ಬಿಜೆಪಿ ಮುಖಂಡ ಆನಂದ್ ಹತ್ಯೆ ಪ್ರಕರಣ: ತನಿಖೆ ಚುರುಕುಗೊಳಿಸಿದ ಪೊಲೀಸರು
Update: 2020-03-09 23:55 IST
ಮೈಸೂರು,ಮಾ.9: ಹುಟ್ಟು ಹಬ್ಬದಂದೇ ಬರ್ಬರವಾಗಿ ಹತ್ಯೆಯಾದ ಬಿಜೆಪಿ ಮುಖಂಡ ಎಸ್.ಆನಂದ್ ಅಲಿಯಾಸ್ ವಡ್ಡ ಆನಂದ ಹತ್ಯೆ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ.
ಹತ್ಯೆಯ ಪ್ರಮುಖ ಆರೋಪಿ ಬಸವರಾಜು ಶನಿವಾರ ಮೈಸೂರು ನ್ಯಾಯಾಲಯಕ್ಕೆ ಬಂದು ಶರಣಾಗಿದ್ದಾನೆ. ಈಗ ನ್ಯಾಯಾಂಗ ಬಂಧನದಲ್ಲಿದ್ದು, ಸೋಮವಾರ ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ. ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ವಿಶೇಷ ತನಿಖಾ ತಂಡ ರಚಿಸಿ ತಲೆಮರೆಸಿಕೊಂಡಿರುವ ಇನ್ನೂ ಐವರು ಹಂತಕರ ಪತ್ತೆಗೆ ಶೋಧಕಾರ್ಯ ನಡೆಸಿದ್ದಾರೆ. ಕುವೆಂಪು ನಗರ ಠಾಣೆ ಇನ್ಸ್ ಪೆಕ್ಟರ್ ರಾಜು ನೇತೃತ್ವದ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಮೈಸೂರಿನ ಕುವೆಂಪು ನಗರದ ಲವ ಕುಶ ಪಾರ್ಕ್ ಬಳಿಯ ಸರ್ವಿಸ್ ಅಪಾರ್ಟ್ ಮೆಂಟ್ ನಲ್ಲಿ ಮಾ.5ರ ತಡರಾತ್ರಿ ಸ್ನೇಹಿತರಿಂದಲೇ ಬರ್ಬರವಾಗಿ ಬಿಜೆಪಿ ಮುಖಂಡ ಎಸ್.ಆನಂದ ಅಲಿಯಾಸ್ ವಡ್ಡ ಆನಂದ ಹತ್ಯೆ ನಡೆದಿತ್ತು.