ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ಬಗ್ಗೆ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ
ಬೆಂಗಳೂರು, ಮಾ.11: ಎಷ್ಟೆ ದೊಡ್ಡ ಹುದ್ದೆ ಪಡೆದರೂ ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಕಾರ್ಯಕರ್ತರ ದನಿಯಾಗಿ, ಎಲ್ಲ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯ ನಿರ್ವಹಿಸುತ್ತೇನೆ ಎಂದು ಕೆಪಿಸಿಸಿ ನೂತನ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಭರವಸೆ ನೀಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾನು ಈ ಹಿಂದೆ ಹೇಳಿದಂತೆ ವ್ಯಕ್ತಿ ಪೂಜೆಗಿಂತ ಪಕ್ಷ ಪೂಜೆಗೆ ಬದ್ಧ ಎಂದು ತಿಳಿಸಿದರು.
ನನ್ನ ಮೇಲೆ ದೊಡ್ಡ ನಂಬಿಕೆ ಇಟ್ಟು ಪಕ್ಷದ ಎಲ್ಲ ಕಾರ್ಯಕರ್ತರು, ಮುಖಂಡರು ಬಯಸಿ ನನಗೆ ಈ ಜವಾಬ್ದಾರಿಯನ್ನು ಸೋನಿಯಾ ಗಾಂಧಿ ಅವರ ಕೈಯಲ್ಲಿ ಕೊಡಿಸಿದ್ದಾರೆ. ದಿಲ್ಲಿ ನಾಯಕರು ನನ್ನ ಮೇಲೆ ಅಪಾರವಾದ ವಿಶ್ವಾಸವಿರಿಸಿದ್ದಾರೆ ಎಂದು ಶಿವಕುಮಾರ್ ಹೇಳಿದರು.
1975ರಲ್ಲಿ ನಾನು ವಿದ್ಯಾರ್ಥಿ ನಾಯಕನಾಗಿದ್ದಾಗ, ರಾಜೀವ್ ಗಾಂಧಿ ನನ್ನನ್ನು ಗುರುತಿಸಿ ವಿಧಾನಸೌಧದಲ್ಲಿ ನೀನು ಇರಬೇಕು ಅಂತಾ ಪಕ್ಷದ ಟಿಕೆಟ್ ಕೊಟ್ಟಿದ್ದರು. ಅಲ್ಲಿಂದ ಇಲ್ಲಿಯವರೆಗೂ ಪಕ್ಷದ ಕಾರ್ಯಕರ್ತನಾಗಿ ದುಡಿಯುತ್ತಾ ಬಂದಿದ್ದೇನೆ. ಅಲ್ಲಿಂದ ಇಲ್ಲಿಯವರೆಗೆ ಶಾಸಕನಾಗಿ, ಮಂತ್ರಿಯಾಗಿ, ಪಕ್ಷದ ಕಾರ್ಯಾಧ್ಯಕ್ಷನಾಗಿ, ಇವತ್ತು ಅಧ್ಯಕ್ಷನಾಗಿ ಘೋಷಣೆಯಾಗಿದ್ದರೂ ನಾನು ಪಕ್ಷದ ಕಾರ್ಯಕರ್ತನಾಗಿಯೇ ಇರುತ್ತೇನೆ ಎಂದು ಅವರು ತಿಳಿಸಿದರು.
ಇವತ್ತೂ ಕಾರ್ಯಕರ್ತನೆ, ನಾಳೆನೂ ಕಾರ್ಯಕರ್ತನೆ. ಕಾರ್ಯಕರ್ತರ ದನಿಯಾಗಿ ಈ ರಾಜ್ಯದ ಜನರ ಸೇವೆ ಮಾಡಬೇಕು ಎಂಬುದು ನನ್ನ ಆಸೆ. ಎಲ್ಲ ಮುಖಂಡರನ್ನು ಜತೆಯಲ್ಲಿ ತೆಗೆದುಕೊಂಡು ಹೋಗುತ್ತೇನೆ. ಈ ರಾಜ್ಯದ ಎಲ್ಲ ಹಿರಿಯ ಹಾಗೂ ಕಿರಿಯ ನಾಯಕರ ವಿಶ್ವಾಸವನ್ನು ತೆಗೆದುಕೊಂಡು ಕೆಲಸ ಮಾಡುತ್ತೇನೆ ಎಂದು ಶಿವಕುಮಾರ್ ಹೇಳಿದರು.
ಪಕ್ಷದಲ್ಲಿ ಪವರ್ ಸೆಂಟರ್ ಎಂಬುದೆಲ್ಲ ಇಲ್ಲ. ಇಲ್ಲಿ ವ್ಯಕ್ತಿ ಪೂಜೆ ಬಿಟ್ಟು ಪಕ್ಷ ಪೂಜೆ ಮಾಡಬೇಕು ಅಂತಾ ಈ ಹಿಂದೆ ಹೇಳಿದ್ದೆ. ಅದಕ್ಕೆ ನಾನು ಈಗಲೂ ಬದ್ಧನಾಗಿದ್ದೇನೆ ಎಂದು ಶಿವಕುಮಾರ್ ತಿಳಿಸಿದರು