ಕೃಷ್ಣಾ ಮೇಲ್ದಂಡೆ ಯೋಜನೆಯ 3ನೆ ಹಂತದ ಅನುಷ್ಠಾನಕ್ಕಾಗಿ 10,000 ಕೋಟಿ ರೂ. ಕ್ರಿಯಾ ಯೋಜನೆ
ಬೆಂಗಳೂರು, ಮಾ.6: ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೆ ಹಂತದ ಅನುಷ್ಠಾನಕ್ಕಾಗಿ 10 ಸಾವಿರ ಕೋಟಿ ರೂ.ನಿಗದಿಪಡಿಸಿ ಕ್ರಿಯಾ ಯೋಜನೆ ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿದ್ದಾರೆ.
ಶುಕ್ರವಾರ ವಿಧಾನಸಭೆಯಲ್ಲಿ ಈ ಘೋಷಣೆ ಮಾಡಿದ ಮುಖ್ಯಮಂತ್ರಿ, ಬಾಧಿತ 27 ಹಳ್ಳಿಗಳ ಪುನರ್ ವಸತಿ ಮತ್ತು ಪುನರ್ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು. ಈ ಯೋಜನೆಗೆ ಸಂಬಂಧಿಸಿದ ಕ್ರಿಯಾ ಯೋಜನೆ ರೂಪಿಸಿ ಮುಂದಿನ ಮೂರು ವರ್ಷಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದರು.
ಸಂಪನ್ಮೂಲ ಕ್ರೋಡೀಕರಣದಲ್ಲಿ ಯಾವುದೇ ರೀತಿಯ ಕೊರತೆ ಉಂಟಾಗದಂತೆ ಎಚ್ಚರಿಕೆ ವಹಿಸಲಾಗಿದೆ. ಅಗತ್ಯವಿರುವ ಕಡೆಯಿಂದ ಹಣಕಾಸು ಹೊಂದಿಸಲಾಗುವುದು. ಅಲ್ಲದೆ, ದಿಲ್ಲಿಗೆ ತೆರಳಿ ಕೃಷ್ಣಾ ಮೇಲ್ದಂಡೆ ಯೋಜನೆಗೆ ಹೆಚ್ಚುವರಿ ಅನುದಾನ ಒದಗಿಸುವಂತೆ ಕೇಂದ್ರ ಸರಕಾರಕ್ಕೂ ಮನವಿ ಸಲ್ಲಿಸಲಾಗುವುದು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮುಖ್ಯಮಂತ್ರಿ ನಿನ್ನೆ ತಾನೆ ಬಜೆಟ್ ಮಂಡಿಸಿದ್ದಾರೆ. ಅದರಲ್ಲಿ, ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೆ ಹಂತದ ಕಾಮಗಾರಿಗಳ ಬಗ್ಗೆ ಉಲ್ಲೇಖ ಮಾಡಿಲ್ಲ. ಈಗ ನೋಡಿದರೆ, ಎಲ್ಲರ ಒತ್ತಾಯವಿದೆ ಎಂಬ ಕಾರಣಕ್ಕಾಗಿ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದೇನೆ, ಕಾಮಗಾರಿಗಳಿಗೆ ಅಗತ್ಯ ಅನುದಾನ ಒದಗಿಸುತ್ತೇನೆ ಎಂದು ಹೇಳುತ್ತಿದ್ದಾರೆ ಎಂದರು.
ಕೃಷ್ಣಾ ಮೇಲ್ದಂಡೆ ಯೋಜನೆಯ ಕಾಮಗಾರಿಗಳಿಗೆ ಮುಖ್ಯಮಂತ್ರಿ ಹಣಕಾಸಿನ ನೆರವು ಒದಗಿಸಿದರೆ ಸಂತೋಷ. ಆದರೆ, ಈ ಸರಕಾರದಲ್ಲಿ ದುಡ್ಡೇ ಇಲ್ಲ. ಮೂಗಿಗೆ ತುಪ್ಪ ಸವರಿ, ಆ ಭಾಗದ ಜನರನ್ನು ಯಾಮಾರಿಸುವ ಪ್ರಯತ್ನವನ್ನು ಮುಖ್ಯಮಂತ್ರಿ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ, ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳ್ಳಬೇಕು. ಹಣಕಾಸಿನ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲಾಗಿದೆ. ತಕ್ಷಣವೆ ಕಾಮಗಾರಿಗಳನ್ನು ಆರಂಭಿಸಲು ಪ್ರಯತ್ನ ನಡೆಸುತ್ತೇನೆ ಎಂದರು.
10 ಸಾವಿರ ಕೋಟಿ ರೂ.ಗಳ ಬಗ್ಗೆ ಬಜೆಟ್‌ನಲ್ಲಿ ತಿಳಿಸಿಲ್ಲ. ಹೆಚ್ಚುವರಿಯಾಗಿ ಈ ಹಣವನ್ನು ಎಲ್ಲಿಂದ ತರುತ್ತೀರಾ? ಕೇಂದ್ರ ಸರಕಾರಕ್ಕೆ ಮನವಿ ಮಾಡುತ್ತೇವೆ, ಹೇಗೋ ಹಣಕಾಸು ಹೊಂದಿಸುತ್ತೇವೆ ಎಂದು ಹೇಳುವ ಮಾತುಗಳನ್ನು ನಾವು ನಂಬಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಈ ವೇಳೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಮಧ್ಯಪ್ರವೇಶಿಸಿ, ಬ್ರಿಜೇಶ್ ಪಟೇಲ್ ಸಮಿತಿ ಕರ್ನಾಟಕಕ್ಕೆ ಕೃಷ್ಣಾ ನದಿ ಪಾತ್ರದಿಂದ 173 ಟಿಎಂಸಿ ನೀರು ಹಂಚಿಕೆ ಮಾಡಿ 7 ವರ್ಷ ಆಗಿದೆ. ಹಿಂದಿನ ಸರಕಾರ ಇದಕ್ಕಾಗಿ ಒಂದು ರೂ.ಗಳನ್ನು ನೀಡಿಲ್ಲ. ಆದರೆ, 2012-13ರಲ್ಲಿ ಜಗದೀಶ್ ಶೆಟ್ಟರ್ ಸಿಎಂ ಆಗಿದ್ದಾಗ ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕಾಮಗಾರಿಗೆ 17,207 ಕೋಟಿ ರೂ. ನಿಗದಿ ಮಾಡಿ ಕ್ರಿಯಾ ಯೋಜನೆ ರೂಪಿಸಿತ್ತು ಎಂದರು. ಆನಂತರ ಬಂದಂತಹ ಸರಕಾರಗಳು 1.32 ಲಕ್ಷ ಹೆಕ್ಟೇರ್ ಭೂಮಿಗೆ ಪರಿಹಾರ ನೀಡಿದ್ದರೆ, ಈ ವೇಳೆಗಾಗಲೆ ಆಲಮಟ್ಟಿ ಅಣೆಕಟ್ಟೆಯ ಎತ್ತರ 520 ಮೀಟರ್‌ನಿಂದ 524 ಮೀಟರ್‌ಗೆ ಹೆಚ್ಚಿಸಿ, ಜಲಾಶಯದಲ್ಲಿ ನೀರು ನಿಲ್ಲಿಸಬಹುದಿತ್ತು ಎಂದು ಹೇಳಿದರು.