ಬೀದರ್‌ನ ಶಾಹೀನ್ ಶಾಲೆಯ ಪ್ರಕರಣ: ಪೊಲೀಸ್ ತನಿಖೆ ಬಗ್ಗೆ ಪ್ರಮಾಣ ಪತ್ರ ಸಲ್ಲಿಸಲು ಹೈಕೋರ್ಟ್ ನಿರ್ದೇಶನ

Update: 2020-03-09 15:39 GMT
ಫೈಲ್ ಚಿತ್ರ

ಬೆಂಗಳೂರು, ಮಾ.9: ಬೀದರ್ ನಗರದ ಶಾಹೀನ್ ಶಿಕ್ಷಣ ಸಂಸ್ಥೆಯ ಶಾಲಾ ವಾರ್ಷಿಕೋತ್ಸವದಲ್ಲಿ ಸಿಎಎ ವಿರೋಧಿ ನಾಟಕ ಪ್ರದರ್ಶಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶದ್ರೋಹ ಆರೋಪದಡಿ ದೂರು ದಾಖಲಿಸಿಕೊಂಡು ಅಪ್ರಾಪ್ತ ವಿದ್ಯಾರ್ಥಿಗಳನ್ನು ಪೊಲೀಸ್ ಸಮವಸ್ತ್ರದಲ್ಲಿಯೇ ವಿಚಾರಣೆಗೆ ಒಳಪಡಿಸಿರುವ ಬಗ್ಗೆ ಪ್ರಮಾಣ ಪತ್ರ ಸಲ್ಲಿಸಲು ಹೈಕೋರ್ಟ್ ರಾಜ್ಯ ಸರಕಾರಕ್ಕೆ ನಿರ್ದೇಶಿಸಿದೆ.

ಈ ಕುರಿತು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಅಶೋಕ್ ಕಿಣಗಿ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.

ಸರಕಾರದ ಪರ ವಾದಿಸಿದ ವಕೀಲರು, ಅರ್ಜಿದಾರರು ಮಾಧ್ಯಮಗಳಲ್ಲಿ ಬಂದ ವರದಿ ಆಧಾರದ ಮೇಲೆ ಪೊಲೀಸರು ಮಕ್ಕಳನ್ನು ಸಮವಸ್ತ್ರದಲ್ಲಿಯೇ ತನಿಖೆಗೆ ಒಳಪಡಿಸಿದ್ದಾರೆ ಎಂದು ತಿಳಿಸಿದ್ದಾರೆ. ಆದರೆ, ಪೊಲೀಸರು ವಿದ್ಯಾರ್ಥಿಗಳನ್ನು ಕೌನ್ಸೆಲಿಂಗ್ ನಡೆಸಲು ಶಾಲೆಗೆ ಭೇಟಿ ನೀಡುವಾಗ ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿ, ಉಪಾಧ್ಯಾಯರು, ಬಾಲಾಪರಾಧಿ ನ್ಯಾಯಾಲಯದ ಅಧಿಕಾರಿಗಳನ್ನು ಕರೆದುಕೊಂಡೇ ಹೋಗಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು, ಅರ್ಜಿದಾರರು ಪೊಲೀಸರು ಸಮವಸ್ತ್ರದಲ್ಲಿಯೇ ಶಾಲಾ ಮಕ್ಕಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂಬ ಫೋಟೋಗಳನ್ನು ಪೀಠಕ್ಕೆ ಸಲ್ಲಿಸಿದ್ದಾರೆ. ಮುಂದಿನ ವಿಚಾರಣೆ ವೇಳೆ ಈ ಬಗ್ಗೆ ಪ್ರಮಾಣ ಪತ್ರ ಸಲ್ಲಿಸಲು ರಾಜ್ಯ ಸರಕಾರಕ್ಕೆ ನಿರ್ದೇಶಿಸಿತು.

ಪ್ರಕರಣವೇನು: ಶಾಹೀನ್ ಶಿಕ್ಷಣ ಸಂಸ್ಥೆಗೆ ಸಮವಸ್ತ್ರದಲ್ಲಿ ತೆರಳಿರುವ ಪೊಲೀಸರು ಅಪ್ರಾಪ್ತ ಮಕ್ಕಳನ್ನು ತನಿಖೆಗೆ ಒಳಪಡಿಸಿದ್ದಾರೆ. ಇದರಿಂದ, ಮಕ್ಕಳ ಹಕ್ಕುಗಳನ್ನು ಉಲ್ಲಂಘಿಸಿದಂತಾಗಿದೆ. ಇದು ಕಾನೂನು ಬಾಹಿರವಾಗಿದೆ ಎಂದು ಈ ಹಿಂದೆ ಅರ್ಜಿದಾರರು ಪೀಠಕ್ಕೆ ತಿಳಿಸಿದ್ದರು. ನ್ಯಾಯಪೀಠವು ಪೊಲೀಸರು ಸಮವಸ್ತ್ರದಲ್ಲಿ ತೆರಳಿ ಅದು ಹೇಗೆ ಅಪ್ರಾಪ್ತ ಮಕ್ಕಳನ್ನು ವಿಚಾರಣೆಗೆ ಒಳಪಡಿಸಿದರು. ಕಾನೂನಿನಲ್ಲಿ ಇದಕ್ಕೆ ಅವಕಾಶವಿದೆಯೇ ಎಂಬುದರ ಬಗ್ಗೆ ಮಾಹಿತಿ ನೀಡಲು ಸೂಚಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News