ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ 'ಕಾಡಾನೆ ಹಾವಳಿ': ಸೂಕ್ತ ಪರಿಹಾರಕ್ಕೆ ಆಗ್ರಹ

Update: 2020-03-10 13:04 GMT

ಬೆಂಗಳೂರು, ಮಾ. 10: ರಾಜ್ಯದಲ್ಲಿ ಕಾಡಾನೆ ಹಾವಳಿ ತಡೆಗಟ್ಟುವ ವಿಚಾರ ವಿಧಾನಸಭೆಯಲ್ಲಿ ಪ್ರತಿಧ್ವನಿಸಿತಲ್ಲದೆ, ಕಾಡಾನೆ ಸೇರಿ ವನ್ಯಜೀವಿಗಳ ದಾಳಿಗೆ ತುತ್ತಾಗಿ ಜೀವ ಕಳೆದುಕೊಂಡವರ ಕುಟುಂಬಕ್ಕೆ ಸೂಕ್ತ ಪರಿಹಾರಕ್ಕೆ ಪಕ್ಷಭೇದ ಮರೆತು ಶಾಸಕರು ಆಗ್ರಹಿಸಿದ ಪ್ರಸಂಗ ವಿಧಾನಸಭೆಯಲ್ಲಿ ನಡೆಯಿತು.

ಮಂಗಳವಾರ ವಿಧಾನಸಭೆ ಶೂನ್ಯವೇಳೆಯಲ್ಲಿ ಜೆಡಿಎಸ್‌ನ ಹಿರಿಯ ಸದಸ್ಯ ಎ.ಟಿ. ರಾಮಸ್ವಾಮಿ, ಎಚ್.ಕೆ.ಕುಮಾರಸ್ವಾಮಿ, ಬಿಜೆಪಿಯ ಅಪ್ಪಚ್ಚು ರಂಜನ್ ಸೇರಿ ಇನ್ನಿತರ ಸದಸ್ಯರು ಕಾಡಾನೆ ಹಾವಳಿ ಸಮಸ್ಯೆಯ ಗಂಭೀರತೆಯನ್ನು ಸದನದ ಗಮನಕ್ಕೆ ತಂದರು.

10 ಲಕ್ಷ ರೂ.ಪರಿಹಾರ: ಕಾಡಾನೆ ಸೇರಿ ವನ್ಯಜೀವಿಗಳ ಹಾವಳಿಯಿಂದ ಮೃತಪಟ್ಟವರ ಕುಟುಂಬಕ್ಕೆ 7.50 ಲಕ್ಷ ರೂ.ಪರಿಹಾರ ನೀಡಲಾಗುತ್ತಿದ್ದು, ಅದನ್ನು 10 ಲಕ್ಷ ರೂ.ಗಳಿಗೆ ಹೆಚ್ಚಳ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಸಚಿವ ಆನಂದ್ ಸಿಂಗ್ ತಿಳಿಸಿದರು.

ವನ್ಯಜೀವಿಗಳ ದಾಳಿಯಿಂದ ಸತ್ತವರ ಕುಟುಂಬದವರ ಜೀವನೋಪಾಯಕ್ಕಾಗಿ ಐದು ವರ್ಷಗಳ ವರೆಗೆ ಪ್ರತಿ ತಿಂಗಳು 2 ಸಾವಿರ ರೂ.ಮಾಸಾಶನ ನೀಡಲಾಗುತ್ತಿದೆ. ಅದನ್ನೂ 5 ಸಾವಿರ ರೂ.ಗೆ ಏರಿಸಲು ಉದ್ದೇಶಿಸಿದೆ. ಅಲ್ಲದೆ, ಕಾಡಾನೆಗಳ ಹಾವಳಿ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಹಾವಳಿ ತಡೆಗೆ ಸುರಕ್ಷಿತ ಬೇಲಿ, ಕಾಡಿನಲ್ಲಿ ಆಹಾರ ಮತ್ತು ನೀರಿನ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ರೈತರಿಗೆ ಸೂಕ್ತ ರೀತಿಯಲ್ಲಿ ಪರಿಹಾರ ನೀಡಲು ಕ್ರಮ ವಹಿಸಲಾಗುವುದು. ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದರೆ, ಈ ವರ್ಷ ಆನೆಗಳ ಹಾವಳಿ ಕಡಿಮೆಯಾಗಿದೆ ಎಂದು ವಿವರಿಸಿದರು.

ನಾವು ನಿಮ್ಮ ಕಡೆ, ನೀವು ನಮ್ಮ ಕಡೆ: ಮಲೆನಾಡು ಭಾಗ ಸೇರಿ ರಾಜ್ಯದಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದ್ದು, ಜನ ಭಯಭೀತರಾಗಿದ್ದು ಮನೆಗಳಿಂದ ಹೊರಬರಲು ಹಿಂಜರಿಯುತ್ತಿದ್ದಾರೆ. ಬೆಳೆ ನಷ್ಟದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಾಸನದ ಆಲೂರು ಭಾಗದಲ್ಲಿ ನಾವು ಕೊಡಗು ಭಾಗಕ್ಕೆ ಆನೆಗಳನ್ನು ಸಾಗಹಾಕಿದರೆ, ಅವರು ನಮ್ಮ ಭಾಗಕ್ಕೆ ಕಳುಹಿಸುತ್ತಾರೆ ಎಂದು ಎ.ಟಿ.ರಾಮಸ್ವಾಮಿ ಗಮನ ಸೆಳೆದರು.

ಇದಕ್ಕೆ ಧ್ವನಿಗೂಡಿಸಿದ ಎಚ್.ಕೆ.ಕುಮಾರಸ್ವಾಮಿ, ಒಂಟಿ ಸಲಗಗಳನ್ನು ಹಿಡಿಯಲು ಅಧಿಕಾರವನ್ನು ನೀಡಬೇಕು ಎಂದರು. ಕಾಡಿನಲ್ಲಿ ಆನೆಗಳಿಗೆ ಆಹಾರ ಸಿಗುತ್ತಿಲ್ಲ. ಹೀಗಾಗಿ ಅವು ಕಾಫಿ ಎಸ್ಟೇಟ್‌ಗಳಿಗೆ ನುಗ್ಗುತ್ತಿವೆ. ಕಾಡಿನಲ್ಲಿ ಟೀಕ್ ಮರಗಳನ್ನು ತೆರವುಗೊಳಿಸಿ ಮಾವು, ಹಲಸು ಸೇರಿದಂತೆ ಮೇವು-ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಅಪ್ಪಚ್ಚು ರಂಜನ್ ಸಲಹೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News