ಮನೆಯಲ್ಲಿದ್ದವರನ್ನು ಕಟ್ಟಿ ಹಾಕಿ ಚಿನ್ನಾಭರಣ ದೋಚಿದ ದರೋಡೆಕೋರರ ತಂಡ

Update: 2020-03-08 12:09 GMT

ಚಿಕ್ಕಮಗಳೂರು, ಮಾ.7: 20 ದರೋಡೆ ಕೋರರ ತಂಡವೊಂದು ಸಿನಿಮೀಯ ರೀತಿಯಲ್ಲಿ ಒಂಟಿ ಮನೆಗೆ ನುಗ್ಗಿ ಮನೆಯಲ್ಲಿದ್ದವರನ್ನು ಕಟ್ಟಿ ಹಾಕಿ ಚಿನ್ನಾಭರಣ ದರೋಡೆ ಮಾಡಿದ ಘಟನೆ ಶುಕ್ರವಾರ ರಾತ್ರಿ ಜಿಲ್ಲೆಯ ಕೊಪ್ಪ ತಾಲೂಕಿನ ಗುಡ್ಡೆತೋಟ ಎಂಬಲ್ಲಿ ವರದಿಯಾಗಿದೆ.

ಕೊಪ್ಪ ತಾಲೂಕಿನ ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಗುಡ್ಡೆತೋಟ ಗ್ರಾಮದ ವಿಜಯರಾಘವ ಎಂಬವರ ಮನೆಗೆ ಶುಕ್ರವಾರ ರಾತ್ರಿ 12 ಗಂಟೆ ವೇಳೆಗೆ ಮುಖಕ್ಕೆ ಮಾಸ್ಕ್ ಹಾಕಿದ್ದ 20 ಮಂದಿ ಇದ್ದ ದರೋಡೆಕೋರರು ಬಾಗಿಲು ಒಡೆದು ಏಕಾಏಕಿ ನುಗ್ಗಿದ್ದಾರೆ. ನಂತರ ವಿಜಯರಾಘವ ಸೇರಿದಂತೆ ಮನೆಯಲ್ಲಿದ್ದ ನಾಲ್ವರನ್ನು ಹಗ್ಗದಿಂದ ಕಟ್ಟಿ ಹಾಕಿದ್ದಾರೆ. ನಂತರ ಮನೆಯ ನಾಲ್ಕೂ ಮಂದಿಗೆ ಕಿರುಚದಂತೆ ಚಾಕು ತೋರಿಸಿ ಬಾಯಿಗೆ ಬಟ್ಟೆ, ಪ್ಲಾಸ್ಟರ್ ಕಟ್ಟಿದ್ದಾರೆ, ಬಳಿಕ ಎಲ್ಲರನ್ನೂ ಮನೆಯಲ್ಲಿ ರೂಮೊಂದರಲ್ಲಿ ಕೂಡಿ ಹಾಕಿ 12ರಿಂದ ಮಧ್ಯರಾತ್ರಿ 2ರವರೆಗೆ ಮನೆಯಲ್ಲಿ ಚಿನ್ನಾಭರಣಕ್ಕಾಗಿ ಹುಡುಕಾಡಿದ್ದಾರೆಂದು ತಿಳಿದುಬಂದಿದೆ.

ರಾತ್ರಿ 2 ಗಂಟೆ ಕಳೆಯುತ್ತಿದ್ದಂತೆ ಮನೆಯಲ್ಲಿದ್ದವರನ್ನು ಹಾಗೆಯೇ ಬಿಟ್ಟು ಪರಾರಿಯಾಗಿದ್ದಾರೆ. ಬೆಳಗಾಗುತ್ತಿದ್ದಂತೆ ವಿಜಯರಾಘವ ಅವರ ಮನೆಯಿಂದ ಕೂಗಾಡುತ್ತಿದ್ದ ದೃಶ್ಯ ಕೇಳಿದ ಸಮೀಪದ ನಿವಾಸಿಗಳು ಮನೆಗೆ ಬಂದಾಗ ದರೋಡೆ ಘಟನೆ ಬೆಳಕಿಗೆ ಬಂದಿದೆ ಎಂದು ಹೇಳಲಾಗುತ್ತಿದೆ.

ದರೋಡೆಕೋರರು ಮನೆಯಲ್ಲಿದ್ದ ಚಿನ್ನಾಭರಣ ಸೇರಿದಂತೆ ನಗರದನ್ನು ಹೊತ್ತೊಯ್ದಿದ್ದಾರೆಂದು ಹೇಳಲಾಗುತ್ತಿದೆ. ಘಟನೆ ಸಂಬಂಧ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಶ್ವಾನದಳದೊಂದಿಗೆ ಮನೆಯನ್ನು ಪರಿಶೀಲಿಸಿ ತನಿಖೆ ಆರಂಭಿಸಿದ್ದಾರೆ. ದರೋಡೆ ಕೃತ್ಯದ ಬಗ್ಗೆ ಹೆಚ್ಚಿನ ಮಾಹಿತಿ ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News