ಮಂಡ್ಯ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮಹಿಳೆಯರಿಂದ ಜೈಲ್ ಭರೋ ಚಳವಳಿ
ಮಂಡ್ಯ, ಮಾ.6: ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ದುಡಿಯುವ ಮಹಿಳೆಯರ ಸಮನ್ವಯ ಸಮಿತಿ ವತಿಯಿಂದ ಶುಕ್ರವಾರ ನಗರದಲ್ಲಿ ಮಹಿಳೆಯರ ಜೈಲ್‍ಭರೋ ಚಳವಳಿ ನಡೆಯಿತು.
ಸಿಲ್ವರ್ ಜ್ಯೂಬಿಲಿ ಪಾರ್ಕ್‍ನಿಂದ ಮೆರವಣಿಗೆ ನಡೆಸಿ ಪ್ರಧಾನ ಅಂಚೆ ಕಚೇರಿಗೆ ನುಗ್ಗಲು ಯತ್ನಿಸಿದ ಪ್ರತಿಭಟನಾನಿರತ ಮಹಿಳೆಯರನ್ನು ಪೊಲೀಸರು ಬಂಧಿಸಿ, ನಂತರ ಬಿಡುಗಡೆ ಮಾಡಿದರು.
ದುಡಿಯುವ ಮಹಿಳೆಯರು 109 ವರ್ಷಗಳ ಹಿಂದೆ ಗಳಿಸಿದ್ದ ಬೇಡಿಕೆಗಳನ್ನು ಈಗ ಹಲವಾರು ದೇಶಗಳು ಸೇರಿದಂತೆ ಭಾರತದಲ್ಲೂ ವಾಪಸ್ಸು ಪಡಯಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಸಮಾನ ವೇತನ, ಸಮಾನ ಹಕ್ಕು, ಮೂಲ ವೇತನ, 8 ಗಂಟೆ ಕೆಲಸ, ಮತದಾನದ ಹಕ್ಕು, ಕೆಲಸದ ಭದ್ರತೆ, ಸಾಮಾಜಿಕ ಭದ್ರತೆ ಪ್ರಶ್ನೆಗಳು ತೀವ್ರ ಬೆದರಿಕೆಗೆ ಒಳಗಾಗಿವೆ ಎಂದು ಅವರು ಕಿಡಿಕಾರಿದರು.
ಅಲ್ಲದೆ, ಈಗಿನ ಬಿಜೆಪಿಯ ಕೋಮುವಾದಿ, ಸರ್ವಾಧಿಕಾರಿ ಆಡಳಿತದಲ್ಲಿ ಮಹಿಳೆಯರ ಸ್ವಾತಂತ್ರ್ಯ ಮತ್ತು ಸುರಕ್ಷತೆ ತೀವ್ರತರವಾದ ದಾಳಿಗೆ ಗುರಿಯಾಗಿವೆ ಎಂದು ಅವರು ಕೇಂದ್ರ ಸರಕಾರದ ವಿರುದ್ಧ ಹರಿಹಾಯ್ದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ರಜಿಯಾ ಬೇಗಂ, ಗಾಯತ್ರಿ, ಜಯಲಕ್ಷ್ಮಮ್ಮ, ಪುಟ್ಟಮ್ಮ, ಲತಾ, ಕಮಲ, ಮಂಗಳ, ಶಿವಮ್ಮ, ಇತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ಪ್ರಮುಖ ಬೇಡಿಕೆಗಳು
ಮಹಿಳೆಯರ ಕೆಲಸ ಮಾನ್ಯ ಮಾಡಬೇಕು. ಸಂಬಳವಿಲ್ಲದ ಕೆಲಸವನ್ನು ಜಿಡಿಪಿ ಲೆಕ್ಕಕ್ಕೆ ಸೇರಿಸಿ ಸಮಾನ ವೇತನ ನೀಡಬೇಕು. ಸ್ಕೀಂಗಳಲ್ಲಿ ದುಡಿಯುವ ಅಂಗನವಾಡಿ, ಬಿಸಿಯೂಟ, ಆಶಾ, ನರ್ಸ್, ಎಸ್‍ಎಸ್‍ಎ, ಎನ್‍ಆರ್‍ಎಚ್‍ಎಂಗಳಲ್ಲಿ ದುಡಿಯುವವರನ್ನು ನೌಕರರಾಗಿ ಪರಿಗಣಿಸಬೇಕು.
ಸಿಎಎ, ಎನ್‍ಆರ್‍ಸಿ, ಎನ್‍ಪಿಆರ್ ಹಿಂಪಡೆಯಬೇಕು. 45ನೇ ಅಖಿಲ ಭಾರತ ರಾಷ್ಟ್ರೀಯ ಕಾರ್ಮಿಕ ಸಮ್ಮೇಳನದ ಶಿಫಾರಸ್ಸನ್ನು ಜಾರಿ ಮಾಡಬೇಕು.
ಎಲ್ಲರಿಗೂ ಉದ್ಯೋಗ ನೀಡಿ ಕನಿಷ್ಠ ವೇತನ ಮತ್ತು ಸಮಾನ ವೇತನ ನೀಡಬೇಕು. ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಯಬೇಕು ಹಾಗೂ ಅತ್ಯಾಚಾರಿಗಳಿಗೆ ಶಿಕ್ಷೆಯಾಗಬೇಕು. ಎಲ್ಲ ಚುನಾಯಿತ ಸಮಿತಿಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಒದಗಿಸಬೇಕು.