ಪರಿಶಿಷ್ಟರು-ಹಿಂದುಳಿದವರ ಶಿಕ್ಷಣ ಸೌಲಭ್ಯದಲ್ಲಿ ರಾಜ್ಯ ಪ್ರಥಮ: ಡಿಸಿಎಂ ಗೋವಿಂದ ಕಾರಜೋಳ

Update: 2020-03-08 18:04 GMT

ಹಾವೇರಿ, ಮಾ.8: ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಹಿಂದುಳಿದ ವರ್ಗಗಳಿಗೆ ಶಿಕ್ಷಣ ಸೌಲಭ್ಯ ಕಲ್ಪಿಸುವಲ್ಲಿ ರಾಷ್ಟ್ರದಲ್ಲೆ ಕರ್ನಾಟಕ ರಾಜ್ಯ ಪ್ರಥಮ ಸ್ಥಾನದಲ್ಲಿದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

ಹಿರೇಕೆರೂರು ಹಾಗೂ ರಟ್ಟಿಹಳ್ಳಿ ತಾಲೂಕಿನ ಸರ್ವಜ್ಞ ಕೆರೆ ತುಂಬಿಸುವ ಯೋಜನೆ, ದೂದಿಹಳ್ಳಿ ಮೊರಾರ್ಜಿ ದೇಸಾಯಿ ಹಾಗೂ ಕಿತ್ತೂರ ಚೆನ್ನಮ್ಮ ವಸತಿ ಶಾಲೆಯ ನೂತನ ಕಟ್ಟಡದ ಲೋಕಾರ್ಪಣೆ ವಿವಿಧ ಕಾಮಗಾರಿಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಇಡೀ ದೇಶದಲ್ಲಿ ಬಡವರ ಮಕ್ಕಳ ಶಿಕ್ಷಣ ನೀಡುವಲ್ಲಿ ಕರ್ನಾಟಕ ರಾಜ್ಯ ಪ್ರಥಮ ಸ್ಥಾನದಲ್ಲಿದೆ. ರಾಷ್ಟ್ರೀಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ಆಯೋಗ ದೇಶದಾದ್ಯಂತ ನಡೆಸಿದ ಸಮೀಕ್ಷೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಕರ್ನಾಟಕ ರಾಜ್ಯ ಅತ್ಯುತ್ತಮ ರಾಜ್ಯವೆಂದು ಘೋಷಿಸಿದೆ ಎಂದು ಅವರು ತಿಳಿಸಿದರು.

ರಾಜ್ಯದಲ್ಲಿ 826 ವಸತಿ ಶಾಲೆಗಳಿವೆ. 456 ವಸತಿ ಶಾಲೆಗಳು ಸ್ವಂತ ಕಟ್ಟಡದಲ್ಲಿವೆ. 190 ವಸತಿ ಶಾಲೆಗಳು ನಿರ್ಮಾಣ ಹಂತದಲ್ಲಿವೆ. ಎಸ್ಸಿ, ಎಸ್ಟಿ ಇಲಾಖೆಯಿಂದ ರಾಜ್ಯದ 43 ಲಕ್ಷ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದ್ದು, 2009 ಹಾಸ್ಟೇಲ್, 826 ಸರಕಾರಿ ವಸತಿ ಶಾಲೆಗಳಲ್ಲಿ 4 ಲಕ್ಷ ಮಕ್ಕಳು ಉಂಡು ಓದುತ್ತಿದ್ದಾರೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಹೊಸದಾಗಿ ಮಂಜೂರು ಮಾಡಿದ 26 ವಸತಿ ಶಾಲೆಗಳಲ್ಲಿ ಆರು ವಸತಿ ಶಾಲೆಗಳನ್ನು ಹಾವೇರಿ ಜಿಲ್ಲೆಗೆ ಮಂಜೂರು ಮಾಡಲಾಗಿದೆ. ಮುಂದಿನ ತಿಂಗಳಿಂದ 137 ಕೋಟಿ ರೂ.ವೆಚ್ಚದಲ್ಲಿ ಕಟ್ಟಡ ಕಾಮಗಾರಿ ಆರಂಭಗೊಳ್ಳಲಿದೆ. 250 ಮಕ್ಕಳ ಪ್ರವೇಶ ಅವಕಾಶ ಕಲ್ಪಿಸುವ ನೂತನ ವಸತಿ ಶಾಲೆಯ ಕಟ್ಟಡಕ್ಕೆ ಹಿರೇಕೆರೂರಿನಲ್ಲಿಂದು ಅಡಿಗಲ್ಲು ಹಾಕಲಾಗಿದೆ. 23 ಕೋಟಿ ರೂ.ವೆಚ್ಚದಲ್ಲಿ ಈ ಕಟ್ಟಡ ನಿರ್ಮಾಣ ಮಾಡಲಾಗುವುದು ಎಂದು ಅವರು ಹೇಳಿದರು.

ದೂದಿಹಳ್ಳಿ ಮೊರಾರ್ಜಿ ಹಾಗೂ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲಾ ಸಂಕೀರ್ಣದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಆರಂಭಿಸಲು ಮುಂದಿನ ಶೈಕ್ಷಣಿಕ ಸಾಲಿನಿಂದ ಮಂಜೂರಾತಿ ನೀಡಲಾಗುವುದು ಎಂದು ಗೋವಿಂದ ಕಾರಜೋಳ ಹೇಳಿದರು.

ಕಾರ್ಯಕ್ರಮದಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್, ರಾಜ್ಯ ಉಗ್ರಾಣ ಅಭಿವೃದ್ಧಿ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ, ಸಚಿವ ಬಸವರಾಜ ಬೊಮ್ಮಾಯಿ, ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News