ಚಿಕ್ಕಮಗಳೂರು: ಬಾಬಾಬುಡಾನ್‌ಗಿರಿ ಉರೂಸ್‌ಗೆ ಚಾಲನೆ

Update: 2020-03-11 16:53 GMT

ಚಿಕ್ಕಮಗಳೂರು, ಮಾ.11: ಬಾಬಾಬುಡಾನ್ ದರ್ಗಾದಲ್ಲಿ ಮೂರು ದಿನಗಳ ಕಾಲ ಮುಸ್ಲಿಮರು ಆಚರಿಸುವ ಸಂದಲ್ ಉರೂಸ್ ಕಾರ್ಯಕ್ರಮಕ್ಕೆ ಮಂಗಳವಾರ ಸಂಜೆ ಚಾಲನೆ ನೀಡಲಾಯಿತು.

ಅತ್ತಿಗುಂಡಿಯಲ್ಲಿ ನೆರದಿದ್ದ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಬಂದಿದ್ದ ಫಕೀರರು ಹಾಗೂ ಬಾಬಾಬುಡಾನ್ ದರ್ಗಾಗೆ ಬಂದವರು ಗಂಧವನ್ನು ಕಾಲ್ನಡಿಗೆಯಲ್ಲಿ ಕೊಂಡೊಯ್ದರು. ದರ್ಗಾದ ಶಾಖಾದ್ರಿಯಾಗಿರುವ ಗೌಸ್ ಮೊಹಿಯುದ್ದೀನ್ ಗಂಧವನ್ನು ಹೊತ್ತು ಗುಹೆ ಬಳಿಗೆ ಬಂದಾಗ ಅಲ್ಲಿ ಅಧಿಕಾರಿಗಳು ನೀವು ಒಳಗೆ ಪ್ರವೇಶಿಸಬಹುದೇ ಹೊರತು ಒಳಗಿರುವ ಗೋರಿಗಳಿಗೆ ಗಂಧ ಹಚ್ಚಿ ಗಿಲಾಫ್ ಹಾಕುವ ಹಾಗಿಲ್ಲ. ಅದನ್ನು ಮುಜಾವರ್ ಮಾಡುತ್ತಾರೆ ಎಂದು ಹೇಳಿದ್ದರಿಂದ ಅಸಮಾಧಾನಗೊಂಡ ಗೌಸ್ ಮೊಹಿಯುದ್ದೀನ್, ನಾನು ಶಾಖಾದ್ರಿ ಆಗಿರುವುದರಿಂದ ಗಂಧ ಹಚ್ಚುವುದು ತಮ್ಮ ಕರ್ತವ್ಯವೆಂದು ತಿಳಿಸಿದರು.

ಅಧಿಕಾರಿಗಳು ನ್ಯಾಯಾಲಯದ ಆದೇಶ ಮುಂದಿಟ್ಟು, ದರ್ಗಾದಲ್ಲಿ ಯಾವುದೇ ರೀತಿ ಹೊಸ ಆಚರಣೆಗೆ ಅವಕಾಶವಿಲ್ಲ ಎಂದು ಗಂಧ ಲೇಪನಕ್ಕೆ ಅವಕಾಶ ನೀಡಲಿಲ್ಲ. ಆಗ ಶಾಖಾದ್ರಿ ಹಾಗೂ ಫಕೀರರು ಸ್ವಲ್ಪ ಹೊತ್ತು ಜಿಲ್ಲಾಡಳಿತದ ವಿರುದ್ಧ ಘೋಷಣೆ ಕೂಗಿ ಗುಹೆಯ ಎದುರು ಪ್ರತಿಭಟನೆ ನಡೆಸಿದರು. ಬಳಿಕ ಶಾಖಾದ್ರಿ ಗುಹೆ ಒಳಗೆ ಪ್ರವೇಶಿಸದೆ ಹಿಂತಿರುಗಿದರು. ಆ ನಂತರ ಮುಜಾವರ್ ಗುಹೆಯೊಳಗೆ ಗೋರಿಗಳಿಗೆ ಗಂಧ ಲೇಪನದ ವಿಧಿಯನ್ನು ಪೂರೈಸಿದರು.

ಬುಧವಾರ ಬೆಳಗ್ಗೆಯಿಂದ ಸಂಜೆವರೆಗೂ ದರ್ಗಾದ ಆವರಣದಲ್ಲಿ ಜಿಲ್ಲಾಡಳಿತದ ನಿರ್ದೇಶನದಂತೆ ಉರೂಸ್ ನಡೆಯಿತು. ಉರೂಸ್ ಬಳಿಕ ಶಾಖಾದ್ರಿ ಹಾಗೂ ಫಕೀರರ ಸಮಾವೇಶ ಜರಗಿತು. ಗುರುವಾರ ಜನ್ನತ್ ನಗರದಲ್ಲಿ ಉರೂಸ್ ನಡೆಯಲಿದೆ.

ಜಿಲ್ಲಾಧಿಕಾರಿ ಡಾ.ಬಗಾದ್ ಗೌತಮ್, ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಹರೀಶ್‌ಪಾಂಡೆ, ತಹಶೀಲ್ದಾರ್ ನಂದಕುಮಾರ್ ಇದ್ದರು. ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮುಸ್ಲಿಮ್ ಮುಖಂಡರಾದ ಸಿ.ಎಸ್.ಖಲಂದರ್, ಮುನೀರ್ ಅಹ್ಮದ್, ಅಮ್ಜದ್, ನಝೀರ್ ಅಹ್ಮದ್, ಶಾಹಿದ್, ನಿಸಾರ್‌ ಅಹ್ಮದ್ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News