×
Ad

ಚಿಕ್ಕಮಗಳೂರು ಜಿ.ಪಂ. ಸಭೆಯಲ್ಲಿ ಪ್ರತಿಧ್ವನಿಸಿದ ಕೊರೋನ: ಹೊರ ರಾಜ್ಯಗಳ ಪ್ರವಾಸಿಗರ ನಿರ್ಬಂಧಕ್ಕೆ ಆಗ್ರಹ

Update: 2020-03-11 18:48 IST

ಚಿಕ್ಕಮಗಳೂರು, ಮಾ.11: ವಿಶ್ವದಾದ್ಯಂತ ಜನರ ನಿದ್ದೆಗೆಡಿಸಿರುವ ಕೊರೋನ ವೈರಸ್ ಗುರವಾರ ಇಲ್ಲಿನ ಜಿಲ್ಲಾ ಪಂಚಾಯತ್ ಸಭೆಯಲ್ಲೂ ಪ್ರತಿಧ್ವನಿಸಿತು. ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ರಾಜ್ಯದ ಕೆಲವೆಡೆ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿರುವ ಕೊರೋನ ವೈರಸ್ ಜಿಲ್ಲೆಗೂ ವ್ಯಾಪಿಸುವುದನ್ನು ನಿಯಂತ್ರಿಸುವ ಸಲುವಾಗಿ ಬೇರೆ ರಾಜ್ಯಗಳ ಪ್ರವಾಸಿಗರು ಜಿಲ್ಲೆಗೆ ಬರುವುದನ್ನು ನಿರ್ಬಂಧಿಸಬೇಕೆಂದು ಜಿ.ಪಂ. ಸದಸ್ಯರು ಒಕ್ಕೊರಲಿನಿಂದ ಆಗ್ರಹಿಸಿದರು.

ಸಭೆಯ ಆರಂಭದಲ್ಲಿ ಜಿ.ಪಂ. ಸದಸ್ಯರು ಕೊರೋನ ವೈರಸ್ ವಿಚಾರವಾಗಿ ಸಭೆಯಲ್ಲಿ ಗಂಬೀರವಾಗಿ ಧ್ವನಿ ಎತ್ತಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪೂವಿತಾ, ಈ ವಿಚಾರ ಸಂಬಂಧ ಸರಲಾರಕ್ಕೆ ವರದಿ ಸಲ್ಲಿಸಲಾಗುವುದು. ಸರಕಾರ ಅನುಮತಿ ನೀಡಿದರೆ ಹೊರ ರಾಜ್ಯಗಳ ಪ್ರವಾಸಿಗರಿಗೆ ನಿರ್ಬಂಧ ಹೇರುವ ನಿಟ್ಟಿನಲಿ ಕ್ರಮಕೈಗೊಳ್ಳುವುದಾಗಿ ತಿಳಿಸಿದರು. 

ರಾಜ್ಯ ಸರಕಾರ ಬಜೆಟ್‍ನಲ್ಲಿ ಜಿಲ್ಲೆಗೆ ಶೂನ್ಯ ಕೊಡುಗೆ ನೀಡಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಮಂಡಿಸಿದ ಬಜೆಟ್ ಜಿಲ್ಲೆಯ ಜನರಲ್ಲಿ ನಿರಾಸೆ ಮೂಡಿಸಿದೆ ಎಂದು ಕಡೂರಿನ ಜಿ.ಪಂ. ಸದಸ್ಯ ಶರತ್ ಪ್ರಸ್ತಾಪಿಸುತ್ತಿದ್ದಂತೆ ಆಡಳಿತ ಪಕ್ಷದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ ಒಗ್ಗಟ್ಟಾಗಿ ಶರತ್‍ ಮಾತನ್ನು ವಿರೋಧಿಸಿದರಾದರೂ ಶರತ್ ಅವರ ಪ್ರಶ್ನೆಗೆ ಪೂರಕವಾಗಿ ರಾಜ್ಯ ಸರಕಾರ ಬಜೆಟ್‍ನಲ್ಲಿ ಜಿಲ್ಲೆಗೆ ನೀಡಿದ ಕೊಡುಗೆಗಳೇನು ಎಂಬ ಬಗ್ಗೆ ಆಡಳಿತ ಪಕ್ಷದ ಸದಸ್ಯರು ಸಮಂಜಸವಾದ ಉತ್ತರ ನೀಡಲಿಲ್ಲ.

ಜಿಲ್ಲೆಯ 41 ಶುದ್ಧಗಂಗಾ ಘಟಕಗಳು ಕೆಟ್ಟು ನಿಂತು ಹಲವು ತಿಂಗಳುಗಳೇ ಕಳೆದಿದ್ದರೂ ಈವರೆಗೂ ದುರಸ್ತಿಯಾಗಿಲ್ಲ. ಬೇಸಿಗೆ ದಿನಗಳು ಆರಂಭವಾಗುತ್ತಿರುವುದರಿಂದ ಕುಡಿಯುವ ನೀರಿನ ಅಭಾವ ಹೆಚ್ಚಾಗಲಿದೆ. ಕೂಡಲೇ ದುರಸ್ತಿಪಡಿಸುವಂತೆ ಸಭೆಯಲ್ಲಿ ಜಿಪಂ ಸದಸ್ಯರು ಆಗ್ರಹಿಸುತ್ತಿದ್ದಂತೆ, ಉತ್ತರಿಸಿದ ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ, ಮುಂದಿನ ಒಂದು ವಾರದ ಗಡುವಿನೊಳಗೆ ಎಲ್ಲ ಶುದ್ದ ಗಂಗಾ ಘಟಕಗಳನ್ನು ದುರಸ್ತಿಪಡಿಸಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಜಿಲ್ಲೆಯ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿಲ್ಲ. ಆದರೆ ಅನುಪಾಲನಾ ವರದಿಯಲ್ಲಿ ಅನುಷ್ಠಾನಗೊಳಿಸಲಾಗಿದೆ ಎಂದು ಅಧಿಕಾರಿಗಳು ಹಿರಿಯ ಅಧಿಕಾರಿಗಳನ್ನು ದಾರಿತಪ್ಪಿಸುತ್ತಿದ್ದಾರೆ. ಅಂತಹ ಅಧಿಕಾರಿಗಳ ಬಗ್ಗೆ ಮಾಹಿತಿ ಪಡೆದು ಕಠಿಣ ಕ್ರಮ ಜರುಗಿಸುವಂತೆ ಕಡೂರಿನ ಜಿಪಂ ಸದಸ್ಯ ಮಹೇಶ್‍ ಒಡೆಯರ್ ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಪೂವಿತಾ, ಸ್ಪಷ್ಟವಾಗಿ ಕರ್ತವ್ಯ ಲೋಪವೆಸಗಿರುವ ಅಧಿಕಾರಿಯ ಮಾಹಿತಿ ನೀಡಿದರೆ ಅವರ ವಿರುದ್ದ ಕ್ರಮ ಜರಗಿಸುವುದಾಗಿ ಭರವಸೆ ನೀಡಿದರು.

ತರೀಕೆರೆ ಬಿ.ಇ.ಒ ಕರ್ತವ್ಯ ಲೋಪವೆಸಗಿದ್ದು, ಅವರ ವಿರುದ್ದ ಕ್ರಮಕೈಗೊಳ್ಳುವಂತೆ ಈ ಹಿಂದಿನ ಜಿ.ಪಂ. ಸರ್ವಸದಸ್ಯರ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದರೂ ಕ್ರಮಕೈಗೊಂಡಿಲ್ಲ ಎಂದು ತರೀಕೆರೆಯ ಮಹೇಂದ್ರ ಆರೋಪಿಸಿ, ಅಧಿಕಾರಿಗಳು ಬಂದಾಗ ಅಧಿಕಾರಿಗಳ ಪರವಾಗಿ ಜನಪ್ರತಿನಿಧಿಗಳ ಬಂದಾಗ ಅವರ ಪರವಾಗಿ ಜಿ.ಪಂ. ಅಧ್ಯಕ್ಷರು ಮಾತನಾಡಬಾರದು. ದ್ವಂದ್ವ ನಿಲುವನ್ನು ಕೈಬಿಟ್ಟು ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮಕೈಗೊಳ್ಳುವ ಕಟುನಿಲುವು ತಾಳಬೇಕೆಂದು ಹೇಳಿದರು. ಅದಕ್ಕೆ ಉತ್ತರಿಸಿದ ಜಿ.ಪಂ. ಅಧ್ಯಕ್ಷೆ ಸುಜಾತ ಕೃಷ್ಣಪ್ಪ ಅಂತಹ ಯಾವುದೇ ಧೋರಣೆ ತಳೆದಿಲ್ಲ ಈ ಬಗ್ಗೆ ಡಿಡಿಪಿಐಯವರು ಕ್ರಮ ಜರಗಿಸಲಿದ್ದಾರೆ ಎಂದರು.

ಈ ವಿಚಾರಕ್ಕೆ ಸಂಬಂಧಿಸಿದಂತೆ ಉತ್ತರಿಸಿದ ಡಿಡಿಪಿಐ ಸಿ.ನಂಜಯ್ಯ  ಬಿ.ಇ.ಒ ಅವರ ಕರ್ತವ್ಯ ಲೋಪದ ವರದಿ ನನ್ನ ಕೈಸೇರಿಲ್ಲ. ನನ್ನ ಬಳಿ ವರದಿ ಬಂದ ನಂತರ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳುವುದಾಗಿ ಹೇಳಿದರು.

ಜಿಲ್ಲೆಯ ರಾಜ್ಯ ಹೆದ್ದಾರಿ ಹಾದುಹೋಗುವ ವಿವಿಧ ತಾಲೂಕುಗಳ ಜಮೀನುಗಳನ್ನು ವಾಣಿಜ್ಯ ಉದ್ದೇಶಕ್ಕಾಗಿ ಭೂಪರಿವರ್ತನೆ ಹೆಚ್ಚಾಗಿ ನಡೆಯುತ್ತಿದ್ದು ಈ ಸಂದರ್ಭದಲ್ಲಿ ಅಲ್ಲಿನ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿದ್ದು ಅಂತಹ ಅಧಿಕಾರಿಗಳಿಗೆ ಕಡಿವಾಣ ಹಾಕಲು ಜಿಲ್ಲಾ ಮಟ್ಟದ ತನಿಖಾ ಸಮಿತಿ ರಚಿಸಿ ತಪ್ಪಿತಸ್ಥರಿಗೆ ಶಿಕ್ಷೆಗೊಳಪಡಿಸಬೇಕೆಂದು ಸದಸ್ಯ ಮಹೇಶ್‍ ಒಡೆಯರ್ ಸಭೆಯಲ್ಲಿ ಆಗ್ರಹಿಸಿದರು.

ಪರೀಕ್ಷೆಗಳು ನಡೆಯುತ್ತಿದ್ದರೂ ಬೇಗೂರಿನ ಕೆಬಿಎಸ್ ಶಾಲೆಯಲ್ಲಿ ಶಿಕ್ಷಕರ ಕೊರತೆಯಿದ್ದರೂ ನಿಯಮ ಉಲ್ಲಂಘಿಸಿ ಗಜೇಂದ್ರ ಎಂಬ ಶಿಕ್ಷಕರನ್ನು ಕೆದಿಗೆರೆ ಶಾಲೆಗೆ ನಿಯೋಜನೆಗೊಳಿಸಿದ್ದು, ಇದರಿಂದ ಅಲ್ಲಿನ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದು ಶಿಕ್ಷಣ ಸ್ಥಾಯಿ ಸಮಿತಿಯ ಜಸಿಂತಾ ಸಭೆಯ ಗಮನ ಸೆಳೆದು, ಶೈಕ್ಷಣಿಕ ವರ್ಷದ ಪರೀಕ್ಷೆಗಳು ಪೂರ್ಣಗೊಳ್ಳುವವರೆಗೂ ಶಿಕ್ಷಕರನ್ನು ಬೇರೆಡೆಗೆ ನಿಯೋಜನೆಗೊಳಿಸುವುದು ಅಥವಾ ವರ್ಗಾವಣೆ ಮಾಡದಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಕಳೆದ ಆಗಸ್ಟ್ ತಿಂಗಳಲ್ಲಿ ಸಂಭವಿಸಿದ ಅತಿವೃಷ್ಟಿಯಿಂದ ಜಿಲ್ಲೆಯ ಮಲೆನಾಡು ಭಾಗದ ಶಾಲಾ ಕೊಠಡಿಗಳು ಶಿಥಿಲವಾಗಿದ್ದು, ಅವುಗಳನ್ನು ದುರಸ್ತಿ ಮಾಡಿಸಲು ಕೇವಲ 2 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಈ ಅನುದಾನ ಸಾಲುತ್ತಿಲ್ಲ, ಹೆಚ್ಚುವರಿ ಹಣ ಬಿಡುಗಡೆ ಮಾಡುವಂತೆ ಪಟ್ಟಿ ತಯಾರಿಸಿ ಸರಕಾರಕ್ಕೆ ಕಳುಹಿಸುವಂತೆ ತರೀಕೆರೆ ಜಿಪಂ ಸದಸ್ಯ ಸದಾಶಿವರಾಘವನ್ ಅಧ್ಯಕ್ಷರಿಗೆ ಸೂಚಿಸಿದರು. ಇದಕ್ಕೆ ಉತ್ತರಿಸಿದ ಡಿಡಿಪಿಐ ಸಿ.ನಂಜಯ್ಯ ಜಿಲ್ಲೆಯ 128 ಸರ್ಕಾರಿ ಶಾಲೆಯ ಕೊಠಡಿಗಳಿಗೆ ಹಾನಿ ಸಂಭವಿಸಿದ್ದು, ಈ ಬಗ್ಗೆ ಸರಕಾರಕ್ಕೆ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಅಗತ್ಯವಿರುವ ಅನುದಾನಕ್ಕೆ ಮಂಜೂರಾತಿ ಆದೇಶ ದೊರೆತಿದೆ. ಶೀಘ್ರದಲ್ಲಿಯೇ ಹಣ ಕೈಸೇರುವ ನಿರೀಕ್ಷೆ ಇದೆ ಎಂದರು.

ಇತ್ತೀಚೆಗೆ ಗುಡ್ಡೆಮನೆ ಗ್ರಾಮದ ಒಂಟಿ ಮನೆಯಲ್ಲಿ ದರೋಡೆ ನಡೆದಿದ್ದು, ಸ್ಥಳೀಯರ ಭದ್ರತೆಗೆ ಅನುವಾಗುವಂತೆ ಬಂದೂಕುಗಳನ್ನು ಚುನಾವಣಾ ಸಂದರ್ಭಗಳಲ್ಲಿ ಠೇವಣಿ ಇಡುವುದರಿಂದ ಜನತೆ ಆತಂಕದಲ್ಲಿ ದಿನದೂಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಂದೂಕುಗಳನ್ನು ಠೇವಣಿ ಪಡೆಯದಂತೆ ಕ್ರಮಕೈಗೊಳ್ಳುವಂತೆ ಸಭೆಯಲ್ಲಿ ಕಳಸ ಜಿ.ಪಂ. ಸದಸ್ಯ ಪ್ರಭಾಕರ್ ಆಗ್ರಹಿಸಿದರು.

'ತರೀಕೆರೆಯ ಗ್ರಾ.ಪಂ.ಯ ಪಿಡಿಒ ಒಬ್ಬರು ವಿಕಲಚೇತನರ ಸುಮಾರು 45ಸಾವಿರ ರೂ. ಅನ್ನು ದುರುಪಯೋಗಪಡಿಸಿಕೊಂಡಿರುವ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾದರೂ ಜಿ.ಪಂ. ಹಿರಿಯ ಅಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಕೈಗೊಂಡಿಲ್ಲ. ಅವರ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸಲು ಇನ್ನೊಬ್ಬ ಭ್ರಷ್ಟ ಅಧಿಕಾರಿಯನ್ನು ನೇಮಿಸಲಾಗಿದೆ. ಇಂತಹ ಕಳ್ಳ ಅಧಿಕಾರಿಗಳನ್ನು ಇಟ್ಟುಕೊಂಡು ಯಾವ ಅಭಿವೃದ್ಧಿ ಮಾಡಲು ಸಾಧ್ಯ' ಎಂದು ತರೀಕೆರೆ ಜಿಪಂ ಸದಸ್ಯ ಸದಾಶಿವರಾಘವನ್ ಪ್ರಶ್ನಿಸಿದರು. ತನಿಖಾಧಿಕಾರಿಗಳು ಆರೋಪಿತ ಅಧಿಕಾರಿಯ ಬಗ್ಗೆ ನೀಡಿರುವ ವರದಿಯಲ್ಲಿ ನಿರ್ದೋಷಿ ಎಂದು ಮೇಲ್ನೊಟಕ್ಕೆ ಕಂಡುಬಂದಿದ್ದು, ಇನ್ನೊಮ್ಮೆ ಈ ಅಧಿಕಾರಿಯ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸುವಂತೆ ಅಧಿಕಾರಿಗಳನ್ನು ನೇಮಿಸಲಾಗುವುದು. ತನಿಖಾಧಿಕಾರಿಯು ಲೋಪವೆಸಗಿದ್ದರೆ ಅವರ ಮೇಲಿಯೂ ಕ್ರಮಕೈಗೊಳ್ಳಲಾಗುವುದು ಎಂದು ಮುಖ್ಯಕಾರ್ಯನಿರ್ವಾಹಣಾಧಿಕಾರಿ ಹೇಳಿದರು.

ಮುಂಬರುವ ಮಾ.22ರಿಂದ ಎಸೆಸೆಲ್ಸಿ ಪರೀಕ್ಷೆಗಳು ಆರಂಭವಾಗಲಿದ್ದು, ಅಗತ್ಯ ಪೂರ್ವಸಿದ್ದತಾ ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅನುಕೂಲವಾಗುವಂತೆ ಸಂಜೆ 6ರಿಂದ ಬೆಳಗಿನ 7ರವರೆಗೆ ವಿದ್ಯುತ್ ಕಡಿತಗೊಳಿಸದಂತೆ ಮೆಸ್ಕಾಂ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಅದರೊಂದಿಗೆ ಸರಕಾರಿ ಆದೇಶದಂತೆ ಗ್ರಾಮೀಣ ಪ್ರದೇಶಗಳಿಂದ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ಉಚಿತ ಬಸ್‍ಗಳನ್ನು ಬಿಡುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳಿಗೂ ಸಹ ಪತ್ರ ಬರೆದು ಮನವಿ ಕೊಳ್ಳಲಾಗಿದೆ.
- ಸಿ.ನಂಜಯ್ಯ, ಡಿಡಿಪಿಐ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News