×
Ad

ಸಿಎಂ ಯಡಿಯೂರಪ್ಪ ಮಂಡಿಸಿದ ರಾಜ್ಯ ಬಜೆಟ್ ನ ಸಂಪೂರ್ಣ ಮಾಹಿತಿ ಇಲ್ಲಿದೆ...

Update: 2020-03-05 19:10 IST

ಬೆಂಗಳೂರು, ಮಾ.5: ಕೃಷಿ-ನೀರಾವರಿಗೆ ಆದ್ಯತೆ, ಮಹಾದಾಯಿ-ಎತ್ತಿನಹೊಳೆ ಅನುಷ್ಠಾನಕ್ಕೆ ಅನುದಾನ, ಆಧುನಿಕ ಮೀನುಗಾರಿಕೆಗೆ ಮತ್ಸ್ಯ ವಿಕಾಸ, ಮಹಿಳಾ ಮೀನುಗಾರರಿಗೆ ದ್ವಿಚಕ್ರ ವಾಹನ, ಪರಿಶಿಷ್ಟರ ಕಲ್ಯಾಣಕ್ಕೆ 26,930 ಕೋಟಿ ರೂ. ಹಂಚಿಕೆ, ಗಾರ್ಮೆಂಟ್ ಮಹಿಳೆಯರಿಗೆ ‘ವನಿತಾ ಸಂಗಾತಿ’ ಉಚಿತ ಬಸ್‌ಪಾಸ್, ಶಾಲಾ ಮಕ್ಕಳಿಗೆ ‘ಸಂಭ್ರಮ ಶನಿವಾರ’, ರಸ್ತೆ ಅಭಿವೃದ್ಧಿಗೆ ‘ಗ್ರಾಮೀಣ ಸುಮಾರ್ಗ’, ಮನೆ-ಮನೆಗೆ ಗಂಗೆ, ಮೆಟ್ರೋ ವಿಸ್ತರಣೆ ಸೇರಿ ರಾಜ್ಯದ ಅಭಿವೃದ್ಧಿಗೆ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ಭರಪೂರ ಕೊಡುಗೆಗಳನ್ನು ಪ್ರಕಟಿಸಿದ್ದಾರೆ.

ಯಡಿಯೂರಪ್ಪ ಮಂಡಿಸಿರುವ ಬಜೆಟ್ ನ ಸಂಪೂರ್ಣ ವಿವರ ಇಲ್ಲಿದೆ...

ರಾಜಧಾನಿ ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಮುಂದಾಗಿರುವ ರಾಜ್ಯ ಸರಕಾರವು, ಪರಿಣಾಮಕಾರಿ ಆಡಳಿತ ಹಾಗೂ ನಾಗರಿಕ ಸೇವೆಗಳನ್ನು ನೀಡಲು, ಬೆಂಗಳೂರು ನಗರಕ್ಕೆ ಸೀಮಿತವಾಗಿ, ಪ್ರತ್ಯೇಕ ಪೌರನಿಗಮ ಕಾಯ್ದೆ ರಚನೆ ಮಾಡುವುದಾಗಿ 2020-21ನೆ ಸಾಲಿನ ಬಜೆಟ್‌ನಲ್ಲಿ ಘೋಷಿಸಿದೆ.

ಬೆಂಗಳೂರು ನಗರದ ಸರ್ವತೋಮುಖ ಅಭಿವೃದ್ಧಿಗೆ 8344 ಕೋಟಿ ರೂ. ಮೊತ್ತದ ‘ಮುಖ್ಯಮಂತ್ರಿಗಳ ನವ ನಗರೋತ್ಥಾನ ಯೋಜನೆ’ ಅನುಷ್ಠಾನಗೊಳಿಸಲು ಕ್ರಮವಹಿಸಲಾಗಿದೆ. ಬೆಂಗಳೂರು ನಗರದ ಘನತ್ಯಾಜ್ಯ ನಿರ್ವಹಣೆಗೆ ಶುಭ್ರ ಬೆಂಗಳೂರು ಯೋಜನೆಯಡಿ 999 ಕೋಟಿ ರೂ. ಅನುದಾನದ ಕ್ರಿಯಾಯೋಜನೆ ಅನುಷ್ಠಾನ.

ಬೆಂಗಳೂರು ನಗರದ ಕೆರೆಗಳ ಸರ್ವತೋಮುಖ ಅಭಿವೃದ್ಧಿಗೆ ಶುಭ್ರ ಬೆಂಗಳೂರು ಯೋಜನೆಯಡಿ 100 ಕೋಟಿ ರೂ. ಹಾಗೂ ಮುಖ್ಯಮಂತ್ರಿಗಳ ನವ ನಗರೋತ್ಥಾನ ಕ್ರಿಯಾ ಯೋಜನೆಯಡಿ 317 ಕೋಟಿ ರೂ.ನಿಗದಿಗೊಳಿಸಲಾಗಿದೆ. ಬೆಂಗಳೂರು ನಗರದ ಬೃಹತ್ ನೀರುಗಾಲುವೆಗಳ ಜಾಲದಲ್ಲಿರುವ ಕೊರತೆಗಳನ್ನು Missing gap ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು 200 ಕೋಟಿ ರೂ. ಅನುದಾನ.

ಬೆಂಗಳೂರು ನಗರಕ್ಕೆ ಸೇರ್ಪಡೆಗೊಂಡಿರುವ 110 ಹಳ್ಳಿಗಳಲ್ಲಿ ದುಃಸ್ಥಿತಿಯಲ್ಲಿರುವ ರಸ್ತೆಗಳ ಪುನಶ್ಚೇತನಕ್ಕೆ ಮುಂದಿನ ಎರಡು ವರ್ಷಗಳಿಗೆ 1000 ಕೋಟಿ ರೂ. ಅನುದಾನ ನೀಡಲು ಉದ್ದೇಶಿಸಲಾಗಿದ್ದು, 2020-21ನೇ ಸಾಲಿನ ಬಜೆಟ್‌ನಲ್ಲಿ 500 ಕೋಟಿ ರೂ.ಗಳನ್ನು ಒದಗಿಸಲಾಗುವುದು. ಕರ್ನಾಟಕ ವಿದ್ಯುತ್ ನಿಗಮದಿಂದ ರಾಮನಗರ ಜಿಲ್ಲೆಯ ಬಿಡದಿಯಲ್ಲಿ ಬಿಬಿಎಂಪಿ ಸಹಯೋಗದೊಂದಿಗೆ 210 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರಿನ ಬೇರ್ಪಡಿಸಿದ ತ್ಯಾಜ್ಯ ಬಳಸಿಕೊಂಡು 11.5 ಮೆಗಾ ವ್ಯಾಟ್ ಸಾಮರ್ಥ್ಯದ ಹೊಸ waste to energy (ತ್ಯಾಜ್ಯದಿಂದ ವಿದ್ಯುತ್) ವಿದ್ಯುತ್ ಉತ್ಪಾದನಾ ಕೇಂದ್ರ ಸ್ಥಾಪಿಸಿ, ವಾರ್ಷಿಕ 70 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡುವ ಗುರಿ ಹೊಂದಲಾಗಿದೆ.

ಬೆಂಗಳೂರಿನಲ್ಲಿರುವ ಆಯ್ದ ಸರಕಾರಿ ಕಚೇರಿಗಳಲ್ಲಿ ಮಹಿಳಾ ಸ್ನೇಹಿ ವಾತಾವರಣ ನಿರ್ಮಿಸಲು ಮಕ್ಕಳ ಪಾಲನಾ ಕೇಂದ್ರಗಳು, ಸ್ಯಾನಿಟರಿ ನ್ಯಾಪ್‌ಕಿನ್ ಡಿಸ್ಪೆನ್ಸರ್ ಮತ್ತು ಇತರೆ ಸೌಲಭ್ಯಗಳನ್ನು ಹೊಂದಿರುವ ಮಹಿಳಾ ವಿಶ್ರಾಂತಿ ಕೋಣೆಗಳನ್ನು ‘ಬೆಂಗಳೂರು ಸ್ಮಾರ್ಟ್ ಸಿಟಿ’ ಯೋಜನೆಯಡಿ ತೆರೆಯಲು ಉದ್ದೇಶಿಸಲಾಗಿದೆ. ಬೆಂಗಳೂರಿನ ವಿವಿಧ ಭಾಗಗಳಲ್ಲಿ ನಾಲ್ಕು ವಿದ್ಯುತ್ ಚಿತಾಗಾರಗಳ ಸ್ಥಾಪನೆ.

ಕಾವೇರಿ ನೀರು ಸರಬರಾಜು ಐದನೇ ಹಂತದ ಯೋಜನೆಯಡಿ ಬೆಂಗಳೂರು ನಗರಕ್ಕೆ 775 ದಶಲಕ್ಷ ಲೀಟರ್ ನೀರನ್ನು ತರಲು ಉದ್ದೇಶಿಸಲಾಗಿದ್ದು, ಈ ಯೋಜನೆಯನ್ನು 5550 ಕೋಟಿ ರೂ. ವೆಚ್ಚದಲ್ಲಿ 2023ರ ಅಂತ್ಯಕ್ಕೆ ಪೂರ್ಣಗೊಳಿಸಲಾಗುವುದು. 2020-21ನೇ ಸಾಲಿನಲ್ಲಿ ಬೆಂಗಳೂರು ಅಭಿವೃದ್ಧಿ ವಲಯಕ್ಕೆ ಒಟ್ಟಾರೆಯಾಗಿ 8772 ಕೋಟಿ ರೂ.ಗಳನ್ನು ಒದಗಿಸಲಾಗಿದೆ.

ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೆಟ್ರೋ ಸೇವೆ

ನಮ್ಮ ಮೆಟ್ರೋ ಯೋಜನೆಯಡಿ 2020-21ನೇ ಸಾಲಿನಲ್ಲಿ 14500 ಕೋಟಿ ರೂ.ಅಂದಾಜು ವೆಚ್ಚದಲ್ಲಿ ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಕೆ.ಆರ್.ಪುರಂ ಹಾಗೂ ಹೆಬ್ಬಾಳ ಮುಖಾಂತರ ಬೆಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ 56 ಕಿ.ಮೀ.ಉದ್ದದ ಹೊರ ವರ್ತುಲ ರಸ್ತೆ-ವಿಮಾನ ನಿಲ್ದಾಣ ಮೆಟ್ರೋ ರೈಲು ಮಾರ್ಗ ಆರಂಭ.

ಮೈಸೂರು ರಸ್ತೆಯಲ್ಲಿ ಕೆಂಗೇರಿಯವರೆಗೆ ಮತ್ತು ಕನಕಪುರ ರಸ್ತೆಯಲ್ಲಿ ಅಂಜನಾಪುರ ಟೌನ್‌ಶಿಪ್‌ವರೆಗೆ ಒಟ್ಟು 12.8 ಕಿ.ಮೀ. ಉದ್ದದ ಮೆಟ್ರೋ ಕಾಮಗಾರಿ ಪೂರ್ಣಗೊಳಿಸಿ, 2020 ರಲ್ಲಿ ಸೇವೆ ಒದಗಿಸಲು ಕ್ರಮ. ಮೆಟ್ರೋ ಪ್ರಯಾಣಿಕರಲ್ಲದ ಪಾದಚಾರಿಗಳಿಗೆ 24 ಮೆಟ್ರೋ ನಿಲ್ದಾಣಗಳ ಮೂಲಕ ಮೇಲ್ಸೇತುವೆ ಸೌಲಭ್ಯ. ಹೆಬ್ಬಾಳದಿಂದ ಜೆ.ಪಿ.ನಗರದವರೆಗೆ ‘ಹೊರ ವರ್ತುಲ ರಸ್ತೆ-ಪಶ್ಚಿಮ ಮೆಟ್ರೋ’ ಹಾಗೂ ‘ಮಾಗಡಿ ರಸ್ತೆ ಮೆಟ್ರೋ ಲೈಟ್’ನ ಒಟ್ಟು 44 ಕಿ.ಮೀ.ಉದ್ದದ ಮೆಟ್ರೋ ರೈಲು ಮಾರ್ಗಗಳಿಗೆ ವಿಸ್ತೃತ ಯೋಜನಾ ವರದಿಯನ್ನು ಸಿದ್ಧಪಡಿಸಿ, ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ.

18 ಸಾವಿರ ಕೋಟಿ ರೂ.ಗಳ ಸಬ್-ಅರ್ಬನ್ ರೈಲು ಯೋಜನೆಗೆ ರಾಜ್ಯ ಸರಕಾರದ ವತಿಯಿಂದ ಪ್ರಸಕ್ತ ಸಾಲಿನಲ್ಲಿ 500 ಕೋಟಿ ರೂ. ಅನುದಾನ. ಬೈಯಪ್ಪನಹಳ್ಳಿ-ಹೊಸೂರು ಹಾಗೂ ಯಶವಂತಪುರ-ಚನ್ನಸಂದ್ರ ಜೋಡಿ ರೈಲು ಮಾರ್ಗ ಯೋಜನೆಯ ಶೇ.50ರಷ್ಟು ವೆಚ್ಚ ಭರಿಸಲು ರಾಜ್ಯದ ನಿರ್ಧಾರ.

ಸಾರ್ವಜನಿಕ ಸಾರಿಗೆ ಬಳಕೆ ಹೆಚ್ಚಿಸಲು ಮೂಲಸೌಲಭ್ಯ, ಟ್ರಾನ್ಸಿಟ್ ಆಧಾರಿತ ಬೆಳವಣಿಗೆ ಹಾಗೂ ಇತರ ಅಗತ್ಯ ನಿಯಂತ್ರಣಾ ಕ್ರಮಗಳಿಗೆ ಆದ್ಯತೆ. ಹೆಬ್ಬಾಳ, ಸಿಲ್ಕ್ ಬೋರ್ಡ್ ಹಾಗೂ ಕೆ.ಆರ್.ಪುರಂ ಜಂಕ್ಷನ್‌ಗಳಲ್ಲಿ ಸಂಚಾರ ಸಾಮರ್ಥ್ಯ ಹೆಚ್ಚಳಕ್ಕೆ ಕ್ರಮ. ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಕರ್ನಾಟಕ ರಸ್ತೆ ಅಭಿವೃದ್ಧಿ ಪ್ರಾಧಿಕಾರದ ಮೂಲಕ ವಾಹನ ದಟ್ಟಣೆ ಇರುವ ರಸ್ತೆಗಳ ಅಭಿವೃದ್ಧಿಗೆ 500 ಕೋಟಿ ರೂ. ಅನುದಾನ.

ಬಿಎಂಟಿಸಿಗೆ 2390 ಹೊಸ ಬಸ್ಸುಗಳ ಸೇರ್ಪಡೆ

ಸಮೂಹ ಸಾರಿಗೆಯನ್ನು ಉತ್ತೇಜಿಸಲು ಹಾಗೂ ಮೆಟ್ರೋ ಪ್ರಯಾಣಿಕರಿಗೆ ಸಮರ್ಪಕ ಮೆಟ್ರೋ ಫೀಡರ್ ಸಾರಿಗೆ ಸೌಲಭ್ಯ ಒದಗಿಸಲು ಕೇಂದ್ರ ಹಾಗೂ ರಾಜ್ಯ ಸರಕಾರದ ವಿವಿಧ ಯೋಜನೆಗಳಡಿ 890 ಎಲೆಕ್ಟ್ರಿಕ್ ಬಸ್ಸುಗಳು ಸೇರಿದಂತೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ 2390 ಹೊಸ ಬಸ್ಸುಗಳ ಸೇರ್ಪಡೆ.

ಈ ಪೈಕಿ 1500 ಡಿಸೇಲ್ ಬಸ್ಸುಗಳನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು 600 ಕೋಟಿ ರೂ.ಗಳ ವೆಚ್ಚದಲ್ಲಿ ಖರೀದಿಸುತ್ತಿದೆ. ಇದಕ್ಕಾಗಿ ರಾಜ್ಯ ಸರಕಾರವು 100 ಕೋಟಿ ರೂ.ಗಳನ್ನು ಏಳು ವರ್ಷದ ಅವಧಿಗೆ ಸಾಲದ ಸಹಾಯಧನದ ರೂಪದಲ್ಲಿ ಬಿಎಂಟಿಸಿಗೆ ನೀಡಲಿದೆ.

ಕೇಂದ್ರ ಸರಕಾರದ ಫೇಮ್-2 ಅಡಿಯಲ್ಲಿ 300 ಹವಾನಿಯಂತ್ರಿತ ಎಲೆಕ್ಟ್ರಿಕ್ ಬಸ್ಸುಗಳನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಸೇರಿಸಲಾಗುತ್ತಿದೆ. ಇದೇ ಮಾದರಿಯಲ್ಲಿ ರಾಜ್ಯ ಸರಕಾರವು 500 ಸಾಮಾನ್ಯ ಎಲೆಕ್ಟ್ರಿಕ್ ಬಸ್ಸುಗಳನ್ನು ಖರೀದಿಸಲು 100 ಕೋಟಿ ರೂ.ಗಳ ಅನುದಾನ ನೀಡಲಿದೆ.

ಸಾರ್ವಜನಿಕ ಸಾರಿಗೆಯ ಕೊನೆಯ ಮೈಲಿನ ಸಂಪರ್ಕ ಸುಧಾರಣೆಗೆ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಯೋಜನೆ. ಸಂಚಾರ ದಟ್ಟಣೆಯ 12 ಕಾರಿಡಾರ್‌ಗಳಲ್ಲಿ ಎರಡನೆ ಹಂತದ ಬಸ್ ಆದ್ಯತಾ ಪಥ ಅನುಷ್ಠಾನ. ರಸ್ತೆ ಸುರಕ್ಷತಾ ಚಟುವಟಿಕೆ ಕೈಗೊಳ್ಳುವ ರಸ್ತೆ ಸುರಕ್ಷತಾ ನಿಧಿಗೆ 200 ಕೋಟಿ ರೂ.ಅನುದಾನ.

ಬೆಂಗಳೂರು ನಗರದಲ್ಲಿನ ಭಾರಿ ವಾಹನಗಳ ದಟ್ಟಣೆ ತಗ್ಗಿಸಲು ನಗರದ ಹೊರವಲಯದಲ್ಲಿ ‘Integrated Multi Modal Transport Hub’ ಅನ್ನು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲು ಅನುವಾಗುವಂತೆ ಕಾರ್ಯಾಧ್ಯಯನ ನಡೆಸಲಾಗುವುದು.

ಹೆಬ್ಬಾಳ, ಸಿಲ್ಕ್‌ಬೋರ್ಡ್ ಹಾಗೂ ಕೆ.ಆರ್.ಪುರಂ ಜಂಕ್ಷನ್‌ಗಳಲ್ಲಿ ಸಂಚಾರ ಸಾಮರ್ಥ್ಯವನ್ನು ಹೆಚ್ಚಳಕ್ಕೆ ಕ್ರಮ. ಬೆಂಗಳೂರು ನಗರ ವ್ಯಾಪ್ತಿಯಲ್ಲಿರುವ 12 ಅಧಿಕ ಸಾಂದ್ರತೆ ವಲಯಗಳನ್ನು ರಾಜ್ಯ ರಸ್ತೆ ಅಭಿವೃದ್ಧಿ ಪ್ರಾಧಿಕಾರದ ಮೂಲಕ ಅಭಿವೃದ್ಧಿಗೊಳಿಸಿ 500 ಕೋಟಿ ರೂ.ವೆಚ್ಚ ಮಾಡಲಾಗುವುದು.

ರಾಜ್ಯದಲ್ಲಿ ಸಂಚರಿಸುವ ಪ್ರಯಾಣಿಕ ಮತ್ತು ಸರಕು ಸಾಗಣೆ ವಾಹನಗಳಲ್ಲಿ 20 ಕೋಟಿ ರೂ.ಗಳ ವೆಚ್ಚದಲ್ಲಿ ‘ವೆಹಿಕಲ್ ಲೊಕೇಶನ್ ಟ್ರಾಕಿಂಗ್’ ವ್ಯವಸ್ಥೆಯನ್ನು ಅವಳವಡಿಸಲಾಗುವುದು. ಇದಕ್ಕೆ ರಸ್ತೆ ಸುರಕ್ಷತಾ ನಿಧಿಯಿಂದ ಎಂಟು ಕೋಟಿ ರೂ.ಗಳನ್ನು ನೀಡಲಾಗುವುದು. ಬೆಂಗಳೂರಿನ ಜನನಿಬಿಡ ಪ್ರದೇಶದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಅಂಡರ್ ಗ್ರೌಂಡ್ ವಾಹನ ಪಾರ್ಕಿಂಗ್ ಯೋಜನೆ ಜಾರಿ.

ಬೆಂಗಳೂರು ಜಲಮಂಡಲಿಯ ತ್ಯಾಜ್ಯ ನೀರು ಸಂಸ್ಕರಣೆಯ ಸಾಮರ್ಥ್ಯವು 2020-21ನೇ ಸಾಲಿನ ಅಂತ್ಯಕ್ಕೆ 1587 ದಶಲಕ್ಷ ಲೀಟರ್‌ಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಹಳೆಯ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ ಪುನರುಜ್ಜೀವನ ಮತ್ತು ನವೀಕರಣಕ್ಕೆ 1000 ಕೋಟಿ ರೂ. ಅನುದಾನ ಒದಗಿಸುವುದಾಗಿದೆ ತಿಳಿಸಲಾಗಿದೆ.

ಬೆಂಗಳೂರು ನಗರದಲ್ಲಿರುವ ಎಲ್ಲ ಗ್ರಾಹಕರಿಗೆ ಅತೀ ವೇಗದ ಇಂಟರ್ನೆಟ್ ಸಂಪರ್ಕವನ್ನು ಒದಗಿಸಲು ಆಪ್ಟಿಕಲ್ ಫೈಬರ್ ಅಳವಡಿಕೆ. ಸೆಪ್ಟೆಂಬರ್ 2021ರ ಅಂತ್ಯಕ್ಕೆ ಟಿ.ಜಿ.ಹಳ್ಳಿ ನೀರಿನ ಮೂಲದ ಪುನರುಜ್ಜೀವನ ಯೋಜನೆ ಪೂರ್ಣಗೊಳಿಸಲಾಗುವುದು. ಇದರಿಂದ ಬೆಂಗಳೂರು ನಗರದಲ್ಲಿ ಕುಡಿಯುವ ಉದ್ದೇಶಕ್ಕಾಗಿ 1.7 ಟಿಎಂಸಿ ನೀರು ಬಳಸಿಕೊಳ್ಳಬಹುದಾಗಿದೆ.

ಸರಕಾರದ ಅಭಿವೃದ್ಧಿ ಕಾರ್ಯತಂತ್ರದ ಸಂಕ್ಷಿಪ್ತ ಚಿತ್ರ

ಸಾಮಾಜಿಕ ನ್ಯಾಯದ ಭೂಮಿಕೆಯ ಮೇಲೆ ಸಮತೋಲಿತ ಅಭಿವೃದ್ಧಿ ಸಾಧನೆ. ಸಾಮಾಜಿಕ ಸಾಮರಸ್ಯದೊಂದಿಗೆ ಸಮಗ್ರ ರಾಜ್ಯದ ಅಭಿವೃದ್ಧಿ. ಪ್ರಾದೇಶಿಕ ಅಸಮತೋಲನ ನಿವಾರಣೆ-ಕಲ್ಯಾಣ ಕರ್ನಾಟಕದ ಬಲವರ್ಧನೆ.

ಕೃಷಿ ಜೊತೆಗೆ ಕೈಗಾರಿಕೆ ಮತ್ತು ಪ್ರವಾಸೋದ್ಯಮದ ಅಭಿವೃದ್ಧಿ. ಶಿಕ್ಷಣ, ಆರೋಗ್ಯ ಮತ್ತು ಸಾಮಾಜಿಕ ವಲಯಗಳ ಬೆಳವಣಿಗೆಗೆ ಒತ್ತು. ಮಾನವ ಸಂಪನ್ಮೂಲದ ಸದ್ಭಳಕೆಗೆ ಕೌಶಲ್ಯಾಭಿವೃದ್ಧಿ ಮೂಲಕ ಹೆಚ್ಚಿನ ಉದ್ಯೋಗ ಸೃಜನೆ. ನಾಡಿನ ನೆಲ, ಜಲ, ಭಾಷೆ ಮತ್ತು ಸಂಸ್ಕೃತಿಗಳ ಪೋಷಣೆ ಹಾಗೂ ಸಂರಕ್ಷಣೆ. ಸರಕಾರದ ವಿವಿಧ ಸೇವೆಗಳನ್ನು ಸರಳವಾಗಿ ಹಾಗೂ ಪಾರದರ್ಶಕವಾಗಿ ಸಾಮಾನ್ಯ ಜನರಿಗೆ ತಲುಪಿಸುವುದು.

ರಾಜ್ಯದ ಅರ್ಥವ್ಯವಸ್ಥೆ-ಹಣಕಾಸು ಪರಿಸ್ಥಿತಿ

ರಾಜ್ಯದ ಒಟ್ಟಾರೆ ಆಂತರಿಕ ಉತ್ಪನ್ನದ ಬೆಳವಣಿಗೆಯು 2018-19ನೆ ಸಾಲಿನಲ್ಲಿ ಶೇ.7.8ರಷ್ಟಿತ್ತು. ಇದಕ್ಕೆ ಪ್ರತಿಯಾಗಿ 2019-20ನೆ ಸಾಲಿನಲ್ಲಿ ಶೇ.6.8ರಷ್ಟು ಬೆಳವಣಿಗೆಯಾಗುವುದೆಂದು ಅಂದಾಜಿಸಲಾಗಿದೆ.

ಕಳೆದ ಸಾಲಿನಲ್ಲಿ ತೀವ್ರ ಬರಗಾಲದಿಂದ ಕುಸಿತ ಕಂಡಿದ್ದ ಕೃಷಿ ಕ್ಷೇತ್ರದಲ್ಲಿ ಪ್ರಸಕ್ತ ವರ್ಷದಲ್ಲಿ ಚೇತರಿಕೆಯಾಗಿದೆ. ಆಹಾರ ಧಾನ್ಯಗಳ ಇಳುವರಿಯಲ್ಲಿನ ಹೆಚ್ಚಳ, ಹೈನುಗಾರಿಕೆ, ಮೀನುಗಾರಿಕೆಯಲ್ಲಿನ ಪ್ರಗತಿ ಒಟ್ಟಾರೆಯಾಗಿ ಕೃಷಿ ಕ್ಷೇತ್ರದಲ್ಲಿ ಶೇ.3.9ರಷ್ಟು ಬೆಳವಣಿಗೆಗೆ ಕಾರಣವಾಗಿದೆ.

ಕೈಗಾರಿಕಾ ಮತ್ತು ಸೇವಾ ವಲಯಗಳು 2018-19ರಲ್ಲಿ ಶೇ.5.6ರಷ್ಟು ಮತ್ತು ಶೇ.9.8ರಷ್ಟು ಬೆಳವಣಿಗೆ ದಾಖಲಿಸಿತ್ತು. 2019-20ರಲ್ಲಿ ಈ ವಲಯಗಳಲ್ಲಿ ಕ್ರಮವಾಗಿ ಶೇ.4.8 ಮತ್ತು ಶೇ.7.9ರಷ್ಟು ಬೆಳವಣಿಗೆಯಾಗಿದೆ.

ಹಣಕಾಸು ಪರಿಸ್ಥಿತಿ: 2019-20ರ ಕೇಂದ್ರ ಸರಕಾರದ ಆಯವ್ಯಯದ ಪರಿಷ್ಕೃತ ಅಂದಾಜಿನಲ್ಲಿ ಕೇಂದ್ರ ತೆರಿಗೆಗಳಲ್ಲಿನ ರಾಜ್ಯದ ಪಾಲು ಕಡಿಮೆಯಾಗಿದೆ. ಈ ಕಾರಣದಿಂದ ಕರ್ನಾಟಕಕ್ಕೆ 8,887 ಕೋಟಿ ರೂ.ಗಳಷ್ಟು ಕಡಿತವಾಗಿದೆ. ಆದುದರಿಂದ, ರಾಜ್ಯದ ರಾಜಸ್ವ ಸಂಪನ್ಮೂಲವು ಇಳಿಕೆಯಾಗಿದೆ.

3000 ಕೋಟಿ ರೂ.ಜಿಎಸ್‌ಟಿ ಪರಿಹಾರ ಕಡಿತ: ಅಲ್ಲದೇ, ಕೇಂದ್ರ ಸರಕಾರದ ಜಿಎಸ್‌ಟಿ ಪರಿಹಾರ ಉಪಕರದ ನಿರೀಕ್ಷಿತ ಸಂಗ್ರಹಣೆಯಿಲ್ಲದ ಕಾರಣ, ರಾಜ್ಯಕ್ಕೆ ಅಂದಾಜು 3000 ಕೋಟಿ ರೂ.ಗಳಷ್ಟು ಜಿಎಸ್‌ಟಿ ಪರಿಹಾರ ಕಡಿತವಾಗಲಿದೆ. ಈ ಕಾರಣಗಳಿಂದಾಗಿ, 2019-20ರ ಆಯವ್ಯಯದ ಗುರಿಗಳನ್ನು ತಲುಪಲು ಕಷ್ಟವಾಗಿದೆ. ಈ ಪರಿಸ್ಥಿತಿಯನ್ನು ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಅಧಿನಿಯಮ ಚೌಕಟ್ಟಿನಲ್ಲಿಯೆ ನಿಭಾಯಿಸಲು ಪ್ರಸಕ್ತ ವರ್ಷದಲ್ಲಿ ಹಲವು ಇಲಾಖೆಗಳ ವೆಚ್ಚವನ್ನು ಕಡಿತಗೊಳಿಸುವ ಅನಿವಾರ್ಯತೆ ಉದ್ಭವಿಸಿದೆ.

15ನೆ ಹಣಕಾಸು ಆಯೋಗದ ಈ ಹಂಚಿಕೆಯಿಂದಾಗಿ 2019-20ರ ಆಯವ್ಯಯಕ್ಕೆ ಹೋಲಿಸಿದರೆ 2020-21ರ ಆಯವ್ಯಯದಲ್ಲಿ ಕೇಂದ್ರದ ತೆರಿಗೆಯಲ್ಲಿನ ರಾಜ್ಯದ ಪಾಲಿನಲ್ಲಿ 11,215 ಕೋಟಿ ರೂ.ಕಡಿಮೆಯಾಗಲಿದೆ. 2020-21ನೆ ವರ್ಷಕ್ಕೆ ಸರಕಾರಿ ನೌಕರರ ವೇತನ, ಪಿಂಚಣಿ, ಸರಕಾರಿ ಸಾಲದ ಮೇಲಿನ ಬಡ್ಡಿ ಮೊತ್ತವು ಹಿಂದಿನ ವರ್ಷಕ್ಕೆ ಹೋಲಿಸಿದಲ್ಲಿ, ಅಂದಾಜು 10 ಸಾವಿರ ಕೋಟಿ ರೂ.ಗಳಷ್ಟು ಹೆಚ್ಚಳವಾಗಿದೆ. ವೆಚ್ಚ ಹೆಚ್ಚಳವಾಗಿರುವ ಪ್ರಮಾಣದಲ್ಲಿಯೆ ಸಂಪನ್ಮೂಲಗಳು ಹೆಚ್ಚಳವಾಗಿಲ್ಲ.

ವಾಣಿಜ್ಯ ತೆರಿಗೆಗಳು: ಸರಕು ಮತ್ತು ಸೇವಾ ತೆರಿಗೆ

ಪ್ರತಿ ಲೀಟರ್ ಪೆಟ್ರೋಲ್ 1.60 ರೂ., ಡಿಸೇಲ್ 1.59 ರೂ.ಹೆಚ್ಚಳ

ದೇಶದ ಒಟ್ಟು ಸರಕು ಮತ್ತು ಸೇವಾ ತೆರಿಗೆ ಸಂಗ್ರಹಣೆಯಲ್ಲಿ ಕರ್ನಾಟಕವು ಎರಡನೆ ಸ್ಥಾನದಲ್ಲಿದ್ದು, ರಾಜ್ಯ ಜಿಎಸ್‌ಟಿ ಸಂಗ್ರಹಣೆಯಲ್ಲಿ ಸುಮಾರು ಶೇ.14ರ ಬೆಳವಣಿಗೆ ದರವನ್ನು ಹೊಂದಿದೆ. ಅಧಿಕ ಸಂಪನ್ಮೂಲ ಕ್ರೋಡೀಕರಣ ಕ್ರಮಗಳು: ಪೆಟ್ರೋಲ್ ಮೇಲಿನ ತೆರಿಗೆ ದರವನ್ನು ಶೇ.32ರಿಂದ ಶೇ.35ಕ್ಕೂ ಮತ್ತು ಡಿಸೇಲ್ ಮೇಲಿನ ತೆರಿಗೆ ದರವನ್ನು ಶೇ.21ರಿಂದ ಶೇ.24ಕ್ಕೂ ಏರಿಕೆ ಮಾಡಲು ಪ್ರಸ್ತಾಪಿಸಲಾಗಿದೆ. ಇದರಿಂದಾಗಿ, ಪೆಟ್ರೋಲ್ ಬೆಲೆ ಒಂದು ಲೀಟರ್‌ಗೆ 1.60 ರೂ. ಹಾಗೂ ಡಿಸೇಲ್ ಬೆಲೆ ಒಂದು ಲೀಟರ್‌ಗೆ 1.59 ರೂ.ರಷ್ಟು ಹೆಚ್ಚಳವಾಗುತ್ತದೆ.

ವಾಣಿಜ್ಯ ತೆರಿಗೆಗಳ ಇಲಾಖೆಗೆ 2020-21ನೇ ಸಾಲಿಗೆ 82,443 ಕೋಟಿ ರೂ.ಗಳ ರಾಜಸ್ವ ಸಂಗ್ರಹಣೆ ಗುರಿಯನ್ನು ನಿಗದಿಗೊಳಿಸಲಾಗಿದೆ.

ನೋಂದಣಿ ಮತ್ತು ಮುದ್ರಾಂಕ: 2020-21ನೇ ಸಾಲಿಗೆ 12,655 ಕೋಟಿ ರೂ.ಗಳ ರಾಜಸ್ವ ಸಂಗ್ರಹಣೆ ಗುರಿಯನ್ನು ನಿಗದಿಪಡಿಸಲಾಗಿದೆ. ಕೈಗೆಟಕುವ ದರಗಳ ಮನೆಗಳನ್ನು ಪ್ರೋತ್ಸಾಹಿಸಲು, 20 ಲಕ್ಷ ರೂ.ಗಿಂತ ಕಡಿಮೆ ವೌಲ್ಯದ ಅಪಾರ್ಟ್‌ಮೆಂಟ್‌ಗಳ ಮೊದಲನೆ ನೋಂದಣಿಗೆ ಮುದ್ರಾಂಕ ಶುಲ್ಕವನ್ನು ಶೇ.5 ರಿಂದ ಶೇ.2ಕ್ಕೆ ಕಡಿಮೆ ಮಾಡಲು ಪ್ರಸ್ತಾಪಿಸಲಾಗಿದೆ.

ನ್ಯಾಷನಲ್ ಇ-ಆಡಳಿತ ಸೇವೆಯ(Nesl) ಪೋರ್ಟಲ್ ಮುಖಾಂತರ ಬ್ಯಾಂಕ್ ಮತ್ತು ಎನ್‌ಬಿಎಫ್‌ಸಿ(NBFC) ಆನ್‌ಲೈನ್‌ನಲ್ಲಿ ನೋಂದಾಯಿಸುವ ಸಾಲ ದಾಖಲಾತಿಗಳಿಗೆ ಮುದ್ರಾಂಕ ಶುಲ್ಕವನ್ನು ಪಾವತಿಸುವ ವ್ಯವಸ್ಥೆಯನ್ನು ಆನ್‌ಲೈನ್ ಮುಖಾಂತರ ಜಾರಿಗೆ ತರಲಾಗುವುದು. ಕಾವೇರಿ ಮತ್ತು ಇ-ಆಸ್ತಿ ತಂತ್ರಾಂಶಗಳ ಸಂಯೋಜನೆ ಜಾರಿಗೆ ತರಲಾಗುವುದು. ಕಾವೇರಿ-2 ತಂತ್ರಾಂಶವನ್ನು ಜಾರಿಗೆ ತರಲಾಗುವುದು.

ಅಬಕಾರಿ: 2020-21ನೇ ಸಾಲಿಗೆ ಮದ್ಯದ ಎಲ್ಲ 18 ಘೋಷಿತ ಬೆಲೆ ಸ್ಲಾಬ್‌ಗಳ ಮೇಲಿನ ಹೆಚ್ಚುವರಿ ಅಬಕಾರಿ ಸುಂಕದ ದರಗಳನ್ನು ಹಾಲಿ ಇರುವ ದರಗಳ ಮೇಲೆ ಶೇ.6ರಷ್ಟು ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ. 2020-21ನೆ ಆರ್ಥಿಕ ವರ್ಷಕ್ಕೆ 22,700 ಕೋಟಿ ರೂ.ಗಳ ರಾಜಸ್ವ ಸಂಗ್ರಹಣೆ ಗುರಿಯನ್ನು ನಿಗದಿಪಡಿಸಿದೆ.

ಸಾರಿಗೆ: 2020-21ನೆ ಸಾಲಿನಿಂದ ಆಸನ ಸಾಮರ್ಥ್ಯ 12ಕ್ಕಿಂತ ಹೆಚ್ಚು ಹಾಗೂ 20 ಆಸನಗಳನ್ನು ಮೀರದ ಪ್ರಯಾಣಿಕರನ್ನು ಕೊಂಡೊಯ್ಯುವ ಒಪ್ಪಂದ ವಾಹನಗಳಿಗೆ ಮೋಟಾರು ವಾಹನ ತೆರಿಗೆಯಲ್ಲಿ ತ್ರೈಮಾಸಿಕ ಪ್ರತಿ ಆಸನಕ್ಕೆ 900 ರೂ.ಗಳನ್ನು ನಿಗದಿಗೊಳಿಸಲು ಉದ್ದೇಶಿಸಲಾಗಿದೆ. 1988ನೆ ಮೋಟಾರು ವಾಹನ ಕಾಯ್ದೆ ಕಲಂ 88(9)ರ ಅಡಿಯಲ್ಲಿ ರಹದಾರಿ ಪಡೆದು ಆಚರಣೆ ಮಾಡುವ ಹೊಸ ಮಾದರಿಯ ಸ್ಲೀಪರ್ ಕೋಚ್ ವಾಹನಗಳ ನೋಂದಣಿ ಸಮಯದಲ್ಲಿ ತ್ರೈಮಾಸಿಕ ತೆರಿಗೆ ಪ್ರತಿ ಸ್ಲೀಪರ್‌ಗೆ 4000 ರೂ.ಗಳನ್ನು ಸಂಗ್ರಹಿಸಲು ಉದ್ದೇಶಿಸಲಾಗಿದೆ.

ಒಟ್ಟಾರೆಯಾಗಿ 2020-21ನೇ ಸಾಲಿಗೆ 7,115 ಕೋಟಿ ರೂ.ಗಳ ಸಂಗ್ರಹಣೆ ಗುರಿಯನ್ನು ನಿಗದಿಪಡಿಸಲಾಗಿದೆ.

46,072 ಕೋಟಿ ರೂ.ನಿರೀಕ್ಷಿತ ವಿತ್ತೀಯ ಕೊರತೆ

2020-21ನೆ ಸಾಲಿನಲ್ಲಿ ಒಟ್ಟು ಜಮೆಗಳು 2,33,134 ಕೋಟಿ ರೂ.ಗಳೆಂದು ಅಂದಾಜು ಮಾಡಲಾಗಿದೆ. ಇದರಲ್ಲಿ 1,79,920 ಕೋಟಿ ರೂ.ರಾಜಸ್ವ ಜಮೆಗಳು ಹಾಗೂ 52,918 ಕೋಟಿ ರೂ.ಗಳ ಸಾಲ ಸೇರಿದಂತೆ 53,214 ಕೋಟಿ ರೂ.ಬಂಡವಾಳ ಜಮೆಗಳು ಒಳಗೊಂಡಿದೆ.

1,79,776 ಕೋಟಿ ರೂ.ಗಳ ರಾಜಸ್ವ ವೆಚ್ಚ, 46,512 ಕೋಟಿ ರೂ.ಗಳ ಬಂಡವಾಳ ವೆಚ್ಚ ಹಾಗೂ ಸಾಲದ ಮರುಪಾವತಿ 11,605 ಕೋಟಿ ರೂ.ಗಳ ವೆಚ್ಚವನ್ನು ಒಳಗೊಂಡು, ಒಟ್ಟು ವೆಚ್ಚವು 2,37,893 ಕೋಟಿ ರೂ.ಗಳಾಗುತ್ತೆಂದು ಅಂದಾಜು ಮಾಡಲಾಗಿದೆ.

ರಾಜ್ಯಸ್ವ ಹೆಚ್ಚುವರಿಯನ್ನು 143 ಕೋಟಿ ರೂ.ಗಳೆಂದು ಅಂದಾಜು ಮಾಡಲಾಗಿದೆ. ವಿತ್ತೀಯ ಕೊರತೆ 46,072 ಕೋಟಿ ರೂ.ಗಳಾಗುತ್ತೆಂದು ನಿರೀಕ್ಷಿಸಲಾಗಿದ್ದು, ಅದು ರಾಜ್ಯದ ಆಂತರಿಕ ಉತ್ಪನ್ನದ ಶೇ.2.55ರಷ್ಟಾಗಿರುತ್ತದೆ.

2020-21ರ ಕೊನೆಯಲ್ಲಿ 3,68,692 ಕೋಟಿ ರೂ.ಗಳ ಒಟ್ಟು ಹೊಣೆಗಾರಿಕೆಗಳು ರಾಜ್ಯದ ಆಂತರಿಕ ಉತ್ಪನ್ನದ ಶೇ.20.42 ರಷ್ಟಾಗುತ್ತದೆಂದು ಅಂದಾಜು ಮಾಡಲಾಗಿದೆ. ಇದು ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಅಧಿನಿಯಮದಡಿ 2020-21ನೆ ವರ್ಷಕ್ಕೆ ನಿಗದಿಪಡಿಸಿರುವ ಶೇ.25ರ ಮಿತಿಯೊಳಗಿದೆ ಎಂದು ಬಜೆಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಸಂಪನ್ಮೂಲಗಳ ಕ್ರೋಡೀಕರಣ

2020-21ನೆ ಸಾಲಿನ ರಾಜ್ಯದ ಒಟ್ಟು ಸ್ವಂತ ತೆರಿಗೆ ರಾಜಸ್ವವನ್ನು 2019-20ನೆ ಸಾಲಿನ ಪರಿಷ್ಕೃತ ಅಂದಾಜು ಮೀರಿ ಜಿಎಸ್‌ಟಿ ನಷ್ಟ ಪರಿಹಾರವನ್ನು ಒಳಗೊಂಡಂತೆ ಶೇ.7.66ರ ಹೆಚ್ಚಳದೊಂದಿಗೆ 1,28,107 ಕೋಟಿ ರೂ.ಗಳಾಗುತ್ತದೆಂದು ಅಂದಾಜು ಮಾಡಲಾಗಿದೆ.

ತೆರಿಗೆಯೇತರ ರಾಜಸ್ವಗಳಿಂದ 7,767 ಕೋಟಿ ರೂ.ಗಳನ್ನು ಸಂಗ್ರಹಿಸಬಹುದೆಂದು ನಿರೀಕ್ಷಿಸಲಾಗಿದೆ. ಕೇಂದ್ರ ತೆರಿಗೆಯ ಪಾಲಿನ ರೂಪದಲ್ಲಿ 28,591 ಕೋಟಿ ರೂ.ಗಳನ್ನು ಹಾಗೂ 15,454 ಕೋಟಿ ರೂ.ಗಳನ್ನು ಕೇಂದ್ರ ಸರಕಾರದಿಂದ ಸಹಾಯಾನುದಾನ ರೂಪದಲ್ಲಿ ರಾಜ್ಯ ಸರಕಾರವು ನಿರೀಕ್ಷಿಸಿದೆ.

ಈ ರಾಜಸ್ವ ಜಮೆಗಳಿಗೆ ಪೂರಕವಾಗಿ 52,918 ಕೋಟಿ ರೂ.ಗಳ ಒಟ್ಟು ಸಾಲಗಳು, 40 ಕೋಟಿ ರೂ.ಗಳ ಋಣೇತರ ಸ್ವೀಕೃತಿಗಳು ಮತ್ತು 257 ಕೋಟಿ ರೂ.ಗಳ ಸಾಲಗಳ ವಸೂಲು ಮೊತ್ತವನ್ನು ಅಂದಾಜಿಸಲಾಗಿದೆ. ರಾಜ್ಯದ ಒಡೆತನದ ವಿವಿಧ ಮಂಡಳಿಗಳು, ನಿಗಮಗಳು ಮತ್ತು ಸ್ಥಳೀಯ ಸಂಸ್ಥೆಗಳ ಆಂತರಿಕ ಸಂಪನ್ಮೂಲ ಸೃಜನೆಯ ಮೂಲಕ ಹಾಗೂ ತಮ್ಮ ಹಣಕಾಸು ಸಾಮರ್ಥ್ಯ ಮತ್ತು ಸ್ವಂತ ರಾಜಸ್ವಗಳ ಆಧಾರದ ಮೇಲೆ ಮಾಡಿದ ಸಾಲಗಳ ಮೂಲಕ 22,378 ಕೋಟಿ ರೂ.ಗಳನ್ನು ಕ್ರೋಡೀಕರಿಸಲಾಗುತ್ತದೆಂದು ನಿರೀಕ್ಷಿಸಲಾಗಿದೆ.

ಆರ್ಥಿಕ ಅಭಿವೃದ್ಧಿಗೆ ಬಲ: ‘ಮನೆ ಮನೆಗೆ ಗಂಗೆ’ ಸೇರಿ ಹತ್ತಾರು ಹೊಸ ಯೋಜನೆ

ಆರ್ಥಿಕ ಅಭಿವೃದ್ಧಿ ಬಲಪಡಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರದ ಪ್ರಸ್ತುತ ಸಾಲಿನ ಬಜೆಟ್‌ನಲ್ಲಿ 55,732 ಕೋಟಿ ರೂ. ಅನುದಾನ ಮೀಸಲಿಟ್ಟಿದ್ದು, ಕೇಂದ್ರ ಸರಕಾರದ ಜಲ ಜೀವನ್ ಮಿಷನ್ ಮತ್ತು ರಾಜ್ಯದ ಸಂಪನ್ಮೂಲ ಬಳಸಿಕೊಂಡು ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಮನೆಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲು ‘ಮನೆ ಮನೆಗೆ ಗಂಗೆ’ ನೂತನ ಯೋಜನೆ ಜಾರಿಗೊಳಿಸಿದೆ.

ಪ್ರಮುಖವಾಗಿ, ಹಿಂದುಳಿದ ತಾಲೂಕುಗಳ ಅಭಿವೃದ್ಧಿಗಾಗಿ ‘ವಿಶೇಷ ಅಭಿವೃದ್ಧಿ ಯೋಜನೆ’ ವುುಂದುವರಿಕೆ. ಇದಕ್ಕಾಗಿ 2020-21ನೇ ಸಾಲಿನಲ್ಲಿ 3060 ಕೋಟಿ ರೂ. ಒದಗಿಸಲಾಗಿದೆ. ಅದೇ ರೀತಿ, ಗ್ರಾಮೀಣ ಸುಮಾರ್ಗ ಯೋಜನೆ ಅಡಿ ಗ್ರಾಮೀಣ ರಸ್ತೆಗಳ ಸುಧಾರಣೆಗಾಗಿ 780 ಕೋಟಿ ರೂ. ಅನುದಾನ ಇಡಲಾಗಿದೆ.

ಜಲಧಾರೆ ಯೋಜನೆಯಡಿಯಲ್ಲಿ ಎಐಐಬಿ ಬ್ಯಾಂಕ್ ನೆರವಿನೊಂದಿಗೆ 700 ಕೋಟಿ ರೂ. ವೆಚ್ಚದಲ್ಲಿ ವಿಜಯಪುರ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಬೃಹತ್ ಕುಡಿಯುವ ನೀರಿನ ಯೋಜನೆ ಜಾರಿಗೊಳಿಸಿದೆ. 1,690 ಕೋಟಿ ರೂ. ಮೊತ್ತದಲ್ಲಿ ರಾಜ್ಯದ 17 ನದಿ ಪಾತ್ರದ ಮಲಿನತೆಯನ್ನು ತಡೆಗಟ್ಟಲು 20 ನಗರ ಪ್ರದೇಶಗಳಿಗೆ ಒಳಚರಂಡಿ ವ್ಯವಸ್ಥೆ ಕಲ್ಪಿಸಲಿದೆ. ಒಂದು ಪಟ್ಟಣಕ್ಕೆ ಮಲತ್ಯಾಜ್ಯ ಸಂಸ್ಕರಣಾ ಘಟಕ ಅಳವಡಿಕೆಗೆ 100 ಕೋಟಿ ರೂ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News