ಬಿಜೆಪಿ ಸರ್ಕಾರ ಶಾದಿಭಾಗ್ಯ, ಟಿಪ್ಪು ಜಯಂತಿ ರದ್ದು ಮಾಡಿದ್ದು ಸರಿಯಲ್ಲ: ಎಚ್.ವಿಶ್ವನಾಥ್

Update: 2020-03-10 16:10 GMT

ಮೈಸೂರು, ಮಾ.10: ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಶಾದಿಭಾಗ್ಯ ಮತ್ತು ಟಿಪ್ಪು ಜಯಂತಿ ಆಚರಣೆಯನ್ನು ರದ್ದು ಮಾಡಿರುವುದು ಸರಿಯಲ್ಲ, ಅದನ್ನು ಮುಂದುವರೆಸಿಕೊಂಡು ಹೋಗಬೇಕು ಎಂದು ಮಾಜಿ ಸಚಿವ ಅಡಗೂರು ಎಚ್.ವಿಶ್ವನಾಥ್ ಹೇಳಿದರು.

ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಶಾದಿಭಾಗ್ಯದ ವಿರೋಧಿಯಲ್ಲ, ಶಾದಿಭಾಗ್ಯ ಮುಂದುವರೆಸಬೇಕು ಎಂದು ನಾನು ಒತ್ತಾಯ ಮಾಡುತ್ತೇನೆ. ಆದರೆ ಸಿದ್ದರಾಮಯ್ಯ, ಕುಮಾರಸ್ವಾಮಿ ಮತ್ತು ದೇವೇಗೌಡ ಮುಸ್ಲಿಮರನ್ನು ಓಲೈಸಿಕೊಳ್ಳಲು ಬೂಟಾಟಿಕೆಯ ಮಾತುಗಳನ್ನಾಡುತಿದ್ದಾರೆ ಎಂದು ದೂರಿದರು.

ಟಿಪ್ಪು ಜಯಂತಿ ಆಚರಣೆ ನಿಲ್ಲಿಸಿದ್ದು ಸರಿಯಲ್ಲ, ಅದನ್ನು ನಾನು ಒಪ್ಪುವುದೂ ಇಲ್ಲ. ಆದರೆ ಮುಸ್ಲಿಮರಿಗೆ ಆರೋಗ್ಯ ಭಾಗ್ಯ, ಅಕ್ಷರ ಭಾಗ್ಯ, ಮತ್ತು ರಾಜಕೀಯ ಭಾಗ್ಯ ಮುಖ್ಯ. ಆ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು ಮುಂದಾಗಬೇಕು. ಬರೀ ಸಿಎಎ ವಿಚಾರವನ್ನೇ ಮುಂದಿಟ್ಟುಕೊಂಡು ಅವರನ್ನು ದಾರಿ ತಪ್ಪಿಸಬಾರದು ಎಂದ ಅವರು, ನೀವು ಸಿಎಎ ಪರವೋ ಅಥವಾ ವಿರೋಧನಾ ಎಂಬ ಪ್ರಶ್ನೆಗೆ 'ನಾನು ಭಾರತದ ಪರ. ಸಂವಿಧಾನದ ಅಡಿಯಲ್ಲಿ ಜಾರಿಯಾಗುವ ಕಾನೂನುಗಳ ಪರ ಎಂದು ಹೇಳಿದರು.

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅವರ ಬಗ್ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೀಡಿರುವ ಹೇಳಿಕೆ ಸರಿಯಲ್ಲ. ಓರ್ವ ಹಿರಿಯ ಮುತ್ಸದ್ದಿ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಮಾತನಾಡುವಾಗ ಬಹಳ ಎಚ್ಚರಿಕೆಯಿಂದ ಮಾತನಾಡಬೇಕು, ಜೊತೆಗೆ ದೊರೆಸ್ವಾಮಿ ಅವರ ಬಗ್ಗೆ ನಮಗೆ ಅಪಾರ ಗೌರವವಿದೆ. ಅವರು ಒಂದು ಪಕ್ಷದ ಪರವಾಗಿ ಮಾತನಾಡುವುದೂ ಸರಿಯಲ್ಲ ಎಂದು ಹೇಳಿದರು.

ನಾಡಿನ ಒಬ್ಬ ಹಿರಿಯ ವ್ಯಕ್ತಿಗೆ ರಾಜಕಾರಣ ಬೇಕಿಲ್ಲ, ಅವರ ಬಗ್ಗೆ ನಮಗೆ ಗೌರವವಿದೆ. ಅವರು ಒಂದು ಪಕ್ಷದ ಪರವಾಗಿ ಮಾತನಾಡುವುದನ್ನು ನಿಲ್ಲಿಸಬೇಕು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News