ರಾಜ್ಯದಲ್ಲಿ ಥಿಯೇಟರ್ ಗಳು ಬಂದ್ ಆಗಲಿವೆಯೇ ?: ಚಲನಚಿತ್ರ ವಾಣಿಜ್ಯ ಮಂಡಳಿ ಹೇಳಿದ್ದು ಹೀಗೆ...
ಬೆಂಗಳೂರು, ಮಾ. 11: ಕೊರೋನ ಭೀತಿಯ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಚಿತ್ರಮಂದಿರಗಳನ್ನು ಸ್ಥಗಿತಗೊಳಿಸಿದರೆ ಕೋಟ್ಯಂತರ ರೂಪಾಯಿ ನಷ್ಟವಾಗುತ್ತದೆ. ಹಾಗಾಗಿ, ಚಿತ್ರಮಂದಿರಗಳನ್ನು ಬಂದ್ ಮಾಡುವುದಿಲ್ಲ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಡಿ.ಆರ್.ಜೈರಾಜ್ ತಿಳಿಸಿದರು.
ಕೊರೋನ ಭೀತಿಯ ಹಿನ್ನೆಲೆಯಲ್ಲಿ ಕೇರಳದಲ್ಲಿ ಚಿತ್ರಮಂದಿರಗಳನ್ನು ಬಂದ್ ಮಾಡಲಾಗಿದ್ದು, ಕರ್ನಾಟಕದಲ್ಲಿಯೂ ಈ ಸೋಂಕು ಕಾಣಿಸಿಕೊಂಡಿರುವುದರಿಂದ ಚಿತ್ರಮಂದಿರಗಳನ್ನು ಬಂದ್ ಮಾಡಲಾಗುತ್ತದೆಯೇ ಎಂಬ ಪ್ರಶ್ನೆ ಎದುರಾಗಿತ್ತು.
ಈ ಸಂಬಂಧ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಕಚೇರಿಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಮಾತನಾಡಿದ ಜೈರಾಜ್, ಕೇರಳಕ್ಕೆ ಹೋಲಿಸಿದರೆ ಕರ್ನಾಟಕದ ಸ್ಥಿತಿ ಭಿನ್ನವಾಗಿದೆ. ಚಿತ್ರಮಂದಿರಗಳನ್ನು ಸ್ಥಗಿತಗೊಳಿಸುವಂತೆ ರಾಜ್ಯ ಸರಕಾರದಿಂದ ನಮಗೆ ಸೂಚನೆ ಬಂದಿಲ್ಲ. ಅಧಿಕೃತವಾಗಿ ಸೂಚನೆ ಬರುವವರೆಗೂ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಒಂದು ವೇಳೆ ಚಿತ್ರಮಂದಿರಗಳನ್ನು ಸ್ಥಗಿತಗೊಳಿಸುವ ಸನ್ನಿವೇಶ ಎದುರಾದರೆ ನಿರ್ಮಾಪಕರು, ಪ್ರದರ್ಶಕರು ಮತ್ತು ನಿರ್ದೇಶಕರೊಟ್ಟಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದರು. ಮಾ.12ರಂದು ಶಿವಾರ್ಜುನ ಮತ್ತು ನರಗುಂದ ಬಂಡಾಯ ಸಿನಿಮಾಗಳು ತೆರೆ ಕಾಣುತ್ತಿವೆ. ಬಂದ್ ಮಾಡುವ ನಿರ್ಧಾರ ಕೈಗೊಂಡರೆ ನಿರ್ಮಾಪಕರಿಗೆ ಭಾರೀ ನಷ್ಟವಾಗಲಿದೆ. ಒಂದು ತಿಂಗಳ ಕಾಲ ಸ್ಥಗಿತಗೊಳಿಸಿದರೆ ಚಿತ್ರರಂಗ ಚೇತರಿಸಿಕೊಳ್ಳಲು ಆರು ತಿಂಗಳು ಬೇಕಾಗುತ್ತದೆ. ಹಾಗಾಗಿ ರಾಜ್ಯದಲ್ಲಿ ಎಲ್ಲಿಯೂ ಚಿತ್ರಮಂದಿರಗಳನ್ನು ಬಂದ್ ಮಾಡುವುದಿಲ್ಲ ಎಂದು ಹೇಳಿದರು.
ನಿರ್ಮಾಪಕ ಶಿವಾರ್ಜುನ್ ಮಾತನಾಡಿ, ಶಿವಾರ್ಜುನ ಚಿತ್ರದ ಬಗ್ಗೆ ದೊಡ್ಡಮಟ್ಟದಲ್ಲಿ ಪ್ರಚಾರ ನಡೆಸಿದ್ದೇವೆ. ಕಷ್ಟಪಟ್ಟು ಸಿನಿಮಾ ಮಾಡಿದ್ದೇನೆ. ಚಿತ್ರಮಂದಿರಗಳನ್ನು ಸ್ಥಗಿತಗೊಳಿಸಿದರೆ ನಷ್ಟವಾಗಲಿದೆ. ಪ್ರೇಕ್ಷಕರು ಕೊರೋನ ಭೀತಿಗೆ ಕಿವಿಗೊಡಬಾರದು ಎಂದು ಮನವಿ ಮಾಡಿದರು.