ಮುಸ್ಲಿಮರ ಬಗ್ಗೆ ಮಾತನಾಡುವ ಸಿದ್ದರಾಮಯ್ಯ, ಕುಮಾರಸ್ವಾಮಿ ಮುಸ್ಲಿಮರನ್ನೇಕೆ ಮಂತ್ರಿ ಮಾಡಲಿಲ್ಲ ?

Update: 2020-03-10 15:11 GMT

ಮೈಸೂರು,ಮಾ.10: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಮುಸ್ಲಿಮರು ಈ ದೇಶದಿಂದ ಒದ್ದು ಹೊರಗೆ ಹಾಕಬೇಕು ಎಂದಿದ್ದಾರೆ. ಈ ರೀತಿಯ ಹೇಳಿಕೆ ನೀಡುವ ರಮೇಶ್ ಕುಮಾರ್ ಅವರನ್ನೇ ಒದ್ದು ಜೈಲಿಗೆ ಹಾಕಬೇಕು ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.

ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಒಬ್ಬ ಮಾಜಿ ಸ್ಪೀಕರ್ ಈ ರೀತಿಯ ಹೇಳಿಕೆ ನೀಡುವುದು ಖಂಡನೀಯ. ಧರ್ಮ, ಜಾತಿಗಳ ನಡುವೆ ಸಂಘರ್ಷ ಉಂಟು ಮಾಡಿ ಅಶಾಂತಿಗೆ ಕಾರಣವಾಗುವಂತಹ ಹೇಳಿಕೆ ನೀಡಿದ್ದಾರೆ. ಮೋದಿ ಅವರನ್ನು ಒದ್ದು ಓಡಿಸುವುದಲ್ಲ, ರಮೇಶ್ ಕುಮಾರ್ ಅವರ ವಿರುದ್ಧ ಪ್ರಕರಣ ದಾಖಲಿಸಿ ಜೈಲಿಗೆ ಹಾಕಬೇಕು ಎಂದು ಹೇಳಿದರು.

ಮುಸ್ಲಿಮರ ಬಗ್ಗೆ ಮಾತನಾಡುವ ರಮೇಶ್ ಕುಮಾರ್, ಸಿದ್ದರಾಮಯ್ಯ, ಕುಮಾರಸ್ವಾಮಿ ಮತ್ತು ದೇವೇಗೌಡ, ಮುಸ್ಲಿಮರನ್ನು ಏಕೆ ಸಮ್ಮಿಶ್ರ ಸರ್ಕಾರದಲ್ಲಿ ಮಂತ್ರಿ ಮಾಡಲಿಲ್ಲ ಎಂದು ಪ್ರಶ್ನಿಸಿದರು.

ಸಿಎಎ ಸಂವಿಧಾನ ವಿರೋಧಿಯಾದರೆ ಹಿಂದೂಗಳ ಕೇರಿಗೆ ಹೋಗಿ ಮಾತನಾಡುವ ಬದಲು ಮುಸ್ಲಿಮರ ಕೇರಿಗೆ ಏಕೆ ಹೋಗಿ ಮಾತನಾಡುತ್ತೀರಿ. ಮುಸ್ಲಿಮರು ಅಮಾಯಕರು, ಅವರನ್ನು ತಬ್ಬಲಿಗಳನ್ನಾಗಿ ಮಾಡುವ ಪ್ರಯತ್ನ ಮಾಡುತ್ತಿದ್ದೀರಿ. ಮುಸ್ಲಿಮರು ದಯವಿಟ್ಟು ಇವರ ನಾಟಕವನ್ನು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.

ಶಾದಿಭಾಗ್ಯದ ಬಗ್ಗೆ ಮಾತನಾಡುವ ಸಿದ್ದರಾಮಯ್ಯ, ಅಕ್ಷರ ಭಾಗ್ಯ, ಆರೋಗ್ಯ ಭಾಗ್ಯ, ರಾಜಕೀಯ ಭಾಗ್ಯದ ಬಗ್ಗೆ ಏಕೆ ಮಾತನಾಡುತ್ತಿಲ್ಲ. ಇದು ಬರೀ ಬೂಟಾಟಿಕೆ. ಇವರಿಗೆ ನಿಜವಾದ ಕಾಳಜಿ ಇದ್ದರೆ ಮುಸ್ಲಿಮರಿಗೆ ಸಿಎಲ್‍ಪಿ ನಾಯಕ ಸ್ಥಾನ, ಕೆಪಿಸಿಸಿ ಅಧ್ಯಕ್ಷ ಸ್ಥಾನ ಅಥವಾ ವಿರೋಧ ಪಕ್ಷದ ಸ್ಥಾನವನ್ನು ನೀಡಲಿ ಎಂದು  ಸವಾಲು ಹಾಕಿದರು.

ಮುಸ್ಲಿಮರ ಓಲೈಕೆ ರಾಜಕಾರಣವನ್ನು ಕುಮಾರಸ್ವಾಮಿ ಮತ್ತು ದೇವೇಗೌಡ ಮಾಡುತ್ತಿದ್ದಾರೆ. ಕುಮಾರಸ್ವಾಮಿ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಎರಡು ಸಚಿವ ಸ್ಥಾನ ಖಾಲಿ ಇತ್ತು. ಆ ವೇಳೆ ಮುಸ್ಲಿಮರು ಮತ್ತು ದಲಿತರನ್ನು ಸಚಿವರನ್ನಾಗಿ ಮಾಡಿ ಎಂದು ನಾನು ಪರಿ ಪರಿಯಾಗಿ ಬೇಡಿಕೊಂಡರೂ ಮಾಡಲಿಲ್ಲ. ಜೆಡಿಎಸ್‍ನ ವಿಧಾನಪರಿಷತ್ ಸದಸ್ಯ ಫಾರೂಖ್ ಕೋಟ್ಯಂತರ ರೂ. ಪಕ್ಷಕ್ಕಾಗಿ ಖರ್ಚು ಮಾಡಿದ್ದರು. ಅವರಿಗಾದರೂ ಸಚಿವ ಸ್ಥಾನ ನೀಡಬಹುದಿತ್ತು. ಆದರೂ ನೀಡಲಿಲ್ಲ, ಬರೀ ಮುಸ್ಲಿಮರ ಬಗ್ಗೆ ಮಾತನಾಡುತ್ತಾರೆ ಎಂದು ಹರಿಹಾಯ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News