ಕರ್ನಾಟಕದ ಮಾಜಿ ರಾಜ್ಯಪಾಲ ಹಂಸರಾಜ ಭಾರದ್ವಾಜ್ ಇನ್ನಿಲ್ಲ
ಹೊಸದಿಲ್ಲಿ, ಮಾ.8: ಕರ್ನಾಟಕದ ಮಾಜಿ ರಾಜ್ಯಪಾಲ ಹಾಗೂ ಮಾಜಿ ಕೇಂದ್ರ ಸಚಿವ ಹಂಸರಾಜ ಭಾರದ್ವಾಜ್ (82) ಅವರು ರವಿವಾರ ಸಂಜೆ ಹೃದಯಸ್ತಂಭನದಿಂದ ಇಲ್ಲಿಯ ಸಾಕೇತ್‌ನಲ್ಲಿರುವ ಮ್ಯಾಕ್ಸ್ ಆಸ್ಪತ್ರೆಯಲ್ಲಿ ನಿಧನರಾದರು.
ಮೂತ್ರಪಿಂಡ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಬುಧವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಪತ್ನಿ, ಪುತ್ರ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಹಿರಿಯ ಕಾಂಗ್ರೆಸ್ ನಾಯಕರಾಗಿದ್ದ ಅವರು ಕೇಂದ್ರದಲ್ಲಿ ದೀರ್ಘಾವಧಿಗೆ ಕಾನೂನು ಸಚಿವಾಲಯವನ್ನು ನಿರ್ವಹಿಸಿದ್ದ ಎರಡನೇ ಸಚಿವರಾಗಿದ್ದರು.
2009ರಿಂದ 2014ರವರಗೆ ಕರ್ನಾಟಕದ ರಾಜ್ಯಪಾಲರಾಗಿದ್ದ ಭಾರದ್ವಾಜ್ ಅವರು 2012, ಜನವರಿಯಿಂದ 2013 ಮಾರ್ಚ್‌ವರೆಗೆ ಕೇರಳ ರಾಜ್ಯಪಾಲರಾಗಿ ಹೆಚ್ಚುವರಿ ಹೊಣೆಗಾರಿಕೆಯನ್ನೂ ಹೊಂದಿದ್ದರು.
ನಿವೃತ್ತಿಗೆ ಮುನ್ನ ಕಾಂಗ್ರೆಸ್ ಹೈಕಮಾಂಡ್ ಕುರಿತು ತನ್ನ ಹೇಳಿಕೆಯಿಂದಾಗಿ ಭಾರದ್ವಾಜ ಸುದ್ದಿಯಲ್ಲಿದ್ದರು. ಹಲವಾರು ಸಂದರ್ಭಗಳಲ್ಲಿ ಅವರು ಕಾಂಗ್ರೆಸ್‌ನ ಉನ್ನತ ನಾಯಕತ್ವವು ಪಕ್ಷವನ್ನು ಪುನಃಶ್ಚೇತನಗೊಳಿಸಲು ಅಸಮರ್ಥವಾಗಿದೆ ಎಂದು ಟೀಕಿಸಿದ್ದರು.
ಐದು ಅವಧಿಗೆ ರಾಜ್ಯಸಭಾ ಸದಸ್ಯರಾಗಿದ್ದ ಭಾರದ್ವಾಜ್ ಅವರು ರಾಜೀವ್ ಗಾಂಧಿ ಮತ್ತು ಪಿ.ವಿ.ನರಸಿಂಹರಾವ್ ಅವರ ಸರಕಾರಗಳಲ್ಲಿ ಒಟ್ಟು 9 ವರ್ಷಗಳ ಅವಧಿಗೆ ಸಹಾಯಕ ಕಾನೂನು ಸಚಿವರಾಗಿದ್ದರು. ಆದರೆ ತಳಮಟ್ಟದಲ್ಲಿ ಬೆಂಬಲದ ಕೊರತೆಯಿಂದಾಗಿ ಅವರೆಂದೂ ಲೋಕಸಭೆಗೆ ಸ್ಪರ್ಧಿಸಿರಲಿಲ್ಲ. ಯುಪಿಎ-1 ಸರಕಾರದಲ್ಲಿ ಅವರು ಸಂಪುಟ ಸಚಿವರಾಗಿ ಪದೋನ್ನತಿ ಹೊಂದಿದ್ದರು.