ರಾಜ್ಯಾದ್ಯಂತ ಟಿಪ್ಪು ಜಯಂತಿ ವೇಳೆ ದಾಂಧಲೆ: 46 ಪ್ರಕರಣಗಳನ್ನು ಹಿಂಪಡೆಯಲು ಸರಕಾರ ನಿರ್ಧಾರ

Update: 2020-03-09 17:51 GMT

ಮಡಿಕೇರಿ, ಮಾ.9: ಟಿಪ್ಪು ಜಯಂತಿ ಹಿನ್ನೆಲೆಯಲ್ಲಿ ಸಂಘಪಪರಿವಾರದ ಕಾರ್ಯಕರ್ತರು ಸೇರಿದಂತೆ ಹಲವರ ಮೇಲೆ ದಾಖಲಾಗಿದ್ದ 46 ಪ್ರಕರಣಗಳನ್ನು ಹಿಂಪಡೆಯಲು ಸರಕಾರ ನಿರ್ಧರಿಸಿದೆ.

ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಒಟ್ಟು 46 ಪ್ರಕರಣಗಳನ್ನು ಹಿಂಪಡೆಯಲು ಅನುಮತಿ ನೀಡಿದ್ದು, ಆ ಪೈಕಿ 18 ಪ್ರಕರಣಗಳು ಕೊಡಗು ಜಿಲ್ಲೆಗೆ ಸಂಬಂಧಿಸಿವೆ. ಇವುಗಳಲ್ಲಿ ಟಿಪ್ಪು ಜಯಂತಿಯ ಸಂದರ್ಭ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಪ್ರಕರಣಗಳೇ ಹೆಚ್ಚಾಗಿದ್ದು, ಎರಡೂ ಕೋಮುಗಳ ಕೇಸುಗಳನ್ನು ಹಿಂಪೆಯಲು ಸರಕಾರ ಸೂಚಿಸಿದೆ.

2015ರ ನವೆಂಬರ್ 9ರಂದು ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಗುಹ್ಯ ಅಗಸ್ತೇಶ್ವರ ಕಟ್ಟಡ, ನವೆಂಬರ್ 10ರಂದು ಪಾಲಿಬೆಟ್ಟದ ಖಾಸಗಿ ಬಸ್ ನಿಲ್ದಾಣ, ಕೊಂಡಂಗೇರಿಯ ಗ್ರಾಮದ ಹಾಲುಗುಂದ ಜಂಕ್ಷನ್ ಬಳಿ ಟಿಪ್ಪು ಸುಲ್ತಾನ್ ಜಯಂತಿಗೆ ಶುಭ ಕೋರಿ ಫ್ಲೆಕ್ಸ್ ಅಳವಡಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಹಲವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

2015ರ ನ.10ರಂದು ಸೋಮವಾರಪೇಟೆಯ ತಾಪಂ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ನುಗ್ಗಿ ದಾಂಧಲೆ ನಡೆಸಿದ್ದಲ್ಲದೆ, ಜಯಂತಿ ಆಚರಣೆಗೆ ಬಂದವರನ್ನು ಪೊಲೀಸರು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುತ್ತಿದ್ದಾಗ ಪೊಲೀಸ್ ಬಸ್ ಅನ್ನು ಅಡ್ಡಗಟ್ಟಿ ದಾಂಧಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

2015, ನ.13ರಂದು ಸೋಮವಾರಪೇಟೆಯ ವರ್ಕ್ ಶಾಪ್ ಹಾಗೂ ಒಂದು ದ್ವಿಚಕ್ರ ವಾಹನ ಸುಟ್ಟು ಹಾಕಿದ್ದ ಬಗ್ಗೆ ಸೋಮವಾರಪೇಟೆ ಪಟ್ಟಣ ಪೊಲೀಸರು ಪ್ರರಣ ದಾಖಲಿಸಿದ್ದರು.

2015ರ ನ.10ರಂದು ಟಿಪ್ಪು ಜಯಂತಿ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದವರನ್ನು ವಶಕ್ಕೆ ಪಡೆದು ಪೊಲೀಸ್ ವಾಹನದಲ್ಲಿ ಕರೆದೊಯ್ಯುತ್ತಿದ್ದ ವೇಳೆ ಬಸ್ ಗೆ ಹಾನಿ ಮಾಡಿ ಅದರ ವೈಯರಿಂಗ್ ಹಾೂ ಮೇಲ್ಛಾವಣಿಯ ಹೊದಿಕೆ ಹರಿದಿರುವುದು, ಕೆಎಸ್ಆರ್‌ಟಿಸಿ ಬಸ್‍ನ ಸೀಟುಗಳು ಮತ್ತು ವೈಯರಿಂಗ್ ಕಿತ್ತಿರುವುದು, ಕಾಲೂರು ಬಳಿ ಕೆಎಸ್ಆರ್‌ಟಿಸಿ ಬಸ್‍ಗೆ ಕಲ್ಲು ತೂರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿ ನಗರ ಮತ್ತು ಮಡಿಕೇರಿ ನಗರ ಮತ್ತು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದವು.

ಗೋಣಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರು ಫೇಸ್‍ಬುಕ್‍ನಲ್ಲಿ ಟಿಪ್ಪು ಸುಲ್ತಾನ್ ಬಗ್ಗೆ ಅವಹೇಳನಕಾರಿ ಪೋಸ್ಟರ್ ಹಾಕಿರುವುದು, 2018ರಲ್ಲಿ ಚುನಾವಣಾ ಪ್ರಚಾರ ಸಂದರ್ಭ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಒಡ್ಡಿರುವುದು, ಗೋಣಿಕೊಪ್ಪ ಪೊಲೀಸರು ದಸ್ತಗಿರಿಗೆ ಮುಂದಾದಾಗ ಪೊಲೀಸ್ ಭದ್ರತೆಯಿಂದ ತಪ್ಪಿಸಿಕೊಂಡು, ದಸ್ತಗಿರಿಗೆ ಪ್ರತಿರೋಧ ಒಡ್ಡಿರುವ ಪ್ರಕರಣಗಳು ಸೇರಿದಂತೆ ಕೊಡಗು ಜಿಲ್ಲೆಯಲ್ಲಿ ವಿವಿಧ ರೀತಿಯ ಒಟ್ಟು 18 ಕೇಸುಗಳು ದಾಖಲಾಗಿದ್ದವು.

ಅಲ್ಲದೆ, 2014ರಲ್ಲಿ ಕಸ್ತೂರಿ ರಂಗನ್ ವರದಿ ಜಾರಿಗೊಳಿಸುವ ಬಗ್ಗೆ ನವೆಂಬರ್‌ನಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಅರಣ್ಯ ಅಧಿಕಾರಿಯೊಬ್ಬರು ನಗುತ್ತಿದ್ದುದನ್ನು ಪ್ರಶ್ನಿಸಿ ಅವರ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಪದಗಳಿಂದ ನಿಂದಿಸಿರುವುದಾಗಿ ಕೆಲವರ ಮೇಲೆ ಪ್ರರಣಗಳನ್ನು ದಾಖಲಿಸಲಾಗಿತ್ತು.

ಈ ಎಲ್ಲಾ ಪ್ರಕರಣಗಳನ್ನು ಕೈಬಿಡುವಂತೆ ಸಿ.ಆರ್.ಪಿ.ಸಿ. ಕಲಂ 321 ಅಭಿಯೋಜನೆಯಿಂದ ಹಿಂಪಡೆಯಲು ಸರಕಾರ ಮಂಜೂರಾತಿ ನೀಡಿದೆ. ಅಲ್ಲದೆ, ಈ ಬಗ್ಗೆ ಅಭಿಯೋಗ ಮತ್ತು ಸರಾರಿ ವ್ಯಾಜ್ಯಗಳ ಇಲಾಖೆಯ ನಿರ್ದೇಶರಿಗೆ ಸೂಚನೆ ನೀಡಿರುವ ಸರಕಾರ ಅನುಬಂಧದಲ್ಲಿರುವ 46 ಪ್ರರಣಗಳನ್ನು ಸಂಬಂಧಪಟ್ಟ ನ್ಯಾಯಾಲಯದಿಂದ ಹಿಂಪಡೆಯಲು ಅಗತ್ಯವಾದ ಅರ್ಜಿಯನ್ನು ಸಲ್ಲಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿ ಆದೇಶ ಹೊರಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News