ಆರ್‌ಟಿಇಗೆ ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ: ಮಾ.26ರಿಂದ ಅರ್ಜಿ ಸಲ್ಲಿಕೆ ಪ್ರಾರಂಭ

Update: 2020-03-07 17:20 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮಾ.7: ಸಾರ್ವಜನಿಕ ಶಿಕ್ಷಣ ಇಲಾಖೆ 2020-21ನೇ ಸಾಲಿಗೆ ಶಿಕ್ಷಣ ಹಕ್ಕು ಕಾಯ್ದೆ(ಆರ್‌ಟಿಇ) ಅಡಿಯಲ್ಲಿ ಸರಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳಲ್ಲಿ 1ರಿಂದ 8ನೇ ತರಗತಿವರೆಗೆ ದುರ್ಬಲ ವರ್ಗಗಳ ಮಕ್ಕಳ ಪ್ರವೇಶಾತಿಗೆ ಮಾರ್ಚ್ 26ರಿಂದ ಎ.20ರವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಎ.27ರಂದು ಲಾಟರಿ ಪ್ರಕ್ರಿಯೆ ಮೂಲಕ ಅರ್ಹ ಅಭ್ಯರ್ಥಿಗಳು ಅಂತಿಮ ಪಟ್ಟಿ ಪ್ರಕಟಿಸಲಾಗುತ್ತದೆ. ಮೇ 5ರಿಂದ ದಾಖಲಾತಿ ಪ್ರಕ್ರಿಯೆ ಪ್ರಾರಂಭವಾಗಲಿದೆ. ನೆರೆಹೊರೆ ಶಾಲೆಗಳಿಗೆ ಸಂಬಂಧಿಸಿದಂತೆ ಕಳೆದ ಬಾರಿಯಂತೆ ಈ ಬಾರಿ ಮೊದಲು ಸರಕಾರಿ ಶಾಲೆ, ನಂತರ ಅನುದಾನಿತ ಹಾಗೂ ಅಂತಿಮವಾಗಿ ಖಾಸಗಿ ಶಾಲೆಗಳ ಸೀಟುಗಳು ಆಯ್ಕೆಗೆ ಅವಕಾಶ ಮಾಡಿಕೊಡಲಾಗಿದೆ.

ಅನಾಥ ಮಗು, ವಿಶೇಷ ಅಗತ್ಯತೆಯುಳ್ಳ ಮಗು, ಎಚ್‌ಐವಿ ಭಾದಿತ ಮಗು, ವಲಸೆ ಮತ್ತು ಬೀದಿ ಮಗು, ಬರಗಾಲದ ಕಾರಣ ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬದ ಮಗು, ಮಂಗಳಮುಖಿಯರ ಮಕ್ಕಳು, ಪರಿಶಿಷ್ಟ ಜಾತಿ, ಪಂಗಡ ಹಾಗೂ ಇತರೆ ದುರ್ಬಲ ವರ್ಗಗಳ ಮಕ್ಕಳ ಪ್ರವೇಶಾತಿಗೆ ಪ್ರಮುಖ ಆದ್ಯತೆ ನೀಡಲಾಗುತ್ತದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ನಂತರ ತಂತ್ರಾಂಶದ ಮೂಲಕ ನೈಜತೆ ತಾಳೆ ಆಗದ ಅಥವಾ ಕ್ರಮಬದ್ಧವಲ್ಲದ ಅರ್ಜಿಗಳ ತಂದೆ, ತಾಯಿ ಹಾಗೂ ಪೋಷಕರ ಮೊಬೈಲ್‌ಗೆ ದೋಷಗಳನ್ನು ಸರಿಪಡಿಸಲು ಎಸ್‌ಎಂಎಸ್ ಕಳುಹಿಸಲಾಗುವುದು. ಇದಕ್ಕೆ ಸಂಬಂಧಿಸಿದ ಪೋಷಕರು ಸಕಾಲಕ್ಕೆ ಪ್ರತಿಕ್ರಿಯಿಸಬೇಕೆಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

ಆರ್‌ಟಿಇ ವೇಳಾಪಟ್ಟಿ

-ಮಾ.9: ಸರಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳು ಸೇರಿದಂತೆ ನೆರೆಹೊರೆ ಶಾಲೆಗಳ ತಾತ್ಕಾಲಿಕ ಪಟ್ಟಿ ಪ್ರಕಟಣೆ

-ಮಾ.16: ನೆರೆಹೊರೆ ಶಾಲೆಗಳ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಕೊನೆಯ ದಿನಾಂಕ

-ಮಾ.19: ನೆರೆಹೊರೆ ಶಾಲೆಗಳ ಅಂತಿಮ ಪಟ್ಟಿ ಹಾಗೂ ಶಾಲೆಗಳಲ್ಲಿ ಲಭ್ಯವಿರುವ ಸೀಟುಗಳ ಪ್ರಕಟ

-ಮಾ.26ರಿಂದ ಎ.20: ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ

-ಮಾ.27-ಎ.24: ಅರ್ಜಿಗಳ ಪರಿಶೀಲನೆ

-ಎ.27: ಲಾಟರಿ ಪ್ರಕ್ರಿಯೆಗೆ ಅರ್ಹ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟನೆ

-ಮೇ.4: ಆನ್‌ಲೈನ್ ತಂತ್ರಾಂಶದ ಮೂಲಕ ಮೊದಲ ಸುತ್ತಿನ ಸೀಟು ಹಂಚಿಕೆ

-ಮೇ.5ರಿಂದ 11: ಶಾಲೆಗಳ ದಾಖಲಾತಿ ಆರಂಭ

-ಮೇ 21: ಆನ್‌ಲೈನ್ ತಂತ್ರಾಂಶದ ಮೂಲಕ 2ನೇ ಸುತ್ತಿನ ಸೀಟು ಹಂಚಿಕೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News