ಕನ್ನಡಿಗೆ ಅಂಜುತ್ತಿರುವ ಸರಕಾರ

Update: 2020-03-09 05:24 GMT

ದಿಲ್ಲಿಯ ಹಿಂಸಾಚಾರದಿಂದ ವಿರೂಪಗೊಂಡ ತನ್ನ ಮುಖವನ್ನು ಮುಚ್ಚಿಟ್ಟು, ಕೇಂದ್ರ ಸರಕಾರ ಕನ್ನಡಿಯನ್ನು ನಿಷೇಧಿಸಲು ಮುಂದಾಗಿ ತೀವ್ರ ಮುಜುಗರಕ್ಕೊಳಗಾಗಿದೆ. ದಿಲ್ಲಿಯಲ್ಲಿ ನಡೆದ ಹಿಂಸಾಚಾರದ ಬೆಚ್ಚಿ ಬೀಳಿಸುವ ಸತ್ಯಗಳನ್ನು ವರದಿ ಮಾಡಿದ ಕಾರಣಕ್ಕಾಗಿ, ಮಲಯಾಳಂನ ‘ಏಶ್ಯನೆಟ್ ನ್ಯೂಸ್’ ಹಾಗೂ ‘ಮೀಡಿಯಾ ವನ್’ ಸುದ್ದಿವಾಹಿನಿಗಳಿಗೆ 48 ತಾಸುಗಳ ನಿಷೇಧವನ್ನು ವಿಧಿಸಲು ಮುಂದಾಯಿತು. ‘ಈ ಎರಡು ಟಿವಿ ವಾಹಿನಿಗಳ ವರದಿಗಳು ಪ್ರಚೋದನಾಕಾರಿ, ಪಕ್ಷಪಾತದಿಂದ ಕೂಡಿದ್ದವು ಹಾಗೂ ಆರೆಸ್ಸೆಸ್ ಮತ್ತು ದಿಲ್ಲಿ ಪೊಲೀಸರನ್ನು ಟೀಕಿಸಿವೆ. ಅಲ್ಲದೆ ಪೌರತ್ವ ತಿದ್ದುಪಡಿ ಕಾಯ್ದೆಯ ಬೆಂಬಲಿಗರನ್ನು ಕೆಟ್ಟದಾಗಿ ಬಿಂಬಿಸಿವೆ’ ಎಂಬ ಆರೋಪಗಳನ್ನು ಆದೇಶದಲ್ಲಿ ಹೊರಿಸಲಾಗಿತ್ತು. ವಿಪರ್ಯಾಸವೆಂದರೆ, ಸುಳ್ಳು ವರದಿಗಳನ್ನು ಬಿತ್ತಿರುವುದು ಮತ್ತು ಪಕ್ಷಪಾತದಿಂದ ವರದಿ ಮಾಡಿರುವುದು ನಿಜವೇ ಆಗಿದ್ದರೆ ಸೂಕ್ತ ಸಾಕ್ಷಾಧಾರಗಳ ಸಹಿತ ಅವುಗಳ ಮೇಲೆ ದೂರು ದಾಖಲಿಸಬೇಕು. ಆದರೆ ತಾನೇ ಆರೋಪ ಮಾಡಿ, ಅವಸರವಸರವಾಗಿ ತಾನೇ ತೀರ್ಪು ನೀಡಿದೆ. ಅಷ್ಟೇ ಅಲ್ಲ, 48 ಗಂಟೆಗಳ ನಿಷೇಧಕ್ಕೂ ಅಣಿಯಾಯಿತು. ಅದರ ಅವಸರ ನೋಡಿದರೆ, ಇಡೀ ದಿಲ್ಲಿ ಹಿಂಸಾಚಾರ ನಡೆದಿರುವುದೇ ಈ ಎರಡು ಚಾನೆಲ್‌ಗಳು ಪ್ರಸಾರ ಮಾಡಿದ ಸುದ್ದಿಗಳಿಂದ ಎಂದು ಭಾವಿಸಬೇಕು.

ದಿಲ್ಲಿಯಲ್ಲಿ ದ್ವೇಷ ಭಾಷಣ ಮಾಡಿ ಭಾರೀ ಹಿಂಸಾಚಾರಕ್ಕೆ ಕಾರಣವಾದ ನಾಯಕರ ಮೇಲೆ ಇನ್ನೂ ಎಫ್‌ಐಆರ್ ದಾಖಲಾಗಿಲ್ಲ. ಕೊಲೆಗಾರರು ಟಿವಿ ದೃಶ್ಯಗಳಲ್ಲಿ ಬಹಿರಂಗವಾಗಿ ಗುರುತಿಸಿಸಲ್ಪಟ್ಟಿದ್ದರೂ ಅವರ ಬಂಧನದ ಕೆಲಸ ನಡೆದಿಲ್ಲ. ಒಂದೆಡೆ ಪೊಲೀಸರು ನೇರವಾಗಿ ದಂಗೆಯಲ್ಲಿ ಭಾಗವಹಿಸಿದ್ದರು. ಇನ್ನೊಂದೆಡೆ ಮೇಲಧಿಕಾರಿಗಳು ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರಿಗೆ ಆದೇಶವನ್ನೇ ನೀಡಿಲ್ಲ ಎನ್ನುವುದು ವರದಿಯೊಂದರಲ್ಲಿ ಬಹಿರಂಗವಾಗಿದೆ. ಇವರೆಲ್ಲರ ಮೇಲೆ ನಡೆಯದ ಕ್ರಮ ಆತುರಾತುರವಾಗಿ, ದಿಲ್ಲಿಯಲ್ಲಿ ನಡೆದ ಕೃತ್ಯಗಳನ್ನು ಇಡೀ ವಿಶ್ವದ ಮುಂದಿಟ್ಟ ಮಾಧ್ಯಮಗಳ ಮೇಲೆ ನಡೆಯಿತು. ನಡೆದ ದುರಂತಗಳಿಗೆ ಈ ಎರಡು ಟಿವಿಗಳು ಆರೆಸ್ಸೆಸ್ ಮತ್ತು ಪೊಲೀಸರನ್ನು ಹೊಣೆ ಮಾಡಿರುವುದೇ ಆದೇಶಕ್ಕೆ ನೇರ ಕಾರಣ. ಆದರೆ ಇದೇ ಸಂದರ್ಭದಲ್ಲಿ ಅಪರಾಧ ಕೃತ್ಯಗಳಲ್ಲಿ ಭಾಗವಹಿಸಿದ ಆರೆಸ್ಸೆಸ್ ನಾಯಕರು ಮತ್ತು ಅವರಿಗೆ ಅಪರಾಧಗಳನ್ನು ಎಸಗಲು ಅನುಮತಿ ಕೊಟ್ಟ ಪೊಲೀಸರ ಮೇಲೆ ಯಾವ ಕ್ರಮತೆಗೆದುಕೊಳ್ಳುವ ಅಗತ್ಯವೂ ಅದಕ್ಕೆ ಕಂಡಿಲ್ಲ. ಅಂದರೆ, ತಪ್ಪು ಮಾಡಿದವರು ಅಪರಾಧಿಗಳಲ್ಲ, ತಪ್ಪು ಮಾಡಿದವರ ಕೃತ್ಯಗಳನ್ನು ವಿಶ್ವದ ಮುಂದೆ ತೋರಿಸಿದವರು ಕೇಂದ್ರ ಸರಕಾರದ ಪ್ರಕಾರ ಅಪರಾಧಿಗಳು.

ಇದೇ ಸಂದರ್ಭದಲ್ಲಿ ಸರಕಾರದ ಈ ಏಕಾಏಕಿ ಆದೇಶ, ಆ ಎರಡು ಟಿವಿ ಚಾನೆಲ್‌ಗಳು ದಿಲ್ಲಿ ಹಿಂಸಾಚಾರದ ಸಂದರ್ಭದಲ್ಲಿ ತೋರಿಸಿದ ಕರ್ತವ್ಯ ಬದ್ಧತೆಯನ್ನು ಎತ್ತಿ ಹಿಡಿದಿದೆ. ಒಂದು ರೀತಿಯಲ್ಲಿ ಸರಕಾರದ ಶಿಕ್ಷೆ, ಆ ಚಾನೆಲ್‌ಗಳಿಗೆ ಒಂದು ಹೆಗ್ಗಳಿಕೆಯೇ ಆಗಿದೆ. ಗಲಭೆಯ ಹಿಂದೆ ಸರಕಾರದ ನಿಷ್ಕ್ರಿಯತೆ ಇದೆ ಎನ್ನುವುದು ಸಾರ್ವಜನಿಕವಾಗಿ ಬಹಿರಂಗವಾಗಿರುವ ಸತ್ಯ. ಪ್ರಮುಖವಾಗಿ ಈ ಚಾನೆಲ್‌ಗಳು ಬಿತ್ತರಿಸಿದ ಒಂದು ಹೃದಯ ವಿದ್ರಾವಕ ವರದಿ ದಿಲ್ಲಿಯಲ್ಲಿ ನಿಜಕ್ಕೂ ನಡೆಯುತ್ತಿರುವುದು ಏನು ಎನ್ನುವುದನ್ನು ಜಗತ್ತಿಗೆ ತಿಳಿಸಿತು. ಒಬ್ಬ ಎಳೆಯ ಬಾಲಕ ಗುಂಡೇಟು ಬಿದ್ದು ನರಳುತ್ತಿದ್ದಾನೆ. ಆದರೆ ಯಾವುದೇ ವಾಹನಗಳು, ಪೊಲೀಸರು ಆತನನ್ನು ಆಸ್ಪತ್ರೆಗೆ ಸೇರಿಸಲು ಮುಂದಾಗುವುದಿಲ್ಲ. ಈ ಕ್ರೌರ್ಯವನ್ನು ಸ್ಥಳದಲ್ಲೇ ನಿಂತು ಚಿತ್ರೀಕರಿಸಿದ ವರದಿಗಾರ, ಚಾನೆಲ್‌ನಲ್ಲಿ ಪ್ರಸಾರವಾಗುವುದಕ್ಕೆ ಕಾರಣವಾದ. ಇಂದಿಗೂ ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ದಿಲ್ಲಿ ಮತ್ತು ಕೇಂದ್ರ ಸರಕಾರದ ವೈಫಲ್ಯವನ್ನು ಸಾರುತ್ತಲೇ ಇದೆ. ಇಂತಹ ಹಲವು ದೃಶ್ಯಗಳನ್ನು ಪ್ರಸಾರ ಮಾಡಿರುವುದೇ ಪೊಲೀಸ್ ಇಲಾಖೆಗೆ ಮತ್ತು ಸರಕಾರಕ್ಕೆ ಇಕ್ಕಟ್ಟನ್ನು ಸೃಷ್ಟಿಸಿದೆ. ವಿಪರ್ಯಾಸವೆಂದರೆ, ಈ ಎರಡು ಚಾನೆಲ್‌ಗಳಷ್ಟೇ ದಿಲ್ಲಿಯ ವಾಸ್ತವವನ್ನು ತೆರೆದಿಟ್ಟಿರುವುದಲ್ಲ. ಹಲವು ಇಂಗ್ಲಿಷ್ ಚಾನೆಲ್‌ಗಳೂ ಕೂಡ ದಿಟ್ಟವಾಗಿ ಸತ್ಯಗಳನ್ನು ತೆರೆದಿಟ್ಟಿದ್ದವು. ಹೀಗಿದ್ದರೂ, ಈ ಎರಡು ಚಾನೆಲ್‌ಗಳೇ ಯಾಕೆ ಸರಕಾರದ ಕೆಂಗಣ್ಣಿಗೆ ಗುರಿಯಾದವು? ಸಾಧಾರಣವಾಗಿ ಬಹುತೇಕ ಪ್ರಾದೇಶಿಕ ಚಾನೆಲ್‌ಗಳು ಸರಕಾರ ಮತ್ತು ಸಂಘಪರಿವಾರದ ಪರವಾಗಿ ಸುದ್ದಿಗಳನ್ನು ಪ್ರಸಾರ ಮಾಡುತ್ತಾ ಬರುತ್ತಿವೆ. ಕನ್ನಡದ ಚಾನೆಲ್‌ಗಳನ್ನೇ ತೆಗೆದುಕೊಳ್ಳೋಣ. ಯಾವುದೇ ಚಾನೆಲ್‌ಗಳು ದಿಲ್ಲಿಯಲ್ಲಿ ಅಮಾಯಕರ ಮೇಲೆ ನಡೆದ ಕ್ರೌರ್ಯಗಳ ಕುರಿತ ಸುದ್ದಿಗಳನ್ನು ಪ್ರಸಾರ ಮಾಡಲೇ ಇಲ್ಲ. ಅವುಗಳು ಚರ್ಚೆಯ ವಿಷಯವೇ ಆಗಲಿಲ್ಲ. ಪ್ರಾದೇಶಿಕ ಚಾನೆಲ್‌ಗಳು ಇಂತಹ ಸುದ್ದಿಗಳನ್ನು ಪ್ರಸಾರ ಮಾಡಿದರೆ ಅವುಗಳು ತಳಸ್ತರದ ಜನರನ್ನು ತಲುಪುತ್ತವೆ. ಈ ನಿಟ್ಟಿನಲ್ಲಿ ಕೇರಳದ ಮಲಯಾಳಂ ಚಾನೆಲ್‌ಗಳು ಪ್ರಸಾರ ಮಾಡಿದ ಸುದ್ದಿಗಳಿಗೆ ಸ್ಥಳೀಯ ಬಿಜೆಪಿ ಮತ್ತು ಸಂಘಪರಿವಾರ ಬೆಚ್ಚಿ ಬಿದ್ದಿವೆ. ಅವುಗಳ ಒತ್ತಡದಿಂದಲೇ ಅಧಿಕಾರಿಗಳು 48 ತಾಸುಗಳ ನಿಷೇಧ ವಿಧಿಸಲು ಮುಂದಾದರೆ.

 ಅತ್ಯಂತ ತಮಾಷೆಯ ವಿಷಯವೆಂದರೆ, ಹೀಗೊಂದು ವಿವಾದಾತ್ಮಕ ಆದೇಶ ನೀಡಿದ ಬೆನ್ನಿಗೇ ಕೇಂದ್ರ ಸರಕಾರ ಆ ಆದೇಶವನ್ನು ಹಿಂದೆಗೆದುಕೊಂಡಿತು. ಅಷ್ಟೇ ಅಲ್ಲ, ‘‘ಪತ್ರಿಕಾ ಸ್ವಾತಂತ್ರ ಇಂದಿನ ಅಗತ್ಯ’’ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿಕೆ ನೀಡಿದರು. ಅಂದರೆ ಅಧಿಕಾರಿಗಳು ಕೇಂದ್ರ ಸರಕಾರಕ್ಕೆ ಅಥವಾ ಮಾಹಿತಿ ಹಾಗೂ ಪ್ರಸಾರ ಖಾತೆಯ ಸಚಿವರ ಗಮನಕ್ಕೆ ತಾರದೆಯೇ ಇಂತಹದೊಂದು ಆದೇಶವನ್ನು ನೀಡಿದರೇ? ಎನ್ನುವ ಪ್ರಶ್ನೆ ಇದೀಗ ಮುನ್ನೆಲೆಗೆ ಬಂದಿದೆ. ಅಧಿಕಾರಿಗಳಿಗೆ ಈ ಪ್ರಕರಣದ ಗಂಭೀರತೆ ಅರಿವಿಲ್ಲದೇ ಇದ್ದರೂ, ನಿಷೇಧವಾದರೆ ಅದರ ಪರಿಣಾಮ ಏನಾಗಬಹುದು ಎನ್ನುವುದು ಕೇಂದ್ರ ಸರಕಾರಕ್ಕೆ ಸ್ಪಷ್ಟವಾಗಿ ಗೊತ್ತಿದೆ. ಈ ಹಿಂದೆ, ‘ಎನ್‌ಡಿಟಿವಿ’ಗೂ ಇದೇ ರೀತಿಯಲ್ಲಿ 48 ಗಂಟೆಗಳ ನಿಷೇಧವನ್ನು ವಿಧಿಸಲು ಹೋಗಿ ಅದು ತೀವ್ರ ಮುಖಭಂಗವನ್ನು ಅನುಭವಿಸಿತ್ತು. ರಾಷ್ಟ್ರ, ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಛೀಮಾರಿ ಹಾಕಿಸಿಕೊಂಡಿತ್ತು. ದಿಲ್ಲಿಯಲ್ಲಿ ನಡೆದಿರುವ ಘಟನೆಗಳಿಗೆ ಈಗಾಗಲೇ ಅಂತರ್‌ರಾಷ್ಟ್ರೀಯ ಸಂಘಟನೆಗಳು ಕೇಂದ್ರ ಸರಕಾರವನ್ನು ಹೊಣೆ ಮಾಡುತ್ತಿವೆ. ಇದೇ ಸಂದರ್ಭದಲ್ಲಿ ಸುದ್ದಿ ಪ್ರಸಾರ ಮಾಡಿದ ಟಿವಿ ಚಾನೆಲ್‌ಗಳಿಗೆ ನಿಷೇಧ ಹೇರಿದರೆ ತನ್ನ ಮೇಲಿರುವ ಆರೋಪಗಳನ್ನು ಸರಕಾರವೇ ಒಪ್ಪಿಕೊಂಡಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಆದೇಶ ನೀಡಿದಷ್ಟೇ ವೇಗವಾಗಿ ಆದೇಶವನ್ನು ಹಿಂದೆಗೆದುಕೊಂಡು ಸರಕಾರ ತನ್ನ ಮಾನವನ್ನು ಉಳಿಸಿಕೊಳ್ಳಲು ಯತ್ನಿಸಿತು.

ಸರಕಾರ ಇದೀಗ ತನ್ನ ಮೇಲಿರುವ ಆರೋಪಗಳನ್ನು ನಿರಾಕರಿಸುವುದಕ್ಕಾಗಿ ಸಾಕ್ಷಗಳನ್ನು ನಾಶ ಪಡಿಸುವ ಪ್ರಯತ್ನ ನಡೆಸುತ್ತಿದೆ. ಸಂತ್ರಸ್ತರನ್ನೇ ಆರೋಪಿಗಳನ್ನಾಗಿಸುವ ವ್ಯವಸ್ಥಿತ ಸಂಚೊಂದು ರೂಪುಗೊಳ್ಳುತ್ತಿದೆ. ಗಲಭೆ ನಡೆಸಿದವರು ಸಿಎಎ ಪರವಾಗಿರುವವರಾಗಿರಲಿಲ್ಲ, ಅವರು ಸಂಘಪರಿವಾರ ಆಮದುಮಾಡಿಕೊಂಡ ವ್ಯವಸ್ಥಿತ ಕ್ರಿಮಿನಲ್‌ಗಳಾಗಿದ್ದರು ಎನ್ನುವ ಅಂಶ ಬಹಿರಂಗವಾಗಿದ್ದರೂ, ಇಡೀ ಪ್ರಕರಣವನ್ನು ಸಿಎಎ ಪರ-ವಿರೋಧಿಗಳ ನಡುವಿನ ಗಲಭೆ ಎಂದು ಬಿಂಬಿಸಲು ಪ್ರಯತ್ನಿಸುತ್ತಿದೆ. ಇಂತಹ ಸಂದರ್ಭದಲ್ಲಿ ಮಾಧ್ಯಮಗಳ ಬಾಯಿ ಮುಚ್ಚಿಸುವುದು ಅದಕ್ಕೆ ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಎರಡು ಚಾನೆಲ್‌ಗಳಿಗೆ 48 ಗಂಟೆಗಳ ನಿಷೇಧವನ್ನು ವಿಧಿಸುವ ಪ್ರಯತ್ನ ಮಾಡುವ ಮೂಲಕ, ಇತರ ಮಾಧ್ಯಮಗಳಿಗೆ ಪರೋಕ್ಷ ಎಚ್ಚರಿಕೆಯನ್ನು ನೀಡಿದೆ. ಈ ಎಚ್ಚರಿಕೆಗೆ ಯಾವ ರೀತಿಯಲ್ಲೂ ಬೆದರದೇ, ಮಾಧ್ಯಮಗಳು ಮುಂದಕ್ಕೆ ಹೆಜ್ಜೆ ಇಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News