‘ರೈತರ ಸಾಲಮನ್ನಾ’ ನಿರ್ಬಂಧ ಸಡಿಲಿಸಲು ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯ

Update: 2020-03-06 16:47 GMT

ಬೆಂಗಳೂರು, ಮಾ. 6: ಸಹಕಾರ ಬ್ಯಾಂಕುಗಳ ಮೂಲಕ ರೈತರು ಪಡೆದ ಕೃಷಿ ಸಾಲಮನ್ನಾಕ್ಕೆ ವಿಧಿಸಿರುವ ನಿರ್ಬಂಧಗಳನ್ನು ಸಡಿಲಿಸಿ ಅರ್ಹ ಎಲ್ಲ ರೈತರ ಸಾಲಮನ್ನಾ ಮಾಡಲು ಕ್ರಮ ಕೈಗೊಳ್ಳಬೇಕೆಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಶುಕ್ರವಾರ ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಶಿವಾನಂದ ಪಾಟೀಲ್ ಕೇಳಿದ ಪ್ರಶ್ನೆಗೆ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ನೀಡಿದ ಉತ್ತರದಿಂದ ತೃಪ್ತರಾಗದ ಸಿದ್ದರಾಮಯ್ಯ, ಹಿಂದಿನ ಸರಕಾರ ಷರತ್ತು ವಿಧಿಸಿದ್ದರೆ ಅದನ್ನು ಸಡಿಲಿಸಿ ಎಲ್ಲ ರೈತರಿಗೆ ಅನುಕೂಲ ಕಲ್ಪಿಸಿ ಎಂದು ಕೋರಿದರು.

ರೈತರ ಕೃಷಿ ಸಾಲಮನ್ನಾಕ್ಕೆ ಆಧಾರ್ ಕಾರ್ಡ್, ಪಡಿತರ ಚೀಟಿ, ಪಹಣಿ ಸೇರಿದಂತೆ ಹಲವು ದಾಖಲೆಗಳನ್ನು ನೀಡಬೇಕು. ಅಲ್ಲದೆ, ಎಲ್ಲ ದಾಖಲೆಗಳಲ್ಲಿ ದಾಖಲೆ ಪತ್ರಗಳು ಹೊಂದಾಣಿಕೆಯಾಗದ ತಾಂತ್ರಿಕ ಕಾರಣಕ್ಕೆ ಸಾಲಮನ್ನಾ ಅರ್ಜಿ ತಿರಸ್ಕಾರ ಸರಿಯಲ್ಲ. ಇದನ್ನು ಕೂಡಲೇ ಸರಿಪಡಿಸಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.

ಬಳಿಕ ಉತ್ತರ ನೀಡಿದ ಸಚಿವ ಸೋಮಶೇಖರ್, ಒಟ್ಟು 1,63,493 ಅರ್ಜಿಗಳು ವಿವಿಧ ಕಾರಣಗಳಿಗಾಗಿ ತಿರಸ್ಕರಿಸಿದ್ದು, ಈ ಸಂಬಂಧ ಶೀಘ್ರದಲ್ಲೆ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿ, ಅರ್ಹ ಎಲ್ಲ ರೈತರ ಸಾಲಮನ್ನಾಕ್ಕೆ ವಿಧಿಸಿರುವ ಷರತ್ತುಗಳನ್ನು ಸಡಿಸಲಾಗುವುದು ಎಂದು ಭರವಸೆ ನೀಡಿದರು.

ಕೃಷಿ ಸಾಲಗಳ ಬಡ್ಡಿ ಸಹಾಯಧನ ಯೋಜನೆ ಮತ್ತು ಸ್ವಸಹಾಯ ಗುಂಪುಗಳ ಬಡ್ಡಿ ಸಹಾಯಧನ ಯೋಜನೆಯಡಿ ಸಹಕಾರ ಬ್ಯಾಂಕುಗಳಿಗೆ ಮಾರ್ಚ್ ಅಂತ್ಯದೊಳಗೆ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದೆಂದು ಸೋಮಶೇಖರ್ ಸದನಕ್ಕೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News