×
Ad

ಕೃಷಿ, ಮೂಲಸೌಕರ್ಯ, ಪ್ರವಾಸೋದ್ಯಮ ಅಭಿವೃದ್ಧಿಗೆ ಆದ್ಯತೆ: ಬಜೆಟ್‌ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್

Update: 2020-03-05 20:13 IST

ಬೆಂಗಳೂರು, ಮಾ.5: ಕೃಷಿ, ಮೂಲಸೌಕರ್ಯ, ಪ್ರವಾಸೋದ್ಯಮ ಮತ್ತು ಬೆಂಗಳೂರು ಅಭಿವೃದ್ಧಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಜೆಟ್‌ನಲ್ಲಿ ಆದ್ಯತೆ ನೀಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.

ಕೈಗಾರಿಕಾ ಹೂಡಿಕೆದಾರರ ಬಹುಮುಖ್ಯ ಬೇಡಿಕೆಯಾದ ಕೈಗಾರಿಕಾ ಸ್ಥಾಪನೆಗೆ ನೇರವಾಗಿ ರೈತರಿಂದ ಜಮೀನು ಖರೀದಿ ಮಾಡಲು ಇದ್ದ ಸಮಸ್ಯೆಗೆ ಪರಿಹಾರವನ್ನು ಮುಂಗಡ ಪತ್ರದಲ್ಲಿ ಪರಿಹರಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ವಿಶ್ವದ ಕೈಗಾರಿಕೋದ್ಯಮಿಗಳು ಕರ್ನಾಟಕದಲ್ಲಿ ಹೂಡಿಕೆ ಮಾಡಲು ಸಹಕಾರಿಯಾಗಿದೆ. ಇದರಿಂದ ಕರ್ನಾಟಕದಲ್ಲಿ ಮುಂದಿನ ದಿನಗಳಲ್ಲಿ ಅತಿ ಹೆಚ್ಚು ಉದ್ಯೋಗ ನಿರ್ಮಾಣವಾಗಲಿದೆ. ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ವಿವಿಧ ಇಲಾಖೆಗಳ ಸಮನ್ವಯ ಸಾಧಿಸಲು ಇಲಾಖಾವಾರು ವಿಂಗಡಿಸದೆ 6 ವಲಯಗಳನ್ನಾಗಿ ವಿಂಗಡಿಸಿ ಆಯವ್ಯಯ ಮಂಡನೆ ಮಾಡಿ ಹೊಸ ದಿಕ್ಕನ್ನು ನೀಡಿದ್ದಾರೆ ಎಂದು ಕಟೀಲು ತಿಳಿಸಿದ್ದಾರೆ.

ಗ್ರಾಮ ಮಟ್ಟದಿಂದ ಬೆಂಗಳೂರಿನವರೆಗಿನ ಅಭಿವೃದ್ಧಿಯನ್ನು ಗಮನದಲ್ಲಿಟ್ಟು ಕೊಂಡು ಈ ಬಜೆಟ್ ಮಂಡಿಸಿದ್ದಾರೆ. ಮಹಾದಾಯಿ ಯೋಜನೆಗೆ 500 ಕೋಟಿ ರೂ.ಮತ್ತು ಇತರೆ ನೀರಾವರಿ ಯೋಜನೆಗಳಿಗೆ ಅತೀ ಹೆಚ್ಚು ಹಣವನ್ನು ಒದಗಿಸಿರುವುದು ಈ ಸರಕಾರವು ನೀರಾವರಿ ಯೋಜನೆಗೆ ನೀಡಿರುವ ಆದ್ಯತೆಯನ್ನು ತೋರಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News