ರಾಜ್ಯ ಬಜೆಟ್: ಚಿಕ್ಕಮಗಳೂರು ಜಿಲ್ಲೆಯ ಜನಪ್ರತಿನಿಧಿಗಳ ಪ್ರತಿಕ್ರಿಯೆ ಹೀಗಿವೆ...
ಚಿಕ್ಕಮಗಳೂರು, ಮಾ.5: ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಮಂಡಿಸಿರುವ ರಾಜ್ಯ ಬಜೆಟ್ ಬಗ್ಗೆ ಚಿಕ್ಕಮಗಳೂರು ಜಿಲ್ಲೆಯ ವಿವಿಧ ಪಕ್ಷಗಳ ನಾಯಕರು, ರಾಜಕೀಯ ಮುಖಂಡರು ಪ್ರತಿಕ್ರಿಯಿಸಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಏತ ನೀರಾವರಿ ಯೋಜನೆ ಮತ್ತು ಜಲಧಾರೆ ಯೋಜನೆಗೆ ದೊಡ್ಡ ಮೊತ್ತದ ಅನುದಾನವನ್ನು ಮೀಸಲಿರಿಸಿದ್ದಾರೆ. ಆದ್ದರಿಂದ ಜಿಲ್ಲೆಯನ್ನು ಕಡೆಗಣಿಸಿದ್ದಾರೆ ಎನ್ನುವುದು ಸರಿಯಲ್ಲ. ಏತ ನೀರಾವರಿ ಮತ್ತು ಜಲಧಾರೆ ಯೋಜನೆಗೆ ಮೀಸಲಿರಿಸಿರುವ ಅನುದಾನದಲ್ಲಿ ಜಿಲ್ಲೆಯ ಗೊಂದಿಹಳ್ಳ ಯೋಜನೆಗೆ ಮತ್ತು ಜಲಧಾರೆ ಯೋಜನೆಗೆ ಹಣ ನೀಡಲಿದ್ದಾರೆ ಎಂಬ ಭರವಸೆ ಇದೆ. ಬಜೆಟ್ ಬಳಿಕ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿದಾಗ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆಗೆ ಅನುದಾನ ಬಿಡುಗಡೆಗೆ ಸಮ್ಮತಿ ನೀಡಿದ್ದಾರೆ.
-ಸಿ.ಟಿ.ರವಿ, ಜಿಲ್ಲಾ ಉಸ್ತುವಾರಿ ಸಚಿವ
ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪೂರಕವಾದ ಪ್ರವಾಸೋದ್ಯಮ, ಹೈನುಗಾರಿಕೆ, ತೋಟಗಾರಿಕೆಗೆ, ಉದ್ಯಮಗಳಿಗೆ ಬಜೆಟ್‍ನಲ್ಲಿ ಅನುದಾನ ತರಲು ಉತ್ತಮ ಅವಕಾಶವಿತ್ತು. ಆದರೆ, ಜಿಲ್ಲೆಯ ಸಚಿವರು, ಶಾಸಕರು ಬಜೆಟ್‍ನಲ್ಲಿ ಹೆಚ್ಚಿನ ಅನುದಾನ ತರುವ ಪ್ರಯತ್ನವನ್ನು ಸಂಪೂರ್ಣವಾಗಿ ಕೈಚಲ್ಲಿದ್ದಾರೆ. ಈ ಮೂಲಕ ಸಚಿವರು ಶಾಸಕರು ಜಿಲ್ಲೆಯ ರೈತರು, ಅತಿವೃಷ್ಟಿ ಸಂತ್ರಸ್ತರು, ಕಾರ್ಮಿಕರಲ್ಲಿ ನಿರಾಶೆ ಮೂಡಿಸಿದ್ದಾರೆ.
-ಬಿ.ಎಲ್.ಶಂಕರ್, ಮಾಜಿ ವಿಧಾನ ಪರಿಷತ್ ಸಭಾಪತಿ ಮತ್ತು ಕಾಂಗ್ರೆಸ್ ಮುಖಂಡ
ಸಿ.ಟಿ.ರವಿ ನಿರ್ಲಕ್ಷ್ಯದಿಂದಾಗಿ ಜಿಲ್ಲೆಗೆ ಬಜೆಟ್‍ನಲ್ಲಿ ಅನುದಾನ ಸಿಕ್ಕಿಲ್ಲ
ಜಿಲ್ಲೆಯ ಜನರ ಪಾಲಿಗೆ ನಿರಾಶಾದಾಯಕ ಬಜೆಟ್ ಆಗಿದೆ. ಭೌಗೋಳಿಕವಾಗಿ ಮಲೆನಾಡು ಬಯಲು ಪ್ರದೇಶಗಳನ್ನೊಳಗೊಂಡಿರುವ ಜಿಲ್ಲೆ ಜ್ವಲಂತ ಸಮಸ್ಯೆಗಳಿಂದ ನಲುಗುತ್ತಿದೆ. ಜಿಲ್ಲೆಯ ಬಯಲು ಸೀಮೆ ಭಾಗದಲ್ಲಿ ನೀರಿಗಾಗಿ ಹಾಹಾಕಾರ ಎದ್ದಿದೆ. ಬಿಜೆಪಿ ಸರಕಾರ ಮಂಡಿಸುವ ಬಜೆಟ್‍ನಲ್ಲಿ ಜಿಲ್ಲೆಯಲ್ಲಿ ಕುಂಠಿತಗೊಂಡಿರುವ ನೀರಾವರಿ ಯೋಜನೆಗಳಿಗೆ ಕಾಯಕಲ್ಪ ಸಿಗುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ ಯಡಿಯೂರಪ್ಪ ಮಂಡಿಸಿದ ಬಜೆಟ್‍ನಲ್ಲಿ ಜಿಲ್ಲೆಯನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಲಾಗಿದೆ. ಜಿಲ್ಲೆಯ ಅತಿವೃಷ್ಟಿ ಸಂತ್ರಸ್ತರ ನೆರವಿಗೆ ಯಾವುದೇ ಅನುದಾನ ಮೀಸಲಿಟ್ಟಿಲ್ಲ. ಕರಗಡ ಯೋಜನೆ ಬಗ್ಗೆ ಸರಕಾರ ಪ್ರಸ್ತಾಪವನ್ನೇ ಮಾಡಿಲ್ಲ. ಕಾಫಿ ಬೆಳೆಗಾರರ ಬೇಡಿಕೆಗೆ ರಾಜ್ಯ ಸರಕಾರ ಮನ್ನಣೆ ನೀಡಿಲ್ಲ. ಸಿ.ಟಿ.ರವಿ ತಮ್ಮದೇ ಸರಕಾರದಿಂದ ಜಿಲ್ಲೆಗೊಂದು ಹೊಸ ಯೋಜನೆಯನ್ನು ಜಾರಿ ಮಾಡಿಸಲು ಸಾಧ್ಯವಾಗದಿರುವುದು ನಾಚಿಕೆಗೇಡು.
-ಮೋಟಮ್ಮ, ಕಾಂಗ್ರೆಸ್ ಹಿರಿಯ ನಾಯಕಿ
ಬಜೆಟ್‍ನಿಂದ ರಾಜ್ಯದ ಜನರಿಗೆ ಅನ್ಯಾಯ
ಯಡಿಯೂರಪ್ಪನವರು ಮುಖ್ಯಮಂತ್ರಿಯಾಗುವಾಗ ಇದ್ದ ಹುರುಪು ಬಜೆಟ್ ಮಂಡನೆ ಮಾಡುವಾಗ ಏಕೆ ತೋರಿಸಲಿಲ್ಲ. ಇದರಿಂದ ರಾಜ್ಯದ ಜನರಿಗೆ ಸಂಪೂರ್ಣ ಅನ್ಯಾಯವಾಗಿದೆ. ರಾಜ್ಯದ ಆರ್ಥಿಕತೆ ಸರಿಯಿಲ್ಲ ಎಂದು ಯಡಿಯೂರಪ್ಪನವರೆ ಸ್ವತಃ ಒಪ್ಪಿಕೊಂಡು ಈಗ ಬಜೆಟ್ ಮಂಡನೆ ಮಾಡಿರುವುದು ನೋಡಿದರೆ ಇಲ್ಲಿ ನೀಡಿರುವ ಭರವಸೆಯನ್ನು ಈಡೇರಿಸಲು ಸಾಧ್ಯವೆ ಇಲ್ಲ ಎಂಬುದು ಬಹಿರಂಗ ಸತ್ಯವಾಗಿದ್ದು, ಕಾಫಿ ಬೆಳೆಗಾರರು, ರೈತರು ಸಂಕಷ್ಟದಲ್ಲಿರುವವರಿಗೆ ಯಾವುದೇ ನೆರವು ಘೋಷಣೆ ಮಾಡದ ನಿರಾಶಾದಾಯಕ ಬಜೆಟ್ ಇದಾಗಿದೆ
- ಬಿ.ಎಂ.ಸಂದೀಪ್, ಎಐಸಿಸಿ ಕಾರ್ಯದರ್ಶಿ
ರಾಜ್ಯ ಬಜೆಟ್ ಸಂಪೂರ್ಣ ನಿರಾಶಾದಾಯಕವಾಗಿದೆ. ಜನಪರ ಬಜೆಟ್ ಮಂಡಿಸುವಲ್ಲಿ ಮುಖ್ಯಮಂತ್ರಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಜನಸಾಮಾನ್ಯರಿಗೆ ಅನುಕೂಲವಾಗುವಂತಹ ಯಾವುದೇ ಕಾರ್ಯಕ್ರಮಗಳು ಬಜೆಟ್‍ನಲ್ಲಿ ಇಲ್ಲ, ಅತಿವೃಷ್ಠಿ, ಅನಾವೃಷ್ಠಿಯಿಂದ ಕಂಗಾಲಾಗಿರುವ ರೈತರ ಸಾಲ ಮನ್ನಾ ಮಾಡಿಲ್ಲ, ಕಾಫಿ ಬೆಳೆಗಾರರಿಗೂ ನೆರವಿನ ಹಸ್ತ ಚಾಚಿಲ್ಲ. ಕಳಸಾ ಮತ್ತು ಅಜ್ಜಂಪುರ ತಾಲೂಕಿನ ಪರಿವರ್ತನೆಗೆ ಹಣ ನೀಡಿಲ್ಲ. ಸಚಿವ ಸಿ.ಟಿ.ರವಿ ಅವರು ಜಿಲ್ಲೆಗೆ ಹೊಸ ಯೋಜನೆಗಳನ್ನು ತರುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ
-ಎಚ್.ಎಚ್.ದೇವರಾಜ್, ಜೆಡಿಎಸ್ ರಾಜ್ಯ ಉಪಾಧ್ಯಕ್ಷ
ಸರ್ವಜನರ ಏಳಿಗೆಗೆ ರೂಪಿಸಿರುವ ಮಿಶ್ರ ಬಜೆಟ್
ಯಡಿಯೂರಪ್ಪ ಅವರು ಮಂಡಿಸಿದ ಬಜೆಟ್ ಆಶಾದಾಯಕವಾಗಿದ್ದು, ರೈತರ, ಶ್ರಮಿಕರ, ಬಡವರ ಮತ್ತು ಹಿಂದುಳಿದ ವರ್ಗದ ಏಳಿಗೆಗಾಗಿ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಮಂಡಿಸಿದ ಬಜೆಟ್ ಇದಾಗಿದೆ. ಕೃಷಿ, ನೀರಾವರಿ, ತೋಟಗಾರಿಕೆ ಸೇರಿದಂತೆ ಹಲವು ಕ್ರಿಯಾ ಯೋಜನೆಗಳನ್ನು ರಾಜ್ಯ ಸರಕಾರ ಗುರುವಾರ ಮಂಡಿಸಿದ ಬಜೆಟ್‍ನಲ್ಲಿ ಯಶಸ್ವಿಯಾಗಿ ರೂಪಿಸಲಾಗಿದೆ. ಹಿಂದುಳಿದ ವರ್ಗದ ಸಮುದಾಯದ ಅಭಿವೃದ್ದಿಗೆ ಒತ್ತು ನೀಡುವ ನಿಟ್ಟಿನಲ್ಲಿ ಸಿಎಂ ಕಾರ್ಯೋನ್ಮುಖರಾಗಿದ್ದಾರೆ. ಕಟ್ಟಡ ಕಾರ್ಮಿಕರ ಮತ್ತು ಇತರ ಶ್ರಮಿಕ ವರ್ಗದ ಕಾರ್ಮಿಕರಿಗೆ ಹೆಲ್ತ್ ಕಾರ್ಡ್ ಸೇರಿದಂತೆ ಹಲವು ಯೋಜನೆಗಳನ್ನು ರೂಪಿಸಿರುವುದು ಉತ್ತಮ ಬೆಳವಣಿಗೆ. ರಾಜ್ಯದ ಸರ್ವಜನರ ಏಳಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಬಜೆಟ್ ಅನ್ನು ರೂಪಿಸಲಾಗಿದೆ.
-ಗಿರೀಶ್, ಬಿಜೆಪಿ ಮುಖಂಡ
ಹಸಿರು ಶಾಲು ಹೊದ್ದು ಬಜೆಟ್ ಮಂಡನೆಗೆ ಆಗಮಿಸಿದ ಮುಖ್ಯಮಂತ್ರಿಯನ್ನು ಕಂಡು ಉತ್ಸುಕರಾಗಿದ್ದ ರೈತರಿಗೆ ಬಜೆಟ್ ಘೋಷಣೆ ನಂತರ ನಿರಾಸೆ ಮೂಡಿಸಿದೆ. ರೈತರ ಹೆಸರಿನಲ್ಲೆ ಮುಖ್ಯಮಂತ್ರಿಯಾದ ಯಡಿಯೂರಪ್ಪನವರು ರಾಜ್ಯದ ರೈತರಿಗೆ ಶೂನ್ಯ ಕೊಡುಗೆ ನೀಡಿದ್ದಾರೆ. ಕಾಫಿ ಅಡಿಕೆ ಬೆಳೆಗಾರರು ಸೇರಿದಂತೆ ರೈತಾಪಿ ವರ್ಗಕ್ಕೆ ಅನ್ಯಾಯ ಮಾಡುವ ಬಜೆಟ್ ಮಂಡಿಸುವ ಮೂಲಕ ಸಿಎಂ ಯಡಿಯೂರಪ್ಪ ರೈತರು, ಅತಿವೃಷ್ಟಿ ಸಂತ್ರಸ್ತರನ್ನು ಅವಮಾಣಿಸಿದ್ದಾರೆ. ಸಿಎಂ ಯಡಿಯೂರಪ್ಪ ತಮ್ಮ ತವರೂರು ಶಿವಮೊಗ್ಗೆ ಜಿಲ್ಲೆಗೆ 500ಕೋಟಿ ರೂ. ಅನುದಾನ ನೀಡಿದ್ದು, ಇತರ ಜಿಲ್ಲೆಗಳನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಸ್ವಾರ್ಥತೆಯ ಬಜೆಟ್ ಮಂಡನೆ ಮಾಡಿರುವ ಯಡಿಯೂರಪ್ಪನವರು ಅವರು ಇಡೀ ರಾಜ್ಯದ ಮುಖ್ಯಮಂತ್ರಿ ಎಂಬುದನ್ನು ಮರೆತಿದ್ದಾರೆ
-ಹೊಲದಗದ್ದೆ ಗಿರೀಶ್, ಜೆಡಿಎಸ್ ಜಿಲ್ಲಾ ವಕ್ತಾರ
ಮುಖ್ಯಮಂತ್ರಿ ಯಡಿಯೂರಪ್ಪರವರು ಗುರುವಾರ ಮಂಡಿಸಿದ ಬಜೆಟ್‍ನಲ್ಲಿ ಜಿಲ್ಲೆಗೆ ಹೆಚ್ಚಿನ ಅನುದಾನ ನೀಡುತ್ತಾರೆಂಬ ಆಸೆ ಇತ್ತು ಆದರೆ, ಜಿಲ್ಲೆಯ ಅಭಿವೃದ್ಧಿ, ನೀರಾವರಿ ಯೋಜನೆಗಗಳಿಗೆ ಮತ್ತು ಅತಿವೃಷ್ಟಿ ಪೀಡಿತ ಪ್ರದೇಶಗಳ ಅಭಿವೃದ್ಧಿಗೆ ಯಾವುದೇ ಅನುದಾನ ಘೋಷಿಸದೇ ಜನರ ನಿರೀಕ್ಷೆ ಹುಸಿಗೊಳಿಸಿದ್ದು, ಪ್ರಭಾವಿ ಶಾಸಕರು ಮತ್ತು ಮಂತ್ರಿ ಇರುವ ಜಿಲ್ಲೆಗೆ ಬಜೆಟ್‍ನಲ್ಲಿ ಶೂನ್ಯ ಸಂಪಾದನೆಯಾಗಿದೆ.
-ಬಿ.ಅಮ್ಜದ್, ಸಿಪಿಐ ಮುಖಂಡ.