×
Ad

ಕೊನೆಗೂ ಮಡಿಕೇರಿ ಅರಮನೆಗೆ ದುರಸ್ತಿ ಭಾಗ್ಯ: ಭರದಿಂದ ಸಾಗಿದ ಕಾಮಗಾರಿ

Update: 2020-03-10 18:27 IST

ಮಡಿಕೇರಿ ಮಾ.10 : ಆಳರಸರ ಆಳ್ವಿಕೆಯ ಕುರುಹುಗಳಾಗಿ ಇಂದಿನ ಮತ್ತು ಮುಂದಿನ ಪೀಳಿಗೆಗೆ ಸ್ಮಾರಕವಾಗಿ ಅಳಿದು ಉಳಿದಿರುವ ಮಡಿಕೇರಿ ಕೋಟೆಯ ಅರಮನೆಯನ್ನು ಸಂರಕ್ಷಿಸುವ ಕಾರ್ಯಕ್ಕೆ ಪುರಾತತ್ವ ಇಲಾಖೆ ಮುಂದಾಗಿದೆ. ಸಂಪೂರ್ಣ ನಿರ್ಲಕ್ಷಕ್ಕೆ ತುತ್ತಾಗಿ ಶಿಥಿಲಾವಸ್ಥೆಗೆ ತಲುಪಿದ್ದ ಅರಮನೆಯ ದುರಸ್ತಿ ಕಾರ್ಯ ಭರದಿಂದ ಸಾಗಿದೆ.

ಅರಮನೆಯ ಅವ್ಯವಸ್ಥೆಯ ಕುರಿತು ಪತ್ರಿಕೆಯು ಈ ಹಿಂದೆ ವರದಿ ಮಾಡಿ ಆಡಳಿತ ವ್ಯವಸ್ಥೆಯ ಗಮನ ಸೆಳೆದಿತ್ತು. ಇದೀಗ ಅರಮನೆಯ ಹಳೆಯ ಹೆಂಚುಗಳನ್ನು ಸಂಪೂರ್ಣವಾಗಿ ತೆಗೆದು ಒಳಭಾಗದಲ್ಲಿ ಅಳವಡಿಸಿರುವ ತಗಡಿನ ಶೀಟ್‍ಗಳು ಮತ್ತು ಮರದ ಪಟ್ಟಿಗಳನ್ನು ದುರಸ್ತಿ ಮಾಡುವ ಕಾರ್ಯ ನಡೆಯುತ್ತಿದೆ. ಕಾಮಗಾರಿ ನಡೆಸಲು ಪುರಾತತ್ವ ಇಲಾಖೆ ಈ ಹಿಂದೆ ಟೆಂಡರ್ ಕರೆದಿದ್ದು, ಮೊದಲು ಟೆಂಡರ್ ಕರೆದವರು ಇಲಾಖೆಯ ಯೋಜನಾ ವರದಿಗೆ(ಡಿಪಿಆರ್) ಒಪ್ಪದೇ ಹಿಂದೆ ಸರಿದ ಹಿನ್ನೆಲೆಯಲ್ಲಿ ಇದೀಗ ಎರಡನೇ ಬಾರಿಗೆ ಟೆಂಡರ್ ಕರೆಯಲಾಗಿದೆ. ಮಂಗಳೂರು ಮೂಲದ ಗುತ್ತಿಗೆದಾರರು ಈ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಿದ್ದು, ಮಡಿಕೇರಿಯ ಸ್ಥಳೀಯ ಕಾರ್ಮಿಕರು ದುರಸ್ತಿ ಕಾರ್ಯದಲ್ಲಿ ತೊಡಗಿದ್ದಾರೆ.

ಕಳೆದ ಹಲವು ವರ್ಷಗಳಿಂದ ಅರಮನೆ ಸೇರಿದಂತೆ ಕೋಟೆ ಆವರಣವನ್ನು ನಿರ್ಲಕ್ಷ್ಯ ಮಾಡಿದ ಪರಿಣಾಮ ಅಮೂಲ್ಯ ಕುರುಹುಗಳು ಹಾನಿಗೀಡಾಗಿವೆ. ಕೋಟೆ ಮೇಲ್ಚಾವಣಿಯಲ್ಲಿ ಅಳವಡಿಸಿದ್ದ ಸಾವಿರಾರು ಹೆಂಚುಗಳು ಗಾಳಿ, ಮಳೆಗೆ ಈಗಾಗಲೇ ಬಿದ್ದು ಒಡೆದು ಹೋಗಿವೆ. ಹಳೆಯ ಹೆಂಚುಗಳ ಬದಲಿಗೆ ಈಗಿನ ನೂತನ ಮಾದರಿಯ ಮಂಗಳೂರು ಹೆಂಚುಗಳನ್ನು ಅಳವಡಿಸಲು ಚಿಂತನೆ ನಡೆಸಲಾಗಿದೆ.

ಈಗಾಗಲೇ ಮಡಿಕೇರಿ ಸೇರಿದಂತೆ ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಮಳೆಯಾಗಿದ್ದು, ಮುಂದಿನ ಎರಡು ತಿಂಗಳಲ್ಲಿ ಮತ್ತೆ ಮಳೆಗಾಲ ಆರಂಭವಾಗಲಿದೆ. ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವ ಬಗ್ಗೆಯೂ ಸಾರ್ವಜನಿಕ ವಲಯದಿಂದ ಆರೋಪಗಳು ಕೇಳಿ ಬಂದಿದೆ. 

ಕೋಟೆ ಆವರಣದಲ್ಲಿದ್ದ ಸರ್ಕಾರಿ ಕಚೇರಿಗಳು ಬಹುತೇಕ ಸ್ಥಳಾಂತರಗೊಂಡಿದ್ದರು ನ್ಯಾಯಾಲಯ ಕಾರ್ಯ ನಿರ್ವಹಿಸುತ್ತಿದೆ. ಜಿಲ್ಲಾ ಕೇಂದ್ರ ಗ್ರಂಥಾಲಯ, ಜಿಲ್ಲಾ ಪಂಚಾಯತ್ ಹಳೇ ಇಂಜಿನಿಯರಿಂಗ್ ವಿಭಾಗದ ಕಟ್ಟಡಗಳು, ಓವರ್ ಹೆಡ್ ಟ್ಯಾಂಕ್ ನ್ನು ಇದೇ ಆಗಸ್ಟ್ 31ರೊಳಗೆ ತೆರವುಗೊಳಿಸುವ ಕುರಿತು ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ನ್ಯಾಯಾಲಯ ಕೂಡ ನೂತನ ಸಂಕೀರ್ಣಕ್ಕೆ ಸ್ಥಳಾಂತರಗೊಳ್ಳುವುದು ಖಚಿತವಾಗಿದೆ. 

ಇದೀಗ ಅರಮನೆಯ ದುರಸ್ತಿ ಕಾರ್ಯ ನಡೆಯುತ್ತಿರುವುದರಿಂದ ಪ್ರತಿದಿನ ಕೋಟೆ ಆವರಣ ವೀಕ್ಷಿಸಲು ಆಗಮಿಸುತ್ತಿರುವ ನೂರಾರು ಪ್ರವಾಸಿಗರು ನಿರಾಶೆಯಿಂದ ಮರಳುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News