ಕಲಬುರಗಿಯ ಮೃತ ವ್ಯಕ್ತಿಯಲ್ಲಿ ಕೊರೋನ ವೈರಸ್ ದೃಢಪಟ್ಟಿಲ್ಲ: ಸಚಿವ ಶ್ರೀರಾಮುಲು
ಬೆಂಗಳೂರು, ಮಾ.11: ಸೌದಿ ಅರೇಬಿಯಾದಿಂದ ಹಿಂದಿರುಗಿದ್ದ ಕಲಬುರಗಿಯ 76 ವರ್ಷದ ವೃದ್ಧ ಕೊರೋನ ವೈರಸ್‌ನಿಂದ ಮೃತಪಟ್ಟಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಸ್ಪಷ್ಟಪಡಿಸಿದರು.
ಬುಧವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮೃತ ವ್ಯಕ್ತಿಯಲ್ಲಿ ಕೊರೋನ ಸೋಂಕಿಗೆ ಸಂಬಂಧಿಸಿದ ಯಾವ ಲಕ್ಷಣಗಳು ಇರಲಿಲ್ಲ. ಅವರ ಗಂಟಲು ದ್ರಾವಣ ಪರೀಕ್ಷೆ ಮಾಡಲಾಗಿದ್ದು, ನೆಗೆಟಿವ್ ವರದಿ ಬಂದಿದೆ ಎಂದರು.
ಮೃತರು ಫೆ.29ರಂದು ಸೌದಿಯಿಂದ ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಮಾ.5ರಂದು ಅವರ ಪರೀಕ್ಷೆ ನಡೆಸಿ, ಮಾ.6ರಂದು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಮಾ.9ರಂದು ಅವರು ಸ್ವ ಇಚ್ಛೆಯಿಂದ ಹೈದರಾಬಾದ್‌ಗೆ ಹೋಗಿದ್ದರು ಎಂದು ಶ್ರೀರಾಮುಲು ಮಾಹಿತಿ ನೀಡಿದರು.
ಅಸ್ತಮಾ, ರಕ್ತದೊತ್ತಡ, ಹೈಪರ್ ಟೆನ್ಷನ್‌ಯಿಂದ ಬಳಲುತ್ತಿದ್ದ ಅವರಲ್ಲಿ, ಕೊರೋನ ಸೋಂಕಿನ ಯಾವ ಲಕ್ಷಣಗಳು ದೃಢಪಟ್ಟಿಲ್ಲ ಎಂಬುದು ವೈದ್ಯಕೀಯ ಪರೀಕ್ಷೆಯಲ್ಲಿ ತಿಳಿಸಲಾಗಿದೆ. ಈಗಾಗಲೆ ರಾಜ್ಯದಲ್ಲಿ ಈ ಸಂಬಂಧ ಸುಮಾರು ಒಂದು ಲಕ್ಷ ಜನರನ್ನು ತಪಾಣೆಗೆ ಒಳಪಡಿಸಲಾಗಿದ್ದು, ಏಳು ಮಂದಿಯನ್ನು ಶಂಕಿತರೆಂದು ಗುರುತಿಸಲಾಗಿದೆ ಎಂದು ಅವರು ಹೇಳಿದರು.
ಈ ಏಳು ಮಂದಿಯ ಪೈಕಿ ಐವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಸುಮಾರು 1142 ಮಂದಿ ಭಯಭೀತರಾಗಿ ಸ್ವಯಂಪ್ರೇರಿತವಾಗಿ ಆಸ್ಪತ್ರೆಗಳಿಗೆ ತಪಾಸಣೆಗೆ ಬಂದಿದ್ದಾರೆ. ರಾಜ್ಯದ ಜನತೆ ಈ ಬಗ್ಗೆ ಯಾವುದೆ ಆತಂಕಕ್ಕೆ ಒಳಗಾಗುವುದು ಬೇಡ. ರಾಜ್ಯ ಸರಕಾರವು ಕೊರೋನ ವೈರಸ್ ಹರಡದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಶ್ರೀರಾಮುಲು ತಿಳಿಸಿದರು.
ಕಲಬುರ್ಗಿಯಲ್ಲಿ ನಿಧನರಾದ ಶ್ರೀ ಮಹಮದ್ ಹುಸೇನ್ ಸಿದ್ದಿಕಿ, #COVID19 ಶಂಕಿತರೇ ಹೊರತು ದೃಡಪಟ್ಟಿಲ್ಲ. ನಾಗರಿಕರ ಹಿತದೃಷ್ಟಿಯಿಂದ, ಮೃತರ ಅಂತ್ಯಸಂಸ್ಕಾರಕ್ಕಾಗಿ ಕೆಲವೊಂದು ಮುಂಜಾಗ್ರತಾ ಕ್ರಮಗಳನ್ನು ಜಿಲ್ಲಾ ಆರೋಗ್ಯ ಇಲಾಖೆಯು ಕೈಗೊಂಡಿದೆ. ಇದರಲ್ಲಿ ಯಾವುದೇ ಅನಗತ್ಯ ಗೊಂದಲ, ಭಯ ಸೃಷ್ಟಿಸುವುದು ಬೇಡ #CovidUpdate
— B Sriramulu (@sriramulubjp) March 11, 2020