ಗೋಣಿಕೊಪ್ಪ: ಬೇನಾಮಿ ಮೈಕ್ರೋ ಫೈನಾನ್ಸ್ ಗಳಿಂದ ಕಿರುಕುಳ ಆರೋಪ; ಮಹಿಳೆಯರಿಂದ ಪ್ರತಿಭಟನೆ

Update: 2020-03-06 17:03 GMT

ಮಡಿಕೇರಿ, ಮಾ.6: ಗುಂಪು ಗುಂಪಾಗಿ ಸಾಲ ನೀಡಿ ಅಧಿಕ ಬಡ್ಡಿ ವಸೂಲಿ ಮಾಡುತ್ತಿರುವ ಬೇನಾಮಿ ಮೈಕ್ರೋ ಫೈನಾನ್ಸ್ ಗಳಿಂದ ಕಿರುಕುಳವಾಗುತ್ತಿದೆ ಎಂದು ಆರೋಪಿಸಿ ಗೋಣಿಕೊಪ್ಪದಲ್ಲಿ ಮಹಿಳೆಯರು ಪ್ರತಿಭಟನಾ ಮೆರವಣಿಗೆ ನಡೆಸಿದರು.

ಕರ್ನಾಟಕ ರಾಜ್ಯ ಋಣಮುಕ್ತ ಹೋರಾಟ ಸಮಿತಿಯ ವಿರಾಜಪೇಟೆ ತಾಲೂಕು ಘಟಕದ ನೇತೃತ್ವದಲ್ಲಿ ಪೊನ್ನಂಪೇಟೆ ರಸ್ತೆಯಿಂದ ಬಸ್ ನಿಲ್ದಾಣದವರೆಗೆ ಮೆರವಣಿಗೆ ನಡೆಯಿತು. ಈ ಸಂದರ್ಭ ಮಾತನಾಡಿದ ಮುಖಂಡರಾದ ಹೆಚ್.ಎ.ಪುಷ್ಪ ಹರೀಶ್, ಬೇನಾಮಿ ಮೈಕ್ರೋ ಫೈನಾನ್ಸ್ ಗಳ ಏಜೆಂಟರು ಹೊತ್ತಿಲ್ಲದ ಹೊತ್ತಿನಲ್ಲಿ ಮಹಿಳೆಯರ ಮನೆಗೆ ಭೇಟಿ ನೀಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಸಾಲ ಮರುಪಾವತಿಸುವಂತೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ಇವರುಗಳ ನಿರಂತರ ಕಿರುಕುಳದಿಂದ ಬೇಸತ್ತ ಮಹಿಳೆಯೊಬ್ಬರು ಇತ್ತೀಚೆಗೆ ಆತ್ಮಹತ್ಯೆಗೆ ಶರಣಾದ ಘಟನೆಯೂ ನಡೆದಿದೆ ಎಂದು ಆರೋಪಿಸಿದರು. ಪೊಲೀಸರು ತಕ್ಷಣ ಕಠಿಣ ಕ್ರಮಕ್ಕೆ ಮುಂದಾಗಬೇಕೆಂದು ಅವರು ಒತ್ತಾಯಿಸಿದರು.  

ಸೇವಕಿ ಕುಸುಮಾ ಚಂದ್ರಶೇಖರ್ ಮಾತನಾಡಿ, ಬೇನಾಮಿ ಮೈಕ್ರೋ ಫೈನಾನ್ಸ್ ಗಳ ವಿರುದ್ದ ಈ ಹಿಂದೆಯೂ ಹೋರಾಟ ನಡೆಸಲಾಗಿದೆ, ಆದರೂ ಏಜೆಂಟರುಗಳ ಕಿರುಕುಳ ಮುಂದುವರೆದಿದೆ. ಸಾಲ ಪಡೆದಿರುವವರು ಕೂಲಿ ಕಾರ್ಮಿಕರಾಗಿರುವುದರಿಂದ ಸಾಲ ಮರುಪಾವತಿಸಲು ಸಾಧ್ಯವಾಗದೆ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಪ್ರಾಕೃತಿಕ ವಿಕೋಪದಿಂದ ಹಲವು ಕುಟುಂಬಗಳು ಮನೆಗಳನ್ನು ಕಳೆದುಕೊಂಡು ಬೀದಿ ಪಾಲಾಗಿವೆ. ಬಡ ಕಾರ್ಮಿಕರಿಗೆ ಮೊದಲಿನಂತೆ ನಿರಂತರವಾಗಿ ಕೆಲಸ ಸಿಗುತ್ತಿಲ್ಲ. ಆರ್ಥಿಕವಾಗಿ ಜಿಲ್ಲೆಯ ಎಲ್ಲಾ ಕ್ಷೇತ್ರಗಳು ನಷ್ಟದ ಹಾದಿಯಲ್ಲಿರುವುದರಿಂದ ಮೈಕ್ರೋ ಫೈನಾನ್ಸ್ ಗಳು ಸಾಲ ವಸೂಲಾತಿ ಸಂದರ್ಭ ಮಾನವೀಯತೆಯನ್ನು ಪ್ರದರ್ಶಿಸಬೇಕಾಗಿದೆ. ವಿನಾಕಾರಣ ದುರುದ್ದೇಶದಿಂದ ಕಿರುಕುಳ ನೀಡುವುದನ್ನು ಮುಂದುವರೆಸಿದರೆ ಇಡೀ ಮಹಿಳಾ ಸಮೂಹ ಬೀದಿಗಿಳಿದು ಹೋರಾಟ ನಡೆಸಲಿದೆ ಎಂದು ಎಚ್ಚರಿಕೆ ನೀಡಿದರು.

ಕಿರುಕುಳ ನೀಡುತ್ತಿರುವ ಫೈನಾನ್ಸ್ ಗಳ ವಿರುದ್ಧ ವಿಧಾನಸಭಾ ಅಧಿವೇಶನದಲ್ಲಿ ನಿರ್ಣಯ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಪ್ರತಿಭಟನಾಕಾರರು ಗೋಣಿಕೊಪ್ಪ ವೃತ್ತ ನಿರೀಕ್ಷಕ ರಾಮರೆಡ್ಡಿ ಅವರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು. ಪ್ರಮುಖರಾದ ಮಂಜುಳ, ಪುಷ್ಪ, ಹೆಚ್.ಆರ್.ಪರಶುರಾಮ್, ಮಂಜುನಾಥ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News