'ಆಯುರ್ವೇದ, ಈರುಳ್ಳಿ, ಉಪ್ಪು...': ಕೊರೋನ ವೈರಸ್‌ ಗೆ 'ಔಷಧ' ಸೂಚಿಸಿದ ಸಿ.ಎಂ.ಇಬ್ರಾಹಿಂ

Update: 2020-03-10 17:35 GMT

ಬೆಂಗಳೂರು, ಮಾ.10: ಬಿಜೆಪಿಯವರು ಮಧ್ಯಪ್ರದೇಶದಿಂದ 12 ಜನ ಮುತ್ತೈದೆಯರನ್ನು ಕಿಡ್ನಾಪ್ ಮಾಡಿ, ಬೆಂಗಳೂರಿಗೆ ಕರೆತಂದಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ವ್ಯಂಗ್ಯವಾಡಿದರು.

ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಧ್ಯಪ್ರದೇಶದಿಂದ 12 ಜನ ಮುತ್ತೈದೆಯರನ್ನು ಬೆಂಗಳೂರಿಗೆ ಕರೆತಂದಿದ್ದಾರೆ. ಅವರಿಗೆ ಹೇಗೆ ಸೀರೆ ಉಡಿಸಬೇಕೆಂದು ನೋಡುತ್ತಿದ್ದಾರೆ. ಇವರೆಲ್ಲಾ ಸೇರಿ ಮದುವೆ ಆದವರನ್ನೇ ಕರೆದುಕೊಂಡು ಬಂದಿದ್ದಾರೆ. ಈ ಬಿಜೆಪಿ ಕಿಡ್ನಾಪರ್ಸ್ ಪಾರ್ಟಿ ಎಂದು ಟೀಕಿಸಿದರು.

ಕರ್ನಾಟಕದಲ್ಲೂ ಇದೇ ರೀತಿ ಆಗಿತ್ತು. ಇವರಿಗೆಲ್ಲ ಗೊತ್ತು. ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ ಎನ್ನುವಂತೆ ಕರ್ನಾಟಕದಲ್ಲಿ ಆದಂತೆ ಮಧ್ಯಪ್ರದೇಶದಿಂದ ಶಾಸಕರನ್ನು ಕರೆದುಕೊಂಡು ಬಂದು ಪುನರ್ ವಿವಾಹದ ಬಗ್ಗೆ ತರಬೇತಿ ಕೊಡುತ್ತಿದ್ದಾರೆ ಎಂದ ಅವರು, ಮಾಜಿ ಪ್ರಧಾನಿ ವಾಜಪೇಯಿ ಕಾಲದ ಬಿಜೆಪಿ ಈಗ ಉಳಿದುಕೊಂಡಿಲ್ಲ ಎಂದರು.

ಕೊರೋನ ವೈರಸ್‌ಗೆ ಇದುವರೆಗೂ ಔಷಧ ಕಂಡು ಹಿಡಿದಿಲ್ಲ. ಆದರೆ, ಆಯುರ್ವೇದದಲ್ಲಿ ಔಷಧ ಇದ್ದು, ಈರುಳ್ಳಿಗೆ ಉಪ್ಪು ಹಾಕಿಕೊಂಡು ದಿನಕ್ಕೆ ಮೂರು ಬಾರಿ ಸೇವನೆ ಮಾಡಬೇಕು. ಅಲ್ಲದೆ, ರಾಜ್ಯದಲ್ಲಿ ತಪಾಸಣಾ ಕೇಂದ್ರಗಳಿಲ್ಲ. ಚೀನಾ ಸೇರಿದಂತೆ ಹೊರ ರಾಷ್ಟ್ರಗಳಲ್ಲಿ ಕೊರೋನ ವೈರಸ್ ಪತ್ತೆ ಹಚ್ಚಲು ಅತ್ಯಾಧುನಿಕ ಸಾಧನಗಳಿವೆ. ಆದರೆ, ಭಾರತದಲ್ಲಿ ರಕ್ತಪರೀಕ್ಷೆ ನಡೆಸಿ ಕೊರೋನ ಪತ್ತೆ ಹಚ್ಚುವುದರೊಳಗೆ ರೋಗಿ ಸಾವನ್ನಪ್ಪಿರುತ್ತಾನೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News