4:30 ಗಂಟೆಯಲ್ಲಿ ಸುಬ್ರಹ್ಮಣ್ಯದಿಂದ ಬೆಂಗಳೂರು ತಲುಪಿದ ಆ್ಯಂಬುಲೆನ್ಸ್

Update: 2020-03-05 17:39 GMT

ಸುಬ್ರಹ್ಮಣ್ಯ, ಮಾ.5: ಅಧಿಕ ಸಂಚಾರ ದಟ್ಟಣೆ ಹೊಂದಿರುವ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಝೀರೋ ಟ್ರಾಫಿಕ್ ವ್ಯವಸ್ಥೆ ಇಲ್ಲದೆಯೇ ರೋಗಿಯೊಬ್ಬರನ್ನು ಕೇವಲ 4:30 ಗಂಟೆಯಲ್ಲಿ ಸುಬ್ರಹ್ಮಣ್ಯದಿಂದ ಬೆಂಗಳೂರಿಗೆ ಕರೆದೊಯ್ದ ಪಂಜದ ಪಂಚಶ್ರೀ ಆ್ಯಂಬುಲೆನ್ಸ್‌ ನ ಚಾಲಕರು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

4:30 ತಾಸು: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆಗಮಿಸಿದ್ದ ಭಕ್ತರೊಬ್ಬರ ಬೆಂಗಳೂರಿನ ನಾಗೇಶ್ ಎಂಬವರಿಗೆ ರಕ್ತದೊತ್ತಡ ಕಡಿಮೆಯಾಗಿ ಆರೋಗ್ಯದಲ್ಲಿ ವ್ಯತ್ಯಯವಾಗಿತ್ತು. ತಕ್ಷಣವೇ ಅವರನ್ನು ಸುಬ್ರಹ್ಮಣ್ಯದ ಆಸ್ಪತ್ರೆಗೆ ಸಾಗಿಸಲಾಯಿತು. ಹೆಚ್ಚಿನ ಸೌಲಭ್ಯವಿರುವ ಆಸ್ಪತ್ರೆಗೆ ಕರೆದೊಯ್ಯಲು ವೈದ್ಯರು ನಿರ್ದೇಶಿಸಿದಾಗ ಕುಟುಂಬಸ್ಥರು ಬೆಂಗಳೂರಿಗೆ ಕರೆದೊಯ್ಯುವ ಅನಿವಾರ್ಯ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಪಂಜದ ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್‌ ನ ಆ್ಯಂಬುಲೆನ್ಸ್ ಮೂಲಕ 318 ಕಿ.ಮೀ ದೂರವಿರುವ ಬೆಂಗಳೂರನ್ನು ಕೇವಲ 4:30 ಗಂಟೆಯಲ್ಲಿ ಕ್ರಮಿಸಿದರು. ಆ ಮೂಲಕ ರೋಗಿಯನ್ನು ಬೆಂಗಳೂರಿನ ಕೆಂಗೇರಿಯ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ದಾಖಲಿಸಲಾಯಿತು.

ಆ್ಯಂಬುಲೆನ್ಸನ್ನು ಪದ್ಮಕುಮಾರ್ ನಾಯರ್‌ಕೆರೆ ಮತ್ತು ನಿತಿನ್ ಭಟ್ ನೂಚಿಲ ಚಲಾಯಿಸಿ ಶೀಘ್ರವಾಗಿ ರೋಗಿಯನ್ನು ಬೆಂಗಳೂರು ತಲುಪಿಸಿದರು.

ಅವಳಿ ಚಾಲಕರು: ಸಮಾಜಮುಖಿ ಸೇವಕರು

ಪಂಜದ ಪಂಚಶ್ರೀ ಸ್ಪೋರ್ಟ್ಸ್ ಕ್ಲಬ್ ಇತ್ತೀಚೆಗೆ ಆ್ಯಂಬುಲೆನ್ಸ್ ಸೇವೆ ಆರಂಭಿಸಿತ್ತು. ಸ್ವಂತ ವಾಹನ ಹೊಂದಿದ್ದರೂ ಪದ್ಮಕುಮಾರ್ ನಾಯರ್‌ ಕೆರೆ ಸೇವಾ ರೂಪದಲ್ಲಿ ಆ್ಯಂಬುಲೆನ್ಸ್ ಚಾಲನೆ ಮಾಡುತ್ತಾರೆ. ಇವರು ಕುಕ್ಕೆಯಿಂದ ಹಾಸನ ತನಕ ಆ್ಯಂಬುಲೆನ್ಸ್ ಚಾಲನೆ ಮಾಡಿದರೆ, ಸುಬ್ರಹ್ಮಣ್ಯದ ಉದ್ಯಮಿ ನಿತಿನ್ ಭಟ್ ನೂಚಿಲ ಅವರು ಹಾಸನದಿಂದ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆ ತನಕ ಆಂಬುಲೆನ್ಸ್ ಚಲಾಯಿಸಿ, ರೋಗಿಯನ್ನು ಶೀಘ್ರ ತಲುಪಿಸುವಲ್ಲಿ ಮಹತ್ತರ ಪಾತ್ರ ವಹಿಸಿದರು.

ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಕ್ಕೆಯಿಂದ ಬೆಂಗಳೂರು ತಲುಪಲು ಅಂದಾಜು 7 ತಾಸು ಅಗತ್ಯವಿರುತ್ತದೆ.ಆದರೆ ತೀವ್ರ ವಾಹನ ದಟ್ಟಣೆ ನಡುವೆ ಕೇವಲ 4:30 ಗಂಟೆಗಳಲ್ಲಿ ತಲುಪಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News