×
Ad

ಗೋಡ್ಸೆ ದೇಶಪ್ರೇಮಿಯಾದರೆ ವಿಧಾನಸಭೆಯಲ್ಲಿ ಗಾಂಧಿ ಪೋಟೋ ಏಕೆ ?: ಪ್ರಿಯಾಂಕ್ ಖರ್ಗೆ

Update: 2020-03-06 20:42 IST

ಬೆಂಗಳೂರು, ಮಾ. 6: ‘ಪ್ರಬುದ್ಧ ಭಾರತ ನಿರ್ಮಾಣವಾದರೆ ಮಾತ್ರ ಸಂವಿಧಾನದ ಮೂಲ ಆಶಯವಾದ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವದ ಕಲ್ಪನೆಗೆ ಅರ್ಥ ಬರುತ್ತದೆ’ ಎಂದು ಕಾಂಗ್ರೆಸ್ ಸದಸ್ಯ ಪ್ರಿಯಾಂಕ್ ಖರ್ಗೆ ಇಂದಿಲ್ಲಿ ಪ್ರತಿಪಾದಿಸಿದ್ದಾರೆ.

ಶುಕ್ರವಾರ ವಿಧಾನಸಭೆಯಲ್ಲಿ ಸಂವಿಧಾನದ ಮೇಲಿನ ವಿಶೇಷ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಒಂದು ಜಾತಿಗೆ ಸೀಮಿತಗೊಳಿಸಿರುವುದು ಸಲ್ಲ. ಅವರೊಬ್ಬ ಶ್ರೇಷ್ಠ ಸಮಾಜ ಸುಧಾರಕ. ಮಾತ್ರವಲ್ಲ, ಮಾನವ ಹಕ್ಕುಗಳ ರಕ್ಷಕ, ಆಧುನಿಕ ಭಾರತದ ಶಿಲ್ಪಿ ಎಂದು ಬಣ್ಣಿಸಿದರು.

ನಮ್ಮ ದೇಶದ ಭಗವದ್ಗೀತೆ, ಕುರಾನ್ ಮತ್ತು ಬೈಬಲ್‌ನಿಂದ ನಡೆಯದೆ ಸಂವಿಧಾನದ ಮೇಲೆ ನಡೆಯುತ್ತಿದೆ. ಇಂತಹ ಅಮೂಲ್ಯ ಗ್ರಂಥವನ್ನು ರಚಿಸಿದ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರಿಗೆ ಇತಿಹಾಸದಲ್ಲಿ ಸೂಕ್ತ ಸ್ಥಾನಮಾನ ಸಿಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಗೋಡ್ಸೆ ದೇಶಪ್ರೇಮಿಯಾದರೆ ಗಾಂಧಿ ಪೋಟೋ ಏಕೆ?: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹತ್ಯೆಗೈದ ಗೋಡ್ಸೆ ದೇಶಪ್ರೇಮಿಯಾದರೆ ಮಹಾತ್ಮ ಗಾಂಧಿ ಫೋಟೋವನ್ನು ವಿಧಾನಸಭೆಯಲ್ಲಿ ಅತ್ಯಂತ ಎತ್ತರದಲ್ಲಿ ಏಕೆ ಹಾಕಬೇಕೆಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.

ಸಂವಿಧಾನ ಮತ್ತು ಡಾ.ಅಂಬೇಡ್ಕರ್ ಅವರ ಬಗ್ಗೆ ನಿರಂತರವಾಗಿ ಅವಹೇಳನ ಮಾಡಲಾಗುತ್ತಿದ್ದು, ಅವರೆಲ್ಲರೂ ಆರೆಸ್ಸೆಸ್ ಮೂಲದಿಂದ ಬಂದವರಾಗಿದ್ದಾರೆ ಎಂದು ಆರೆಸ್ಸೆಸ್ ಮುಖ್ಯಸ್ಥ ಭಾಗವತ್, ಸಂಸದ ಅನಂತಕುಮಾರ್ ಹೆಗಡೆ ಸೇರಿ ಹಲವರ ಹೇಳಿಕೆಗಳನ್ನು ಉಲ್ಲೇಖಿಸಿದರು.

ದೇಶದ ಸ್ವಾತಂತ್ರ್ಯಕ್ಕಾಗಿ ರಕ್ತವನ್ನಲ್ಲ, ಕನಿಷ್ಟ ಬೆವರನ್ನು ಸುರಿಸದ ಕೆಲವರಿಂದು ದೇಶದ ಜನರಿಗೆ ದೇಶಭಕ್ತಿ ಪಾಠ ಮಾಡುತ್ತಿದ್ದು, ನಮ್ಮ ದೇಶದಲ್ಲಿ ಸಂವಿಧಾನೇತರ ಶಕ್ತಿಗಳ ಅಟಾಟೋಪ ಮಿತಿಮೀರಿದ್ದು, ವಾಕ್ ಸ್ವಾತಂತ್ರ್ಯವೂ ಇಲ್ಲ ಎಂದರೆ ಹೇಗೆ? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.

ಇದಕ್ಕೆ ಆಕ್ಷೇಪಿಸಿದ ಬಿಜೆಪಿಯ ಸಿದ್ದು ಸವದಿ, ಬಿ.ಸಿ.ನಾಗೇಶ್, ಸಚಿವ ಸಿ.ಟಿ.ರವಿ, ‘ನೀವೇನು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದೀರಾ?, ಸ್ವಾತಂತ್ರ್ಯಕ್ಕೆ ನಿಮ್ಮ ಕೊಡುಗೆ ಏನು ಎಂದರು. ‘ದೇಶಪ್ರೇಮದ ದೃಢೀಕರಣ ಪತ್ರ ನೀವು ಕೊಡ್ತೀರಾ?’ ಎಂದು ಖರ್ಗೆ ಏರಿದ ಧ್ವನಿಯಲ್ಲಿ ವಾಗ್ಬಾಣ ಬಿಟ್ಟರು. ಇದರಿಂದ ಸದನದಲ್ಲಿ ಕೆಲಕಾಲ ಗದ್ದಲ ಸೃಷ್ಟಿಯಾಯಿತು. ಕೂಡಲೇ ಮಧ್ಯಪ್ರವೇಶಿಸಿದ ಸ್ಪೀಕರ್ ಕಾಗೇರಿ ಎಲ್ಲರನ್ನು ಸಮಾಧಾನಪಡಿಸಿದರು.

ಭಿನ್ನಾಭಿಪ್ರಾಯ ವ್ಯಕ್ತಪಡಿಸಿದರೆ ದೇಶದ್ರೋಹ ಪಟ್ಟ: ದೇಶದ ಐಕ್ಯತೆ, ಸಮಗ್ರತೆ, ಸಮಾನತೆಗೆ ವಿರುದ್ಧ ಇದ್ದವರು ಮತ್ತು ಜಾತಿ-ಜಾತಿಗಳ ಮಧ್ಯೆ ವೈರತ್ವ ಸೃಷ್ಟಿಸುವವರನ್ನು ದೇಶದ್ರೋಹಿಗಳೆಂದು ಕರೆಯಲಾಗುತ್ತಿತ್ತು. ಆದರೆ, ಇಂದು ತಮ್ಮ ಸಿದ್ಧಾಂತ ಒಪ್ಪದೆ, ಭಿನ್ನಾಭಿಪ್ರಾಯ ವ್ಯಕ್ತಪಡಿಸಿದರೆ ಅವರಿಗೆ ದೇಶದ್ರೋಹ ಪಟ್ಟ ಕಟ್ಟಲಾಗುತ್ತಿದೆ. ಇದು ಸಂವಿಧಾನ ವಿರೋಧಿ, ಮಾತ್ರವಲ್ಲ ಸಂವಿಧಾನದ ಮೂಲ ಆಶಯಕ್ಕೆ ವಿರುದ್ಧ ಎಂದು ಪ್ರಿಯಾಂಕ್ ಖರ್ಗೆ ಟೀಕಿಸಿದರು.

ರೈತರು, ದಲಿತರು, ಆದಿವಾಸಿಗಳು, ಮಾನವ ಹಕ್ಕುಗಳ ಹೋರಾಟಗಾರರು, ಸಾಹಿತಿಗಳು, ವಿದ್ಯಾರ್ಥಿಗಳ ಮೇಲೆ ದೇಶದ್ರೋಹದ ಕೇಸ್ ದಾಖಲಿಸಲಾಗುತ್ತಿದೆ. ಉತ್ತರಪ್ರದೇಶದ ಬಿಸಿಯೂಟದಲ್ಲಿ ಚಪಾತಿ ಜತೆ ಉಪ್ಪನ್ನು ತಿನ್ನುತ್ತಿದ್ದ ಬಗ್ಗೆ ಸುದ್ದಿ ಮಾಡಿದ ಪತ್ರಕರ್ತನ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಲಾಗಿದೆ. ದೇಶದ್ರೋಹ ಕೇಸನ್ನು ಕಾನೂನು ತೀರ್ಮಾನಿಸುತ್ತಿಲ್ಲ. ಬದಲಿಗೆ ಮಾಧ್ಯಮಗಳ ಪ್ರೈಮ್ ಟೈಮ್‌ನಲ್ಲಿ ನಿರ್ಧರಿಸಲಾಗುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.

ದೇಶಭಕ್ತಿ ಮತ್ತು ರಾಷ್ಟ್ರಧ್ವಜದ ಬಗ್ಗೆ ಕನಿಷ್ಟ ಗೌರವವಿಲ್ಲದವರು, ತಮ್ಮ ಕಚೇರಿಯಲ್ಲಿ ರಾಷ್ಟ್ರಧ್ವಜ ಹಾರಿಸಲು 52 ವರ್ಷಗಳನ್ನು ತೆಗೆದುಕೊಂಡರು. ಇವರಿಗೆ ಯಾವ ಅರ್ಹತೆ ಇದೆ ಎಂದು ಆರೆಸ್ಸೆಸ್ ಮುಖಂಡರನ್ನು ಪ್ರಶ್ನಿಸಿದ ಪ್ರಿಯಾಂಕ್ ಖರ್ಗೆ, ಕಾಶ್ಮೀರದಲ್ಲಿ ಆರ್ಥಿಕ ಸ್ಥಿತಿ ಸಂಪೂರ್ಣ ಕುಸಿದಿದೆ. ಶಾಲಾ-ಕಾಲೇಜು ಬಂದ್ ಮಾಡಲಾಗಿದೆ. ಇಂಟರ್‌ನೆಟ್ ಸ್ಥಗಿತಗೊಳಿಸಲಾಗಿದೆ ಎಂದು ದೂರಿದರು.

ಇದೀಗ ದೇಶದಲ್ಲಿ ದಲಿತರು, ಆದಿವಾಸಿಗಳು, ಅಲ್ಪಸಂಖ್ಯಾತರು ಆತಂಕದಲ್ಲಿದ್ದಾರೆ. ಭಿನ್ನಾಭಿಪ್ರಾಯವುಗಳ್ಳವರು ಸಮಾಜದಲ್ಲಿರಬೇಕು. ಪ್ರಶ್ನಿಸುವುದು ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯ ಎಂದು ಸಂವಿಧಾನ ಹೇಳುತ್ತದೆ. ಆದರೆ, ಕೆಲವರು ತಮ್ಮ ಸಿದ್ಧಾಂತವನ್ನು ದೇಶದ ಮೇಲೆ ಹೇರುತ್ತಿರುವುದು ಸಂವಿಧಾನದ ಆಶಯಕ್ಕೆ ವಿರುದ್ಧ ಎಂದರು.

‘ಅಲ್ಪಸಂಖ್ಯಾತರು ತಮ್ಮ ಅಸ್ತಿತ್ವವನ್ನು ಬಹುಸಂಖ್ಯಾತರ ಕೈಯಲ್ಲಿ ಕೊಟ್ಟಿದ್ದು, ಅವರು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಬೇಕೆಂದು ಅಂಬೇಡ್ಕರ್ ಆಶಯ ವ್ಯಕ್ತಪಡಿಸಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ)ಜಾರಿ ಅಸಂವಿಧಾನಿಕ. ಈ ಬಗ್ಗೆ ಅಲ್ಪಸಂಖ್ಯಾತರಲ್ಲಿ ಆತಂಕ ಮನೆ ಮಾಡಿದೆ’

-ಪ್ರಿಯಾಂಕ್ ಖರ್ಗೆ, ಮಾಜಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News