ಸಮಾನ ಅವಕಾಶಗಳು ಸಿಗುವವರೆಗೂ ಮೀಸಲಾತಿ ಇರಬೇಕು: ಶಾಸಕ ಎನ್.ಮಹೇಶ್

Update: 2020-03-06 16:08 GMT

ಬೆಂಗಳೂರು, ಮಾ.6: ಮೀಸಲಾತಿ ಎಂಬುದು ದಾನವೂ ಅಲ್ಲ, ಬಡತನ ನಿವಾರಣೆಯ ಕಾರ್ಯಕ್ರಮವೂ ಅಲ್ಲ. ಸಮಾನ ಅವಕಾಶಗಳು ಎಲ್ಲಿಯವರೆಗೆ ಸಿಗುವುದಿಲ್ಲವೋ, ಅಲ್ಲಿಯವರೆಗೆ ಮೀಸಲಾತಿ ಜಾರಿಯಲ್ಲಿರಬೇಕು ಎಂದು ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ಶಾಸಕ ಎನ್.ಮಹೇಶ್ ಹೇಳಿದರು.

ಶುಕ್ರವಾರ ವಿಧಾನಸಭೆಯಲ್ಲಿ ಸಂವಿಧಾನದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಮ್ಮ ಮಕ್ಕಳು ಇವತ್ತು ಯಾರು ಮೀಸಲಾತಿ ಪಡೆದುಕೊಳ್ಳುತ್ತಿಲ್ಲ. ಸಾಮಾನ್ಯ ವರ್ಗದಲ್ಲಿ ಸ್ಪರ್ಧೆ ಮಾಡಿ ಯಶಸ್ಸು ಗಳಿಸುವಷ್ಟರ ಮಟ್ಟಿಗೆ ಬೆಳೆದಿದ್ದಾರೆ. ಆದರೆ, ಬಡವರ ಮಕ್ಕಳಿಗೆ ಮೀಸಲಾತಿಯ ಸದುಪಯೋಗ ಸಿಗಬೇಕು ಎಂದರು.

ಸಂವಿಧಾನಬದ್ಧವಾಗಿ ಪರಿಶಿಷ್ಟರಿಗೆ ರಾಜಕೀಯ ಮೀಸಲಾತಿಯನ್ನು ಅಂಬೇಡ್ಕರ್ ತಂದುಕೊಟ್ಟಿದ್ದಾರೆ. ಇಲ್ಲದಿದ್ದರೆ, ಸ್ವತಂತ್ರವಾಗಿ ಚುನಾವಣೆಗಳಲ್ಲಿ ಗೆದ್ದು ಬರುವ ಸಾಮರ್ಥ್ಯ ಈಗಲೂ ಈ ವರ್ಗಗಳಿಗೆ ಇಲ್ಲ. ರಾಜಕೀಯ ಮೀಸಲಾತಿಯಿಂದಾಗಿ ವಿಧಾನಸಭೆಗೆ 51 ಜನ ಶಾಸಕರು ಹಾಗೂ ಲೋಕಸಭೆಗೆ 5 ಮಂದಿ ಸಂಸದರು ಆಯ್ಕೆಯಾಗುತ್ತಿದ್ದಾರೆ ಎಂದು ಅವರು ಹೇಳಿದರು.

ಪ್ರಬುದ್ಧ ಭಾರತ ನಿರ್ಮಾಣವಾಗಬೇಕು ಎಂಬುದು ಅಂಬೇಡ್ಕರ್ ಆಶಯವಾಗಿತ್ತು. ದೇಶದಲ್ಲಿ ಎಲ್ಲರಿಗೂ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಇನ್ನೂ ಮರೀಚಿಕೆಯಾಗಿದೆ. ಪ್ರತಿಯೊಬ್ಬರಲ್ಲೂ ಭ್ರಾತೃತ್ವದ ಭಾವನೆ ಮೂಡಿದಾಗ ಮಾತ್ರ ಐಕ್ಯತೆ, ಸಮಗ್ರತೆ ನೆಲೆಸಲು ಸಾಧ್ಯವಾಗುತ್ತದೆ ಎಂದು ಮಹೇಶ್ ತಿಳಿಸಿದರು.

ಭಡ್ತಿಯಲ್ಲಿ ಮೀಸಲಾತಿ ನೀಡುವ ಕುರಿತು ಸಿದ್ದರಾಮಯ್ಯ ಸರಕಾರ ವಿಧೇಯಕವನ್ನು ಮಂಡನೆ ಮಾಡಿದ್ದರಿಂದ ನಾವು ಬದುಕಿದ್ದೇವೆ. ಇಲ್ಲದಿದ್ದರೆ, ನಮ್ಮ ಕಥೆ ಏನಾಗುತ್ತಿತ್ತು. ನ್ಯಾಯಾಲಯದಲ್ಲಿದ್ದ ಪ್ರಕರಣಗಳಿಂದ ಹಿಂಭಡ್ತಿ ಹೊಂದಿದ್ದವರ ಪಟ್ಟಿ ಮಾಡಿ, ಹಿರಿತನದ ಆಧಾರದ ಎಷ್ಟು ಮಂದಿಗೆ ಮುಂಭಡ್ತಿ ಸಿಕ್ಕಿದೆ ಎಂಬುದರ ಕುರಿತು ಪರಿಶೀಲನೆ ಮಾಡಬೇಕು ಎಂದು ಅವರು ಹೇಳಿದರು.

ಶಾಲಾ, ಕಾಲೇಜುಗಳಲ್ಲಿ ಪ್ರತಿದಿನ ಬೆಳಗಿನ ಅವಧಿಯಲ್ಲಿ ಸಂವಿಧಾನ ಪೀಠಿಕೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಬೇಕು. ನಾನು ಪ್ರತಿನಿಧಿಸುತ್ತಿರುವ ಕೊಳ್ಳೇಗಾಲದಲ್ಲಿ ಈ ರೀತಿ ಸಂವಿಧಾನ ಪೀಠಿಕೆ ಬೋಧಿಸುವ ಕೆಲಸವಾಗುತ್ತಿದೆ. ರಾಜ್ಯದ 224 ಕ್ಷೇತ್ರಗಳಲ್ಲೂ ಈ ವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದು ಮಹೇಶ್ ಸಲಹೆ ನೀಡಿದರು.

ಸಂವಿಧಾನವನ್ನು ರಚನೆ ಮಾಡಿದಾಗ ಅಸಮಾನತೆಯು 10 ವರ್ಷಗಳಲ್ಲಿ ನಿವಾರಣೆಯಾಗಬಹುದು ಎಂದು ಭಾವಿಸಿ ಮೀಸಲಾತಿ ಕಲ್ಪಿಸಲಾಗಿತ್ತು. ಸಾಮಾಜಿಕ ನ್ಯಾಯ ಹಾಗೂ ಆರ್ಥಿಕ ಸಮಾನತೆ ಎಲ್ಲರಿಗೂ ಸಿಕ್ಕಿದಾಗ ಮಾತ್ರ ಮೀಸಲಾತಿ ಹೋಗಬಹುದು. ಜೊತೆಗೆ ಎಲ್ಲಿಯವರೆಗೆ ಈ ಸಮಾಜದಲ್ಲಿ ಜಾತಿ ವ್ಯವಸ್ಥೆ ಇರುತ್ತದೊ, ಅಲ್ಲಿಯವರೆಗೆ ಮೀಸಲಾತಿ ಇರಬೇಕು ಎಂದು ಅಂಬೇಡ್ಕರ್ ಹೇಳಿದ್ದರು.

-ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News