×
Ad

ಕೃಷಿ-ನೀರಾವರಿಗೆ ಒತ್ತು, ಪರಿಶಿಷ್ಟ ಕಲ್ಯಾಣಕ್ಕೆ ಆದ್ಯತೆ: ರಾಜ್ಯದ ಅಭಿವೃದ್ಧಿಗೆ ಬಜೆಟ್‌ನಲ್ಲಿ ಭರಪೂರ ಕೊಡುಗೆ

Update: 2020-03-05 18:18 IST

ಬೆಂಗಳೂರು, ಮಾ. 5: ಕೃಷಿ-ನೀರಾವರಿಗೆ ಆದ್ಯತೆ, ಮಹಾದಾಯಿ-ಎತ್ತಿನಹೊಳೆ ಅನುಷ್ಠಾನಕ್ಕೆ ಅನುದಾನ, ಆಧುನಿಕ ಮೀನುಗಾರಿಕೆಗೆ ಮತ್ಸ್ಯ ವಿಕಾಸ, ಮಹಿಳಾ ಮೀನುಗಾರರಿಗೆ ದ್ವಿಚಕ್ರ ವಾಹನ, ಪರಿಶಿಷ್ಟರ ಕಲ್ಯಾಣಕ್ಕೆ 26,930 ಕೋಟಿ ರೂ. ಹಂಚಿಕೆ, ಗಾರ್ಮೆಂಟ್ ಮಹಿಳೆಯರಿಗೆ ‘ವನಿತಾ ಸಂಗಾತಿ’ ಉಚಿತ ಬಸ್‌ಪಾಸ್, ಶಾಲಾ ಮಕ್ಕಳಿಗೆ ‘ಸಂಭ್ರಮ ಶನಿವಾರ’, ರಸ್ತೆ ಅಭಿವೃದ್ಧಿಗೆ ‘ಗ್ರಾಮೀಣ ಸುಮಾರ್ಗ’, ಮನೆ-ಮನೆಗೆ ಗಂಗೆ, ಮೆಟ್ರೋ ವಿಸ್ತರಣೆ ಸೇರಿ ರಾಜ್ಯದ ಅಭಿವೃದ್ಧಿಗೆ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ಭರಪೂರ ಕೊಡುಗೆಗಳನ್ನು ಪ್ರಕಟಿಸಿದ್ದಾರೆ.

ಗುರುವಾರ ವಿಧಾನಸಭೆಯಲ್ಲಿ 2020-21ನೆ ಸಾಲಿನ ಆಯವ್ಯಯ ಮಂಡಿಸಿದ ಯಡಿಯೂರಪ್ಪ, ನೀರಿನ ಭದ್ರತೆ, ಭೂ ಸಂಚಯ ಮತ್ತು ಸಾಮೂಹಿಕ ಕೃಷಿ, ಕೃಷಿ ಉತ್ಪನ್ನಗಳ ಸಂಸ್ಕರಣೆ, ಮಾರುಕಟ್ಟೆ ಉತ್ತೇಜನ, ಕೃಷಿ-ತೋಟಗಾರಿಕೆಯನ್ನು ಉದ್ದಿಮೆಯಾಗಿ ಪರಿಗಣಿಸಲು ಹೊಸ ಕೃಷಿ ನೀತಿ ಸೇರಿ ಒಟ್ಟು 2,37,893 ಕೋಟಿ ರೂ.ಬಜೆಟ್ ಮಂಡಿಸಿದರು.

ಹಸಿರು ಶಾಲು ಹೊದ್ದು ವಿಧಾನಸಭೆಗೆ ನಿಗದಿತ 11 ಗಂಟೆಗೆ ಆಗಮಿಸಿದ ಸಿಎಂ ಬಿಎಸ್‌ವೈ, ಕೃಷಿ ಮತ್ತು ಪೂರಕ ಚಟುವಟಿಕೆಗಳು, ಸರ್ವೋದಯ ಮತ್ತು ಕ್ಷೇಮಾಭಿವೃದ್ದಿ, ಆರ್ಥಿಕ ಅಭಿವೃದ್ಧಿಗೆ ಪ್ರಚೋದನೆ, ಬೆಂಗಳೂರು ಸಮಗ್ರ ಅಭಿವೃದ್ಧಿ, ಸಂಸ್ಕೃತಿ ಪರಂಪರೆ ಹಾಗೂ ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆ, ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಸೇವೆಗಳು ಎಂಬ ವಲಯವಾರು ಬಜೆಟ್ ಮಂಡನೆ ಮಾಡಿದರು.

ಆರ್ಥಿಕ ಕುಸಿತ, ಕೇಂದ್ರದ ಅನುದಾನದ ಕಡಿತ ಹಾಗೂ ನಿರೀಕ್ಷಿತ ಸಂಪನ್ಮೂಲ ಕ್ರೋಡೀಕರಣವಾಗದ ಹಿನ್ನೆಲೆಯಲ್ಲಿ ನಷ್ಟ ಸರಿದೂಗಿಸಲು ಪೆಟ್ರೋಲ್ ಮತ್ತು ಡೀಸೆಲ್ ತೆರಿಗೆಯನ್ನು ಕ್ರಮವಾಗಿ ಲೀಟರ್‌ಗೆ 1.60 ರೂ. ಹಾಗೂ 1.59 ರೂ.ನಷ್ಟು ಹೆಚ್ಚಳ ಮೂಲಕ ಬಡ-ಮಧ್ಯಮ ವರ್ಗದವರ ಮೇಲೆ ತೆರಿಗೆ ಹೊರೆ ಹೇರಿದ್ದಾರೆ. ಅಲ್ಲದೆ, ಮದ್ಯದ ದರಗಳ ಮೇಲೆ ಶೇ.6ರಷ್ಟು ಹೆಚ್ಚಳ ಮಾಡಿದ್ದು, ಮದ್ಯ ಪ್ರಿಯರಿಗೆ ಶಾಕ್ ಕೊಟ್ಟಿದ್ದಾರೆ.

ಪ್ರತ್ಯೇಕ ಪೌರ ನಿಗಮ ಕಾಯ್ದೆ: ಪರಿಣಾಮಕಾರಿ ಆಡಳಿತ-ನಾಗರಿಕ ಸೇವೆಗೆ ಬೆಂಗಳೂರು ನಗರಕ್ಕೆ ಸೀಮಿತವಾಗಿ ಪ್ರತ್ಯೇಕ ಪೌರನಿಗಮ ಕಾಯ್ದೆ ರಚನೆ, ನಗರದ ಸರ್ವತೋಮುಖ ಅಭಿವೃದ್ಧಿಗೆ 8,344 ಕೋಟಿ ರೂ. ಸಿಎಂ ನವ ನಗರೋತ್ಥಾನ ಯೋಜನೆ, ನಗರದ ಘನತ್ಯಾಜ್ಯ ನಿರ್ವಹಣೆಗೆ ಶುಭ್ರ ಬೆಂಗಳೂರು ಯೋಜನೆಯಡಿ 999 ಕೋಟಿ ರೂ.ಸೇರಿ ಬೆಂಗಳೂರು ಅಭಿವೃದ್ದಿಗೆ 8,772ಕೋಟಿ ರೂ. ನೀಡಲಾಗಿದೆ ಎಂದು ಮುಖ್ಯಮಂತ್ರಿ ಪ್ರಕಟಿಸಿದರು.

ಬೆಂಗಳೂರಿನ 1 ಲಕ್ಷ ಗಾರ್ಮೆಂಟ್ ಮಹಿಳಾ ಕಾರ್ಮಿಕರಿಗೆ ‘ವನಿತಾ ಸಂಗಾತಿ’ ಉಚಿತ ಬಸ್‌ಪಾಸ್ ಮಾಸಿಕ ಬಸ್‌ಪಾಸ್, ಮಣ್ಣು, ನೀರು ಪರೀಕ್ಷೆ ಮತ್ತು ರೈತರಿಗೆ ತಾಂತ್ರಿಕ ನೆರವು ನೀಡಲು ಸಂಚಾರಿ ಕೃಷಿ ಹೆಲ್ತ್ ಕ್ಲಿನಿಕ್, ಸಾವಯವ ಕೃಷಿ ಪ್ರೋತ್ಸಾಹಕ್ಕೆ 200 ಕೋಟಿ ರೂ. ಒದಗಿಸಲಾಗುವುದು ಎಂದು ಪ್ರಕಟಿಸಿದರು.

ಅಂತರ್ಜಲ ಸ್ಥಿತಿ ಗಂಭೀರವಾಗಿರುವ 76 ತಾಲೂಕುಗಳಲ್ಲಿ ಮುಂದಿನ 3 ವರ್ಷದಲ್ಲಿ ನಾಲ್ಕು ಲಕ್ಷ ಹೆಕ್ಟೇರ್‌ನಲ್ಲಿ 810 ಅತಿ ಸಣ್ಣ ಜಲಾನಯನಗಳಲ್ಲಿ ಜಲಾಮೃತ ಯೋಜನೆ ಅನುಷ್ಠಾನ. ಹೊಸದಾಗಿ ತೋಟಗಾರಿಕೆ ಕೃಷಿ ಪದ್ಧತಿಗೆ ವರ್ಗಾವಣೆಗೊಳ್ಳುವ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಪ್ರತಿ ಹೆಕ್ಟೇರಿಗೆ 5 ಸಾವಿರ ರೂ.ನಂತೆ ಗರಿಷ್ಠ 10 ಸಾವಿರ ರೂ.ನೆರವು ನೀಡಲಾಗುವುದು ಎಂದು ಹೇಳಿದರು.

ಮುಲ್ಕಿಯಲ್ಲಿ 2 ಕೋಟಿ ರೂ.ವೆಚ್ಚದಲ್ಲಿ ಹಿನ್ನೀರು ಮೀನು ಮರಿ ಉತ್ಪಾದನಾ ಕೇಂದ್ರ ಸ್ಥಾಪನೆ. ಮಂಗಳೂರು ತಾಲೂಕು ಕುಳಾಯಿಯಲ್ಲಿ ನಿರ್ಮಿಸಲಾಗುತ್ತಿರುವ ಹೊಸ ಮೀನುಗಾರಿಕೆ ಬಂದರಿನಲ್ಲಿ 12.5 ಕೋಟಿ ರೂ.ವೆಚ್ಚದಲ್ಲಿ ಆಧುನಿಕ ಕರಾವಳಿ ಮೀನು ರಫ್ತು ಸ್ಥಾವರ ಸ್ಥಾಪನೆ.

ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ನೀಡಿರುವ ಮಧ್ಯಮಾವಧಿ ಹಾಗೂ ದೀರ್ಘಾವಧಿ ಕೃಷಿ ಸುಸ್ತಿ ಸಾಲಗಳ ಮೇಲಿನ ಬಡ್ಡಿ ಮನ್ನಾ. 466 ಕೋಟಿ ರೂ.ನೆರವು ನೀಡಿದ್ದು, 92 ಸಾವಿರ ರೈತರಿಗೆ ಪ್ರಯೋಜನವಾಗಲಿದೆ ಎಂದು ತಿಳಿಸಿದರು.

ಶಿವಮೊಗ್ಗ ಮತ್ತು ಮೈಸೂರು ಜಿಲ್ಲೆಗಳಲ್ಲಿ ಬುಡಕಟ್ಟು ಜನರ ಪಾರಂಪರಿಕ ವೈದ್ಯಪದ್ಧತಿ ಮತ್ತು ಆಚರಣೆಗಳ ದಾಖಲೀಕರಣ ಮತ್ತು ಆಯ್ದ ಔಷಧಿಗಳ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಎರಡು ಕೋಟಿ ರೂ. ಅನುದಾನ. ‘ಚರ್ಮ ಶಿಲ್ಪ’ಎಂಬ ಯಂತ್ರಾಧಾರಿತ ಉತ್ಪಾದನಾ ಘಟಕಗಳ ಸ್ಥಾಪನೆಗೆ 250 ಚರ್ಮ ಕುಶಲಕರ್ಮಿಗಳಿಗೆ ಡಾ.ಬಾಬು ಜಗಜೀವನ್‌ರಾಮ್ ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮದ ಮೂಲಕ ಘಟಕ ವೆಚ್ಚ ಸಹಾಯಧನ ಹೆಚ್ಚಳ ಮಾಡಲಾಗಿದೆ ಎಂದರು.

ಅಲೆಮಾರಿ/ಅರೆ ಅಲೆಮಾರಿ ಸಮುದಾಯಗಳ ಸಮಗ್ರ ಅಭಿವೃದ್ಧಿಗೆ 78 ಕೋಟಿ ರೂ., ಹಿಂದುಳಿದ ಸಮುದಾಯಗಳ ಅಭಿವೃದ್ಧಿಗೆ ಹಾಗೂ ವಿವಿಧ ನಿಗಮಗಳಿಗೆ 125 ಕೋಟಿ ರೂ., ಇ-ವಾಣಿಜ್ಯ ಉತ್ಪನ್ನಗಳನ್ನು ಸರಬರಾಜು ಮಾಡುವ ಯುವಕರಿಗೆ ಬೈಕ್ ಕೊಳ್ಳಲು ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಸಾವಿರ ಯುವಕರಿಗೆ ತಲಾ 25 ಸಾವಿರ ರೂ.ಗಳಂತೆ 2.5ಕೋಟಿ ರೂ.ಆರ್ಥಿಕ ನೆರವು. 

ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಿರುವ ಅಧಿಸೂಚಿತವಲ್ಲದ ಕೊಳಚೆ ಪ್ರದೇಶಗಳ ಅಭಿವೃದ್ಧಿಗೆ 200 ಕೋಟಿ ರೂ., ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಐದು ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ಪದವಿ ಪೂರ್ವ ಕಾಲೇಜನ್ನಾಗಿ ಉನ್ನತೀಕರಿಸಲು ಕ್ರಮ. ಕ್ರೈಸ್ತ ಸಮುದಾಯದವರ ಸರ್ವತೋಮುಖ ಅಭಿವೃದ್ಧಿಗೆ 200 ಕೋಟಿ ರೂ.ಅನುದಾನ ನೀಡಲಾಗಿದೆ ಎಂದರು.

ರಾಜ್ಯದ ಆಯ್ದ 5 ಜಿಲ್ಲೆಗಳಲ್ಲಿ 5 ಕೋಟಿ ರೂ.ವೆಚ್ಚದಲ್ಲಿ ಬಡ ರೋಗಿಗಳಿಗೆ ಉಚಿತ ಪೆರಿಟೋನಿಯಲ್ ಡಯಾಲಿಸಿಸ್ ಸೇವೆ. ಕೆ.ಸಿ.ಜನರಲ್ ಮತ್ತು ಇತರೆ 5 ಆಸ್ಪತ್ರೆಗಳ ತುರ್ತು ವೈದ್ಯಕೀಯ ಚಿಕಿತ್ಸಾ ವಿಭಾಗಗಳನ್ನು ಮೇಲ್ದರ್ಜೆಗೇರಿಸಿ ಉತ್ಕೃಷ್ಟತಾ ಕೇಂದ್ರಗಳನ್ನಾಗಿ ಅಭಿವೃದ್ಧಿಗೆ 5 ಕೋಟಿ ರೂ., ಹಾವೇರಿ ಜಿಲ್ಲೆಯಲ್ಲಿ 20 ಕೋಟಿ ರೂ. ವೆಚ್ಚದಲ್ಲಿ 20 ಹಾಸಿಗೆಗಳ ಆಯುಷ್ ಸಂಯುಕ್ತ ಆಸ್ಪತ್ರೆ ಪ್ರಾರಂಭಿಸಲಾಗುವುದು ಎಂದರು.

ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ 5 ಕೋಟಿ ರೂ., ಮಠಗಳ ಅಭಿವೃದ್ಧಿಗೆ ಆರ್ಥಿಕ ಸಹಾಯ, 60 ವರ್ಷ ಮೀರಿದ ಆಯ್ದ ಬಿಪಿಎಲ್ ಫಲಾನುಭವಿಗಳಿಗೆ ಪ್ರವಾಸಕ್ಕೆ ‘ಜೀವನ ಚೈತ್ರ ಯಾತ್ರೆ’, ಐತಿಹಾಸಿಕ ಮಹತ್ವವುಗಳ್ಳ ದೇವಳ, ಪ್ರಾಚೀನ ಸ್ಮಾರಕಗಳ ಪುನರುಜ್ಜೀವನಕ್ಕೆ ‘ಸಂರಕ್ಷಣಾ’ ಯೋಜನೆ ಜಾರಿ ಮಾಡಲಾಗುವುದು ಎಂದು ಯಡಿಯೂರಪ್ಪ ಘೋಷಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News