ಪ್ರೀತಿಸಿದ ಹುಡುಗಿಯೊಂದಿಗೆ ಗಲಾಟೆ ಮಾಡಿಕೊಂಡು ಮಾತು ಬಿಟ್ಟಿದ್ದ ರಿಕ್ಷಾ ಚಾಲಕನೋರ್ವ ಟಿಕ್ ಟಾಕ್ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾದ ಘಟನೆ ವಿವಿಪುರಂ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತನನ್ನು ವಿವಿ ಮೊಹಲ್ಲಾ 3ನೇ ಮೇನ್ ನಿವಾಸಿ ಲಕ್ಷ್ಮಿ ಕೋಂ ನಾಗರಾಜು ಎಂಬವರ ಪುತ್ರ ಸಿದ್ದಾರ್ಥ(24) ಎಂದು ಗುರುತಿಸಲಾಗಿದೆ. ಈತ ರಿಕ್ಷಾ ಓಡಿಸಿಕೊಂಡು ಜೀವನ ನಿರ್ವಹಿಸುತ್ತಿದ್ದ.
'ಕಳೆದ ಎರಡು ಮೂರು ವರ್ಷಗಳಿಂದ ಯಾದವಗಿರಿಯ ಬಂಬೂ ಬಜಾರ್ ನ ಹುಡುಗಿಯೋರ್ವಳನ್ನು ಪ್ರೀತಿಸುತ್ತಿದ್ದ. ಆಕೆಯೂ ಆತನನ್ನು ಪ್ರೀತಿಸುತ್ತಿದ್ದಳು. ಅಲ್ಲದೆ ಆಗಾಗ ಆಕೆ ಮನೆಗೆ ಬಂದು ಹೋಗುತ್ತಿದ್ದಳು. ಆದರೆ ಕೆಲವು ದಿನಗಳಿಂದ ಸಿದ್ದಾರ್ಥನಿಗೂ ಮತ್ತು ಆತನ ಪ್ರೇಯಸಿಗೂ ಯಾವುದೋ ವಿಚಾರಕ್ಕೆ ಗಲಾಟೆಯಾಗಿತ್ತು. ಬಳಿಕ ಇಬ್ಬರೂ ಮಾತನಾಡುತ್ತಿಲ್ಲವೆಂದು ಸಿದ್ದಾರ್ಥ ತಿಳಿಸಿದ್ದ. ಈಗ ನೇಣಿಗೆ ಶರಣಾಗಿದ್ದಾನೆಂದು ಸಿದ್ದಾರ್ಥ ತಾಯಿ ಲಕ್ಷ್ಮಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ವಿವಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.