ಉಮೇಶ್ ಕತ್ತಿಯ 'ಪ್ರತ್ಯೇಕ ರಾಜ್ಯದ ಹೋರಾಟ'ದ ಬಗ್ಗೆ ಸಿದ್ದರಾಮಯ್ಯ ಹೇಳಿದ್ದು ಹೀಗೆ...

Update: 2020-03-08 13:53 GMT

ದಾವಣಗೆರೆ, ಮಾ.8: ಬಿಜೆಪಿಯವರಿಗೆ ಸಂವಿಧಾನದಲ್ಲಿ ನಂಬಿಕೆ ಇಲ್ಲ, ಇವರು ಅಲ್ಪ ಸಂಖ್ಯಾತ, ದಲಿತರ ವಿರೋಧಿಗಳು. ಇದೇ ಕಾರಣಕ್ಕೆ ಶಾದಿ ಭಾಗ್ಯ ಯೋಜನೆ ರದ್ದು ಮಾಡಿದ್ದಾರೆ. ರಾಜ್ಯದಲ್ಲಿ ದಲಿತರಿಗೆ ನೀಡಿದ ಅನುದಾನ ಕಡಿತವಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಶೇ.14 ರಷ್ಟು ಅಲ್ಪಸಂಖ್ಯಾತರಿದ್ದು, ಶಾದಿ ಭಾಗ್ಯ ಯೋಜನೆಯಿಂದ ಅರ್ಥಿಕವಾಗಿ ಹಿಂದುಳಿದ ಸಂಖ್ಯಾತರ ಕುಟುಂಬಗಳಿಗೆ ಅನುಕೂಲವಾಗುತಿತ್ತು. ಈಗ ಶಾದಿಭಾಗ್ಯ ರದ್ದು ಮಾಡುವ ಮೂಲಕ ಅಲ್ಪಸಂಖ್ಯಾತ ವಿರೋಧಿಗಳು ಎಂದು ಸಾಬೀತುಪಡಿಸಿದ್ದಾರೆ ಎಂದು ಕಿಡಿಕಾರಿದರು. 

'ಸಬ್ ಕಾ ಸಾಥ್ ಸಬ್ ಕ ವಿಕಾಸ್' ಎಂಬುದು ಎಲ್ಲರಿಗೂ ಅನ್ವಯವಾಗುತ್ತದೆ. ಆದರೆ ಒಂದು ಧರ್ಮವನ್ನು ಹೊರಗಿಡೋದು ಸಬ್ ಕಾ ಸಾಥ್ ಅಲ್ಲ. ಸಂವಿಧಾನದ ವಿರೋಧಿಗಳು ಮಾಡುವ ಕೆಲಸ ಅದು ಎಂದು ಕಿಡಿಕಾರಿದರು. 

ಪ್ರತ್ಯೇಕ ರಾಜ್ಯ ತಪ್ಪು: ಅನುದಾನ ನೀಡಿಕೆ ವಿಚಾರದಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದ್ದರೆ ಶಾಸಕ ಉಮೇಶ್ ಕತ್ತಿ ಅವರು ಸದನದ ಒಳಗೆ, ಹೊರಗೆ ಹೋರಾಟ ಮಾಡಲಿ. ಅದನ್ನು ಬಿಟ್ಟು ಪ್ರತ್ಯೇಕ ರಾಜ್ಯದ ವಿಚಾರ ಎತ್ತುವುದು ತಪ್ಪು. ಇದರ ಬದಲಿಗೆ ಸಮಗ್ರ ಕರ್ನಾಟಕದ ಬಗ್ಗೆ ಚಿಂತನೆ ಮಾಡಬೇಕು ಎಂದು ಹೇಳಿದರು.

ಬೇಡ ಜಂಗಮಕ್ಕೆ ಮೀಸಲಾತಿ ಬೇಡ
ಬೇಡ ಜಂಗಮ ಸಮುದಾಯವನ್ನು ಪರಿಶಿಷ್ಟ ಸಮುದಾಯಕ್ಕೆ ಸೇರಿಸಲು ನನ್ನ ವೈಯಕ್ತಿಕ ವಿರೋಧವಿದೆ. ಅವರೆಲ್ಲ ಆರಾಧನೆಗೆ ಯೋಗ್ಯರಾದವರು, ಎಸ್ಸಿಗೆ ಸೇರಿಸಬೇಕೆಂದು ಅವರ ಹೋರಾಟ ಸರಿಯಾದ ಮಾರ್ಗವಲ್ಲ ಎಂದು ಉತ್ತರಿಸಿದರು.

ನಾನು ದರಿದ್ರ್ಯ ಸರ್ಕಾರ ಎಂದು ಕರೆದಿದ್ದೆ. ಇದಕ್ಕೆ ಬಜೆಟ್ ಮೂಲಕ ಉತ್ತರ ನೀಡುವುದಾಗಿ ಯಡಿಯೂರಪ್ಪ ಹೇಳಿದ್ದರು. ಅಪ್ಪರ್ ಕೃಷ್ಣ ಯೋಜನೆಗೆ ಬಜೆಟ್ ನಂತರ ಹತ್ತು ಸಾವಿರ ಕೋಟಿ ಪ್ರಕಟಿಸಿದ್ದಾರೆ. ಇಷ್ಟು ಹಣ ಎಲ್ಲಿಂದ ಬಂತು ಎಂದು ಪ್ರಶ್ನಿಸಿದ ಅವರು, ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಎಂದು ಬಾಯಲ್ಲಿ ಹೇಳಿದರೆ ಆಗದು. ಅದನ್ನು ಮಾಡಿ ತೋರಿಸಬೇಕು. ಕಲ್ಯಾಣ ಕರ್ನಾಟಕ್ಕೆ 2,500 ಕೋಟಿ ಕೇಳಿದ್ದರು. ಸರ್ಕಾರ ನೀಡಿದ್ದು 1,500 ಕೋಟಿ ಮಾತ್ರ. ನಾನು ಸಿಎಂ ಇದ್ದಾಗ ಇಷ್ಟ ಕೊಟ್ಟಿದ್ದೆ. ಸಿಎಂ ಬಜೆಟ್‍ನಲ್ಲಿ ಹೇಳಿದ್ದು ಒಂದು, ಮಾಡುವುದು ಇನ್ನೊಂದು. ಇದು ಯಡಿಯೂರಪ್ಪ ನಡೆ. ಬಜೆಟ್ ಮಂಡನೆ ಮರುದಿನ ನೀರಾವರಿಗೆ ಹತ್ತು ಸಾವಿರ ಕೋಟಿ ಪ್ರಕಟಿಸಿದ್ದಾರೆ. ಅದು ಹೇಗೆ ಸಾದ್ಯ. ಇದರಿಂದ ಬಜೆಟ್ ತನ್ನ ಪಾವಿತ್ರ್ಯತೆ ಕಳೆದುಕೊಳ್ಳುತ್ತದೆ. ದರಿದ್ರ ಸರ್ಕಾರ ಎಂದಿದ್ದಕ್ಕೆ ಯಡಿಯೂರಪ್ಪ ಬಜೆಟ್ ಮೂಲಕ ಉತ್ತರ ಕೊಡುತ್ತೇನೆ ಎಂದಿದ್ದರು. ಆದರೆ ಬಜೆಟ್‍ನಲ್ಲಿ ಅಂಥಹ ಯಾವುದೇ ಉತ್ತರ ನನಗೆ ಕಾಣಲಿಲ್ಲ ಎಂದು ತಿಳಿಸಿದರು. 

ಅಧಿಕಾರದ ಹಿಂದ ಹೋದವನಲ್ಲ 
ನಾನು ಯಾವತ್ತೂ ಅಧಿಕಾರದ ಹಿಂದೆ ಹೋದವನಲ್ಲ. ಅಧಿಕಾರವನ್ನು ಜನರು ಕೊಡಬೇಕು. ಆಗ ಕುರ್ಚಿ ಮೇಲೆ ಕುಳಿತುಕೊಳ್ಳಲು ಯೋಗ್ಯತೆ ಇರುತ್ತದೆ. ಜನರು ಕೊಟ್ಟರೆ ಕೆಲಸ ಮಾಡುತ್ತೇವೆ. ಇಲ್ಲದಿದ್ದರೆ ಮಾಡಲು ಬೇಕಾದಷ್ಟು ಕೆಲಸಗಳಿವೆ. ಬೈರತಿ ಬಸವರಾಜ್‍ಗೆ ನಾನೇ ಟಿಕೆಟ್ ಕೊಡಿಸಿ ಗೆಲ್ಲಿಸಿದ್ದೆ. ನಂತರ ಅವರು ಮಂತ್ರಿ ಆಗಲು ಪಕ್ಷ ಬಿಟ್ಟು ಹೋದರು. ಈಗ ಹೋದವರು ಪಕ್ಷಕ್ಕೆ ವಾಪಸ್ಸು ಬರುತ್ತಾರಾ ? ರಾಜಕೀಯ ಸಿದ್ಧಾಂತ ಇದ್ದಿದ್ದರೆ ಅವರು ಎಲ್ಲಿಗೂ ಹೋಗುತ್ತಿರಲಿಲ್ಲ. ಅವರು ಅವಕಾಶವಾದಿಗಳು. ಯಾವುದೇ ಕಾರಣಕ್ಕೂ ವಾಪಾಸು ಬರುವುದಿಲ್ಲ ಎಂದು ಹೇಳಿದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News