ಕೊರೋನ ವೈರಸ್‌ಗಿಂತ ಎನ್‌ಪಿಆರ್, ಎನ್‌ಆರ್‌ಸಿ ಮಾರಕ: ಮಾಜಿ ಸಚಿವೆ ಜಯಮಾಲಾ

Update: 2020-03-10 13:16 GMT

ಬೆಂಗಳೂರು, ಮಾ.10: ಕೊರೋನ ವೈರಸ್‌ಗಿಂತ ಎನ್‌ಪಿಆರ್, ಎನ್‌ಆರ್‌ಸಿ ಪ್ರಕ್ರಿಯೆಗಳು ಮಾರಕವಾಗಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ ಎಂದು ಮಾಜಿ ಸಚಿವೆ ಜಯಮಾಲಾ ಹೇಳಿದರು.

ಮಂಗಳವಾರ ವಿಧಾನ ಪರಿಷತ್‌ನಲ್ಲಿ ಮಧ್ಯಾಹ್ನ ಭೋಜನ ನಂತರ ಆರಂಭವಾದ ಭಾರತ ಸಂವಿಧಾನದ ಮೇಲಿನ ವಿಶೇಷ ಚರ್ಚೆಯಲ್ಲಿ ಅವರು ಮಾತನಾಡಿದರು.

ಕೊರೋನ ವೈರಸ್ ಬಗ್ಗೆ ಆತಂಕ ಇರುವಂತೆ, ಹತ್ತು ಪಟ್ಟು ಹೆಚ್ಚು ಎನ್‌ಪಿಆರ್, ಎನ್‌ಆರ್‌ಸಿ ಬಗ್ಗೆ ಇದೆ. ಇದರಲ್ಲಿ ಪ್ರಮುಖವಾಗಿ ಜನನ ಪ್ರಮಾಣ ಪತ್ರ ಸಲ್ಲಿಸಬೇಕೆಂದು ಹೇಳಲಾಗುತ್ತದೆ. ಆದರೆ, ಕೋಟ್ಯಂತರ ಜನರ ಬಳಿ ಈ ದಾಖಲೆಗಳು ಇಲ್ಲ. ಆದರೂ ಸರಕಾರ ಹಠಕ್ಕೆ ಬಿದ್ದು, ಜಾರಿಗೆ ಮುಂದಾಗಿದೆ ಎಂದು ಆರೋಪಿಸಿದರು.

ನಮ್ಮ ದೇಶದಲ್ಲಿ ಸ್ವಾತಂತ್ರ್ಯ ಹೋರಾಟ, ಜೆಪಿ ಚಳುವಳಿ ಹಾಗೂ ಎನ್‌ಪಿಆರ್, ಎನ್‌ಆರ್‌ಸಿ ವಿರುದ್ಧ ನಡೆಯುತ್ತಿರುವ ಹೋರಾಟಗಳು ಪ್ರಮುಖವಾದದ್ದು, ಈ ಹೋರಾಟಕ್ಕೆ ಯಾರೂ ನಾಯಕರಿಲ್ಲ. ಆದರೂ, ಸ್ವಯಂ ಪ್ರೇರಿತವಾಗಿ ಜನರು ಬೀದಿಗಿಳಿದು, ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವುದು ಇತಿಹಾಸ ಸೃಷ್ಟಿಸಿದೆ ಎಂದು ನುಡಿದರು.

ಆಧಾರ್ ಮತ್ತು ಮತದಾನ ಗುರುತಿನ ಚೀಟಿ ದಾಖಲೆಗಳಲ್ಲ ಎಂದು ಹೇಳುವುದು ಸರಿಯಲ್ಲ ಎಂದ ಅವರು, ದೇಶದ 9 ರಾಜ್ಯಗಳು ಸಿಎಎ ವಿರುದ್ಧವಾಗಿದೆ. ಇದೇ ಮಾದರಿ ಕರ್ನಾಟಕದಲ್ಲಿ ಬರಬೇಕು. ಅಲ್ಲದೆ, ಅಸ್ಸಾಂನಲ್ಲಿ ನಡೆದಂತೆ ಎನ್‌ಆರ್‌ಸಿ ರಾಜ್ಯದಲ್ಲಿ ನಡೆಯುವುದು ಬೇಡ ಎಂದು ಒತ್ತಾಯಿಸಿದರು.

‘ಡಿಟೆನ್ಷನ್ ಸೆಂಟರ್ ಇದೆ’

ಒಂದು ಧರ್ಮವನ್ನು ಗುರಿಯಾಗಿಸಿಕೊಂಡು ಕಾನೂನು ಮಾಡಲಾಗಿದೆ. ಅಲ್ಲದೆ, ಎಪ್ರಿಲ್ ತಿಂಗಳ 15ರಂದು ಎನ್‌ಪಿಆರ್ ಪ್ರಕ್ರಿಯೆ ನಡೆಯಲಿದ್ದು, ಒಂದು ವೇಳೆ ನಮ್ಮ ದಾಖಲೆ ಸಾಬೀತು ಆಗಿಲ್ಲ ಎಂದರೆ ಬಂಧನ ಕೇಂದ್ರ (ಡಿಟೆನ್ಷನ್ ಸೆಂಟರ್)ದಲ್ಲಿ ಇಡುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇದನ್ನೆಲ್ಲಾ ಗಂಭೀರವಾಗಿ ಸರಕಾರ ಪರಿಗಣಿಸಿ, ಸೂಕ್ತ ಭರವಸೆ ನೀಡಬೇಕು ಎಂದು ಮಾಜಿ ಸಚಿವೆ ಜಯಮಾಲಾ ಒತ್ತಾಯಿಸಿದರು.

ಈ ವೇಳೆ ಮಧ್ಯಪ್ರವೇಶಿಸಿದ ಬಿಜೆಪಿ ಸದಸ್ಯೆ ತೇಜಸ್ವೀನಿ, ಡಿಟೆನ್ಷನ್ ಸೆಂಟರ್ ಎನ್ನುವುದು ಇಲ್ಲ. ಎಲ್ಲಿದೆ ಎಂದು ಮಾಜಿ ಸಚಿವೆ ಸದನಕ್ಕೆ ಮಾಹಿತಿ ನೀಡಬೇಕೆಂದರು. ಇದಕ್ಕೆ ಉತ್ತರಿಸಿದ ಜಯಮಾಲಾ, ನಿಮ್ಮ ಸರಕಾರದ ಬಳಿಯೇ ಮಾಹಿತಿ ಇದೆ. ಅಲ್ಲದೆ, ಡಿಟೆನ್ಷನ್ ಸೆಂಟರ್ ಎನ್ನುವುದು ಪ್ರತಿಯೊಂದು ದೇಶದಲ್ಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News