ಮೈಸೂರಿನಲ್ಲಿ ನಿಲ್ಲದ ಕೊಕ್ಕರೆ, ಕೋಳಿಗಳ ಸಾವು: ಹಕ್ಕಿ ಜ್ವರದ ಭೀತಿ
ಮೈಸೂರ,ಮಾ.10: ಕಳೆದ ಎರಡು ದಿನಗಳ ಹಿಂದಷ್ಟೇ 12 ಪಕ್ಷಿಗಳು ಸಾವನ್ನಪ್ಪಿದ್ದು, ಹಕ್ಕಿಜ್ವರದ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿತ್ತು. ಆದರೆ ಪಶುವೈದ್ಯಾಧಿಕಾರಿಗಳು ಹಕ್ಕಿ ಜ್ವರವಲ್ಲವೆಂದು ಸ್ಪಷ್ಟಪಡಿಸಿದ್ದರು. ಆದರೆ ಮುಂದುವರಿದ ಪಕ್ಷಿಗಳ ಸಾವು ಜನರಲ್ಲಿ ಹಕ್ಕಿಜ್ವರದ ಭೀತಿಯನ್ನು ಮತ್ತೆ ಉಂಟುಮಾಡಿದೆ.
ಮೈಸೂರಿನ ವಾರ್ಡ್ ನಂ.1ರ ವ್ಯಾಪ್ತಿಯ ಹೆಬ್ಬಾಳ ಕೆರೆ ಸುತ್ತಮುತ್ತ ಪ್ರತೀ ದಿನ ಕೊಕ್ಕರೆಗಳು ಸಾವನ್ನಪ್ಪುತ್ತಿವೆ. ಕಳೆದ 20 ದಿನಗಳಲ್ಲಿ ಸುಮಾರು 50ಕ್ಕೂ ಹೆಚ್ಚು ಕೊಕ್ಕರೆಗಳು ಮೃತಪಟ್ಟಿವೆ. ಮರಗಳ ಮೇಲೆಯೇ ಕೊಕ್ಕರೆಗಳು ಸತ್ತು ಬೀಳುತ್ತಿದ್ದು, ಇದರಿಂದಾಗಿ ಹಕ್ಕಿಜ್ವರದ ಆತಂಕ ಮತ್ತಷ್ಟು ಹೆಚ್ಚಾಗಿದೆ. ಪಾಲಿಕೆ ಆರೋಗ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮೃತ ಕೊಕ್ಕರೆಗಳನ್ನು ಪ್ರಯೋಗಾಲಯಕ್ಕೆ ತೆಗೆದುಕೊಂಡು ಹೋಗಿದ್ದಾರೆ.
ವಾರ್ಡ್ ವ್ಯಾಪ್ತಿಯಲ್ಲಿ ಪ್ರತಿದಿನ ಪಕ್ಷಿಗಳ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕ್ರಮವಹಿಸುವಂತೆ ಪಾಲಿಕೆ ಸದಸ್ಯರು ಹಾಗೂ ಸ್ಥಳೀಯರು ಆಗ್ರಹಿಸಿದ್ದಾರೆ.
ಇನ್ನೊಂದೆಡೆ ಕೋಳಿಗಳಿಗೂ ಹಕ್ಕಿಜ್ವರದ ಭೀತಿ ಎದುರಾಗಿದ್ದು, ಮೈಸೂರಿನ ಮೇಟಗಳ್ಳಿಯ ಮಂಚಮ್ಮ ದೇಗುಲದ ಬಳಿಯ ನಿವಾಸಿ ರಾಮಣ್ಣ ಎಂಬವರಿಗೆ ಸೇರಿದ 12 ಕೋಳಿಗಳು ಸಾವನ್ನಪ್ಪಿವೆ. ಕಳೆದ ಸಂಜೆ ಎಲ್ಲಾ ಕೋಳಿಗಳನ್ನು ಗೂಡಿನಲ್ಲಿ ಕೂಡಿ ಹಾಕಲಾಗಿತ್ತು. ಆದರೆ ಇಂದು ಬೆಳಗಿನ ಜಾವ ಕೋಳಿಗಳು ಸಾವನ್ನಪ್ಪಿರುವ ಸಂಗತಿ ಬೆಳಕಿಗೆ ಬಂದಿದೆ.
ಮುಂದಿನ ವಾರ ನಡೆಯುವ ಗ್ರಾಮ ದೇವತೆಯ ಹಬ್ಬಕ್ಕೆಂದು ರಾಮಣ್ಣ ಕುಟುಂಬ ಸದಸ್ಯರು ಕೋಳಿಗಳನ್ನು ಸಾಕಿದ್ದರು. ಕಳೆದ ಹಲವಾರು ವರ್ಷಗಳಿಂದ ಕೋಳಿಗಳನ್ನು ಸಾಕುತ್ತಾ ಬಂದಿದ್ದು, ಇದೇ ಮೊದಲ ಬಾರಿ ಏಕಾಏಕಿ ಕೋಳಿಗಳು ಸಾವನ್ನಪ್ಪಿರುವುದು ಆತಂಕ ಸೃಷ್ಟಿಸಿದೆ.
ಕೋಳಿಗಳು ಹಕ್ಕಿಜ್ವರದಿಂದ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದ್ದು, ಕೋಳಿಗಳ ಹಠಾತ್ ಸಾವಿನಿಂದ ರಾಮಣ್ಣ ಕುಟುಂಬ ಸದಸ್ಯರು ಆತಂಕಗೊಂಡಿದ್ದಾರೆ. ಇದೀಗ ಕೊಕ್ಕರೆ ಮತ್ತು ಕೋಳಿಗಳ ಸಾವಿನಿಂದ ನಗರದೆಲ್ಲೆಡೆ ಹಕ್ಕಿಜ್ವರದ ಆತಂಕ ಹೆಚ್ಚಾಗಿದೆ.