ಕೊಪ್ಪ: ಯುವಕನ ಮೇಲೆ ಚಿರತೆ ದಾಳಿ

Update: 2020-03-08 14:21 GMT
ಸಾಂದರ್ಭಿಕ ಚಿತ್ರ

ಚಿಕ್ಕಮಗಳೂರು, ಮಾ.8: ಬೈಕ್‍ನಲ್ಲಿ ತೋಟಕ್ಕೆ ತೆರಳುತ್ತಿದ್ದ ವೇಳೆ ಚಿರತೆಯೊಂದು ಯುವಕನ ಮೇಲೆ ದಾಳಿ ಮಾಡಿ ಗಾಯಗೊಳಿಸಿರುವ ಘಟನೆ ಜಿಲ್ಲೆಯ ಕೊಪ್ಪ ತಾಲೂಕಿನ ಶಾನುವಳ್ಳಿ ಗ್ರಾಮದಲ್ಲಿ ರವಿವಾರ ಮುಂಜಾನೆ ವರದಿಯಾಗಿದ್ದು, ಚಿರತೆ ದಾಳಿಯ ಸುದ್ದಿ ಕೇಳಿ ಇದೀಗ ಗ್ರಾಮಸ್ಥರು ಆತಂಕದಿಂದ ಮನೆಯಿಂದ ಹೊರಬಾರದಂತಾಗಿದೆ.

ಕೊಪ್ಪ ಪಟ್ಟಣ ಸಮೀಪದ ಶಾನುವಳ್ಳಿ ಗ್ರಾಮದ ಮುಕೇಶ್ ಎಂಬಾತ ರವಿವಾರ ಮುಂಜಾನೆ ತೋಟಕ್ಕೆ ನೀರು ಹಾಯಿಸುವ ಸಲುವಾಗಿ ಮನೆ ಸಮೀಪದಲ್ಲಿದ್ದ ತೋಟಕ್ಕೆಂದು ಬೈಕ್‍ನಲ್ಲಿ ಹೋಗಿದ್ದು, ತೋಟದ ಬಳಿ ಬೈಕ್ ಹೋಗುತ್ತಿದ್ದಂತೆ ಪೊದೆಯಲ್ಲಿ ಅವಿತಿದ್ದ ಚಿರತೆ ಏಕಾಏಕಿ ಮುಕೇಶ್ ಮೇಲೆ ಎರಗಿದೆ ಎಂದು ತಿಳಿದು ಬಂದಿದೆ.

ದಾಳಿ ವೇಳೆ ಮುಕೇಶ್ ಬೈಕ್ ನಿಲ್ಲಿಸದೇ ವೇಗವಾಗಿ ಓಡಿಸಿದ ಪರಿಣಾಮ ಹೆಚ್ಚಿನ ಅಪಾಯ ತಪ್ಪಿದೆ. ಯುವಕ ಪ್ರಾಣಾಪಾಯದಿಂದ ಪಾರಾಗಿದ್ದು, ಕೊಪ್ಪ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆಂದು ತಿಳಿದು ಬಂದಿದೆ.

ಜಿಲ್ಲೆಯ ಮಲೆನಾಡು ಭಾಗದಲ್ಲಿ ಇದುವರೆಗೂ ಚಿರತೆಗಳ ಕಾಟ ಇರಲಿಲ್ಲ. ಇದೀಗ ಚಿರತೆಗಳೂ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿರುವುದು ಮಲೆನಾಡಿನ ಕೃಷಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ಅರಣ್ಯಾಧಿಕಾರಿಗಳು ಚಿರತೆಗಳ ದಾಳಿಯಿಂದ ರಕ್ಷಣೆ ನೀಡುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳಬೇಕೆಂದು ಈ ಭಾಗದ ಸಾರ್ವಜನಿಕರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News