ರಾಜ್ಯದಲ್ಲಿ ಮೊದಲ ಕೊರೋನ ವೈರಸ್ ದೃಢ: ಅಮೆರಿಕಾದಿಂದ ಬಂದ ವ್ಯಕ್ತಿಗೆ ಸೋಂಕು
ಬೆಂಗಳೂರು, ಮಾ. 9: ರಾಜ್ಯದಲ್ಲಿ ಮೊದಲ ಕೊರೋನ ವೈರಸ್ ಸೋಂಕು ಪತ್ತೆಯಾಗಿದ್ದು, ಅಮೆರಿಕಾದಿಂದ ಬಂದ ವ್ಯಕ್ತಿಯಲ್ಲಿ ಕೊರೋನ ವೈರಸ್ ಸೋಂಕು ಇರುವುದು ದೃಢಪಟ್ಟಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಇಂದಿಲ್ಲಿ ಖಚಿತಪಡಿಸಿದ್ದಾರೆ.
ಸೋಮವಾರ ನಗರದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮೆರಿಕಾದಿಂದ ಬೆಂಗಳೂರಿಗೆ ಆಗಮಿಸಿದ 40 ವರ್ಷ ಪ್ರಾಯದ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರಲ್ಲಿ ಸೋಂಕಿರುವುದು ಖಚಿತವಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅಮೆರಿಕದಿಂದ ಮಾ.1ರ ಬೆಳಗ್ಗೆ 8.30ಕ್ಕೆ ಬೆಂಗಳೂರಿಗೆ ಆಗಮಿಸಿದ್ದರು. ಅವರಿಗೆ ಜ್ವರ ಕಾಣಿಸಿಕೊಂಡಿದ್ದು ಖಾಸಗಿ ಆಸ್ಪತ್ರೆಯಲ್ಲಿ ಹೊರ ರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಅವರಲ್ಲಿ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಅವರ ಪತ್ನಿ, ಮಗು ಹಾಗೂ ಅವರ ಕಾರು ಚಾಲಕನನ್ನು ಪತ್ಯೇಕವಾಗಿ ಇರಿಸಿದ್ದು, ರಾಜೀವ್ ಗಾಂಧಿ ಎದೆ ರೋಗಿಗಳ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ಪ್ರಾಥಮಿಕ ಶಾಲೆಗಳಿಗೆ ರಜೆ: ಕೊರೋನ ವೈರಸ್ ಭೀತಿ ಹಿನ್ನೆಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನರ್ಸರಿ, ಎಲ್‌ಕೆಜಿ ಮತ್ತು ಯುಕೆಜಿ ಮಕ್ಕಳಿಗೆ ರಜೆ ಘೋಷಿಸಲಾಗಿತ್ತು. ಇದೀಗ 1ರಿಂದ 5ನೆ ತರಗತಿಯ ವರೆಗೂ ಮುಂದಿನ ಆದೇಶದವರೆಗೆ ರಜೆ ಘೋಷಣೆ ಮಾಡಲಾಗಿದೆ.
ರಾಜ್ಯದಲ್ಲಿ ಈವರೆಗೂ ಒಟ್ಟು ಕೊರೋನ ಸೋಂಕಿಗೆ ಸಂಬಂಧಿಸಿದಂತೆ 432 ವ್ಯಕ್ತಿಗಳ ರಕ್ತ ಪರೀಕ್ಷೆ ನಡೆಸಲಾಗಿದ್ದು, 364 ಜನರಲ್ಲಿ ಸೋಂಕು ಇಲ್ಲ ಎಂದು ಗೊತ್ತಾಗಿದೆ. ಇಂದು 16 ಮಂದಿ ತಪಾಸಣೆ ನಡೆಸಿದ್ದು, ಆ ಪೈಕಿ ಅಮೆರಿಕಾದಿಂದ ಆಗಮಿಸಿದ ವ್ಯಕ್ತಿಯೊಬ್ಬರಲ್ಲಿ ಸೋಂಕು ಇರುವುದು ದೃಢಪಟ್ಟಿದೆ ಎಂದು ತಿಳಿಸಿದರು.
ರಾಜ್ಯದ ಹಿತದೃಷ್ಟಿಯಿಂದ ಸೋಂಕು ಪೀಡಿತ ವ್ಯಕ್ತಿಯ ಹೆಸರು, ಆತನ ಕೆಲಸ ಮಾಡುತ್ತಿದ್ದ ಸಾಫ್ಟ್‌ವೇರ್ ಕಂಪೆನಿ ಸೇರಿ ಇನ್ನಿತರ ವಿವರಗಳನ್ನು ಬಹಿರಂಗ ಪಡಿಸದಿರಲು ತೀರ್ಮಾನಿಸಲಾಗಿದೆ ಎಂದ ಅವರು, ಕೊರೋನ ವೈರಸ್ ತಡೆಗಟ್ಟುವ ಸಂಬಂಧ ಕೇಂದ್ರ ಸರಕಾರದ ಜತೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದರು.
ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಿದಂತೆ ಬಿಬಿಎಂಪಿ, ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಎಲ್ಲ ಪ್ರಾಥಮಿಕ ಶಾಲೆಗಳಿಗೆ ಮುಂದಿನ ಆದೇಶದ ವರೆಗೆ ರಜೆ ಘೋಷಿಸಲಾಗಿದೆ
-ಎಸ್.ಸುರೇಶ್ ಕುಮಾರ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ