ಬ್ಯಾಂಕ್ ಮ್ಯಾನೇಜರ್ ಎಂದು ನಂಬಿಸಿ ಖಾತೆಯಿಂದ 51 ಸಾವಿರ ರೂ. ಎಗರಿಸಿದರು !
ಶಿವಮೊಗ್ಗ: ಬ್ಯಾಂಕ್ ಮ್ಯಾನೇಜರ್ ಎಂದು ಹೇಳಿಕೊಂಡು ದೂರವಾಣಿ ಕರೆ ಮಾಡಿ ನಗರದ ವೃದ್ಧೆಯೊಬ್ಬರ ಬ್ಯಾಂಕ್ ಖಾತೆಯಿಂದ 51 ಸಾವಿರ ರೂ. ದೋಚಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ನಗರದ ಕೋಟೆ ಪ್ರದೇಶದ ನಿವಾಸಿ 75 ವರ್ಷದ ಮಹಿಳೆಯೊಬ್ಬರಿಗೆ ಜ.23ರಂದು ಕರೆ ಮಾಡಿದ್ದ ವ್ಯಕ್ತಿ ಎಚ್‌ಡಿಎಫ್‌ಸಿ ಬ್ಯಾಂಕ್ ಮ್ಯಾನೇಜರ್ ಎಂದು ಹೇಳಿಕೊಂಡು ಎಟಿಎಂ ನವೀಕರಣ ಮಾಡಬೇಕೆಂದು ಹೇಳಿ ಎಟಿಎಂ, ಸಿವಿವಿ ಮತ್ತು ಒಟಿಪಿ ನಂಬರ್ ಪಡೆದು ಅವರ ಖಾತೆಯಿಂದ 51 ಸಾವಿರ ರೂ. ದೋಚಿದ್ದಾರೆ. ಇದನ್ನು ಮಹಿಳೆ ತಡವಾಗಿ ಗಮನಿಸಿದ್ದು, ಮಾ.6ರಂದು ಕೋಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
'ಸಾರ್ವಜನಿಕರು ಇಂತಹ ವಿಚಾರಗಳ ಬಗ್ಗೆ ಜಾಗರೂಕರಾಗಿರಬೇಕು. ಯಾರೇ ಕರೆ ಮಾಡಿದರೂ ಬ್ಯಾಂಕ್ ಖಾತೆ, ಎಟಿಎಂ, ಸಿವಿವಿ, ಓಟಿಪಿ, ಆಧಾರ್ ನಂಬರ್ ಸೇರಿದಂತೆ ಯಾವುದೇ ಮಾಹಿತಿ ನೀಡಬಾರದು. ನಂಬರ್‌ಗಳನ್ನು ಕೊಟ್ಟಲ್ಲಿ ಸುಲಭವಾಗಿ ಹಣವನ್ನು ದೋಚಲು ಅವಕಾಶ ಮಾಡಿಕೊಟ್ಟಂತಾಗುತ್ತದೆ. ಆದ್ದರಿಂದ ಸಾರ್ವಜನಿಕರು ಎಚ್ಚರ ವಹಿಸಬೇಕೆಂದು' ಜಿಲ್ಲಾ ಪೊಲೀಸ್ ಇಲಾಖೆ ಪ್ರಕಟಣೆ ತಿಳಿಸಿದೆ.