ಶಾಸಕ ಯತ್ನಾಳ್ ವಿರುದ್ಧ ಜಾತಿ ನಿಂದನೆ ಪ್ರಕರಣದಡಿ ದೂರು

Update: 2020-03-07 18:21 GMT

ದಾವಣಗೆರೆ, ಮಾ.7: ಬಜೆಟ್ ಅಧಿವೇಶನ ಸಂದರ್ಭ ಸಂವಿಧಾನ ಕುರಿತು ಚರ್ಚೆ ನಡೆಯುವ ವೇಳೆ ಮಹರ್ಷಿ ವಾಲ್ಮೀಕಿ ಅವರನ್ನು ನಿಂದಿಸಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ನಾಯಕ ಸಮಾಜ ಹಾಗೂ ಎಲ್ಲಾ ಶೋಷಿತ ಸಮುದಾಯಗಳ ಮುಖಂಡರು ಇಲ್ಲಿನ ಬಡಾವಣೆ ಠಾಣೆಗೆ ದೂರು ನೀಡಿದ್ದಾರೆ.

'ಮಹರ್ಷಿ ವಾಲ್ಮೀಕಿ ಅವರನ್ನು ಅಸ್ಪೃಶ್ಯ, ಅವರು ಹುಟ್ಟಿರುವುದು ಕೆಳಜಾತಿಯಲ್ಲಿ ಎಂದು ಟೀಕಿಸಿದ್ದು, ಹೀಗಾಗಿ ಯತ್ನಾಳ್ ವಿರುದ್ಧ ಜಾತಿ ನಿಂದನೆ ದೂರು ದಾಖಲಿಸಲಾಗಿದೆ' ಎಂದು ಸಮಾಜದ ಮುಖಂಡ ರಾಘು ದೊಡ್ಮನಿ ಹಾಗೂ ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಿ.ಬಸವರಾಜ್ ತಿಳಿಸಿದರು. 

ದೂರು ನೀಡಿದ ನಂತರ ಮಾತನಾಡಿದ ಸಮಾಜದ ಮುಖಂಡ ರಾಘು ದೊಡ್ಡಮನಿ 'ವಾಲ್ಮೀಕಿ ಅವರನ್ನು ಅಸ್ಪೃಶ್ಯ ಎಂದು ಹೇಳುವ ಮೂಲಕ ಶೋಷಿತ ಸಮುದಾಯದ ಬಗ್ಗೆ ಕೀಳುಮಟ್ಟದ ಪದಗಳನ್ನು ಬಳಸಿದ್ದಾರೆ. ಈ ಕುರಿತು ತಾಲೂಕು, ಜಿಲ್ಲಾ ಮಟ್ಟದಲ್ಲಿ ಜಾತಿ ನಿಂದನೆ ದೂರು ದಾಖಲಿಸಿ ಹೋರಾಟ ಮಾಡುತ್ತಿದ್ದೇವೆ' ಎಂದು ಹೇಳಿದರು.

ಕೀಳುಮಟ್ಟದ ಹೇಳಿಕೆ ನೀಡಿರುವ ಯತ್ನಾಳ್ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕು ಎಂದು ಸ್ಪೀಕರ್ ಅವರನ್ನು ಆಗ್ರಹಿಸಿದ ಅವರು, ಅವರು ಶಾಸಕ ಸ್ಥಾನದಲ್ಲಿ ಮುಂದುವರೆಯುವ ಅರ್ಹತೆ ಇಲ್ಲ. ಕೂಡಲೇ ಅವರು ರಾಜಕೀಯದಿಂದ ನಿವೃತ್ತಿ ಹೊಂದಬೇಕು. ಅಲ್ಲದೇ ಸಮಾಜದ ಮುಂದೆ ಬಹಿರಂಗವಾಗಿ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟ ಮಾಡುವುದಾಗಿ ತಿಳಿಸಿದರು.

ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಿ.ಬಸವರಾಜ್ ಮಾತನಾಡಿ, 'ಬಸನಗೌಡ ಪಾಟೀಲ್ ಯತ್ನಾಳ್ ಒಬ್ಬ ಸಾಮಾನ್ಯ ಜ್ಞಾನ ಇಲ್ಲದ ಮನುಷ್ಯ. ಇಡೀ ಜಗತ್ತು ಪೂಜಿಸುವ ಆದಿ ಕವಿಗಳನ್ನು ನಿಂದಿಸುವ ಮೂಲಕ ಶೋಷಿತ ಸಮುದಾಯವನ್ನು ನಿಂದಿಸಿದ್ದಾರೆ. ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು' ಎಂದು ಆಗ್ರಹಿಸಿದರು.

ಗಣೇಶ್ ಹುಲ್ಮನಿ, ರಾಕೇಶ್, ಕರಿಯಪ್ಪ ಮಾಳಿಗೇರ್, ಉಮೇಶ್, ಆರ್.ದೇವರಾಜಪ್ಪ, ಮಹಮ್ಮದ್ ಮುಜಾಹಿದ್ ಪಾಷಾ, ಗಿರಿಧರ ಟಿ.ವಿ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News