ಸಾಲಮನ್ನಾ ವಿಚಾರ: ಕುಮಾರಸ್ವಾಮಿಗೆ ತಿರುಗೇಟು ನೀಡಿದ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದೇನು ?

Update: 2020-03-07 13:01 GMT

ಹಾವೇರಿ, ಮಾ. 7: ‘ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಸಾಲಮನ್ನಾ ಘೋಷಣೆ ಮಾಡಿ ಹೋದರೆ ಹೊರತು, ಅದಕ್ಕಾಗಿ ಸೂಕ್ತ ರೂಪುರೇಷೆ ಸಿದ್ಧಪಡಿಸಲಿಲ್ಲ. ಬಾಯಿಗೆ ಬಂದಂತೆ ಘೋಷಣೆ ಮಾಡುವುದು ದೊಡ್ಡ ವಿಷಯವೇನಲ್ಲ’ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಟೀಕಿಸಿದ್ದಾರೆ.

ಶನಿವಾರ ಜಿಲ್ಲೆಯ ಹಿರೇಕೆರೂರಿನಲ್ಲಿ ಮಾತನಾಡಿದ ಅವರು, ಸರಿಯಾಗಿ ಯೋಜನೆ ರೂಪಿಸದೇ ಕುಮಾರಸ್ವಾಮಿ ಬಾಯಿಗೆ ಬಂದಂತೆ ಸಾಲಮನ್ನಾ ಘೋಷಣೆ ಮಾಡಿದ್ದಾರೆ. ಈಗ ರೈತರ ಸಾಲಮನ್ನಾ ಖೋತಾ ಆಗಿದೆ ಎಂದು ಅವರು ಅಪಪ್ರಚಾರ ಮಾಡುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.

ಯಾವುದೇ ರೈತರಿಗೂ ಅನ್ಯಾಯ ಮಾಡುವುದಿಲ್ಲ. ದಾಖಲೆಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಜರುಗಿಸಲಾಗುವುದು ಎಂದ ಅವರು, ಬಾಯಿಗೆ ಬಂದಂತೆ ಘೋಷಿಸುವುದು, ಮನಸೋ ಇಚ್ಛೆ ಆಶ್ವಾಸನೆ ನೀಡುವ ಕೆಲಸವನ್ನು ಎಚ್‌ಡಿಕೆ ಮಾಡಿದ್ದಾರೆ. ಇದೀಗ ಅದನ್ನು ತೀರಿಸುವ ಕೆಲಸವನ್ನು ಬಿಎಸ್‌ವೈ ಮಾಡುತ್ತಿದ್ದಾರೆ. ಘೋಷಣೆ ಮಾಡಿ ಹೋಗುವುದಕ್ಕಿಂತ ನುಡಿದಂತೆ ನಡೆದುಕೊಳ್ಳುವುದು ಮುಖ್ಯ ಎಂದರು.

ರೈತರ ಸಾಲಮನ್ನಾಕ್ಕೆ ದಾಖಲಾತಿ ಪರಿಶೀಲಿಸಲಾಗುತ್ತಿದೆ. ಕುಮಾರಸ್ವಾಮಿ ಹಾಗೂ ಸಿದ್ದರಾಮಯ ವಿಪಕ್ಷ ಸ್ಥಾನದಲ್ಲಿದ್ದಾರೆ. ಹೀಗಾಗಿ ವಿರೋಧ ಮಾಡುವುದು ಅವರ ಜನ್ಮ ಸಿದ್ಧ ಹಕ್ಕು ಎಂದುಕೊಂಡಿದ್ದಾರೆ. ಇರುವ ಸಂಪನ್ಮೂಲಗಳ ಮಿತಿಯಲ್ಲೆ ಬಿಎಸ್‌ವೈ ಸಂತುಲಿತ ಬಜೆಟ್ ಮಂಡಿಸಿದ್ದಾರೆ. ರೈತರ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ ನೀಡಿದ್ದಾರೆಂದು ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News