'ಪಕ್ಷದಲ್ಲಿ ಪ್ರಾಮಾಣಿಕರಿಗೆ ಅವಕಾಶವಿಲ್ಲ': ಜೆಡಿಎಸ್ ತೊರೆದ ವಿಧಾನಪರಿಷತ್‍ ಮಾಜಿ ಸದಸ್ಯ

Update: 2020-03-07 14:18 GMT

ದಾವಣಗೆರೆ, ಮಾ.7: ಜನತಾದಳ (ಜಾತ್ಯತೀತ) ಪಕ್ಷದ ಪ್ರಾಥಮಿಕ ಸದಸ್ಯತ್ವ ಸೇರಿದಂತೆ ಎಲ್ಲ ಹುದ್ದೆಗಳಿಗೆ ರಾಜೀನಾಮೆ ಸಲ್ಲಿಸಿದ್ದೇನೆ ಎಂದು ಜೆಡಿಎಸ್‍ನ ವಿಧಾನಪರಿಷತ್‍ನ ಮಾಜಿ ಸದಸ್ಯ ರಮೇಶ್ ಬಾಬು ತಿಳಿಸಿದ್ದಾರೆ.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ರಾಜಕೀಯ ಪಕ್ಷಕ್ಕೆ ಇರಬೇಕಾದ ಗುಣಗಳನ್ನು ಜೆಡಿಎಸ್ ಪಕ್ಷ ಕಳೆದುಕೊಳ್ಳುತ್ತಿದೆ. ಪಕ್ಷದಲ್ಲಿ ಪ್ರಾಮಾಣಿಕರಿಗೆ ಅವಕಾಶವಿಲ್ಲ. ಪಕ್ಷಕ್ಕಾಗಿ ದುಡಿಯುತ್ತಿರುವ ಕಾರ್ಯಕರ್ತರನ್ನು ಕಡೆಗಣಿಸಲಾಗುತ್ತಿದೆ, ಪ್ರಾದೇಶಿಕ ಪಕ್ಷದ ಅಗತ್ಯವಿದೆ ಎಂಬ ಕಾರ್ಯಕರ್ತರ ನಂಬಿಕೆಗೆ ಇಂದು ಅನ್ಯಾಯವಾಗುತ್ತಿದೆ. ಅದ್ದರಿಂದ ಜೆಡಿಎಸ್ ಪಕ್ಷದ ನಿಷ್ಠರು ಪಕ್ಷ ಬಿಡುತ್ತಿದ್ದಾರೆ ಎಂದು ಹೇಳಿದರು.  

ಕಳೆದ 40 ವರ್ಷಗಳಿಂದ ಕಾರ್ಯಕರ್ತನಿಂದ ಹಿಡಿದು ರಾಷ್ಟ್ರಿಯ ಪ್ರಧಾನ ಕಾರ್ಯದರ್ಶಿ, ರಾಷ್ಟ್ರೀಯ ವಕ್ತಾರನಾಗಿ ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದೇನೆ. ಪಕ್ಷದ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದ್ದೇನೆ. ಪೂರ್ಣಾವಧಿಗೆ ಪರಿಷತ್ ಸದಸ್ಯನಾಗಿ ಕಾರ್ಯನಿರ್ವಹಿಸುವ ಅವಕಾಶ ದೊರೆಯಲಿಲ್ಲ. ಈ ಹಿನ್ನಲೆ ಶೀಘ್ರವೇ ಬೇರೊಂದು ಪಕ್ಷದ ಜೊತೆ ಗುರುತಿಸಿಕೊಳ್ಳುವೆ. ಇಲ್ಲವೇ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಗೆ ಪಕ್ಷೇತರ ಆಭ್ಯರ್ಥಿಯಾಗಿ ಸ್ಪರ್ಧಿಸಲಿದ್ದೇನೆ. ಬೇರೆ ಪಕ್ಷದಿಂದ ಆಫರ್ ಬಂದರೆ ಪರಿಗಣಿಸುತ್ತೇನೆ. ನನ್ನ ಮುಂದಿನ ಹಾದಿ ಮುಕ್ತವಾಗಿದೆ. ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದರು. 

ಪತ್ರಿಕಾಗೋಷ್ಠಿಯಲ್ಲಿ ಮಂಜುನಾಯ್ಕ್, ಬಸವರಾಜ್ ಸೇರಿದಂತೆ ಇತರರು ಇದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News