ರೌಡಿ ಶೀಟರ್ ಸೈನಾದಿ ಕಾಲಿಗೆ ಗುಂಡು

Update: 2020-03-11 16:56 GMT

ಶಿವಮೊಗ್ಗ, ಮಾ.11: ನಟೋರಿಯಸ್ ರೌಡಿ ಶೀಟರ್ ಸೈನಾದಿ ಲಕ್ಷಣ್‌ನ ನಗರದ ಹೊರವಲಯದಲ್ಲಿರುವ ಹರಿಗೆ ಬಳಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಇನ್‌ಸ್ಪೆಕ್ಟರ್ ಕೆ.ಟಿ.ಗುರುರಾಜ್ ಗುಂಡು ಹಾರಿಸಿದ್ದಾರೆಂದು ಎಸ್ಪಿ ಕೆ.ಎಂ.ಶಾಂತರಾಜು ಹೇಳಿದರು.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ರೌಡಿ ಶೀಟರ್ ಸೈನಾದಿ ಲಕ್ಷಣ್ ವಿರುದ್ಧ ಹಲವು ಪ್ರಕರಣಗಳಿದ್ದವು. ಈತ ಬೆಂಗಳೂರಿನಲ್ಲಿರುವ ಮಾಹಿತಿ ತಿಳಿಯುತ್ತಿದ್ದಂತೆ ರೌಡಿ ನಿಗ್ರಹ ಪಡೆ ಪೊಲೀಸರು ದಾಳಿ ನಡೆಸಿ, ಬಂಧಿಸಿದ್ದರು. ಶಿವಮೊಗ್ಗಕ್ಕೆ ಕರೆ ತರುವಾಗ ಮಲವಗೊಪ್ಪಬಳಿ ಮೂತ್ರ ವಿಸರ್ಜನೆ ಮಾಡುವ ನೆಪ ಹೇಳಿದ್ದಾನೆ. ವಾಹನದಿಂದ ಕೆಳಗಿಳಿಯುತ್ತಿದ್ದಂತೆ ಸೈನಾದಿ ಲಕ್ಷ್ಮಣ್, ಕೈಗೆ ಹಾಕಲಾಗಿದ್ದ ಚೈನ್‌ನಿಂದ ರೌಡಿ ನಿಗ್ರಹ ಪಡೆ ಮುಖ್ಯ ಪೇದೆ ಹರ್ಷ ಮೇಲೆ ಹಲ್ಲೆ ನಡೆಸಿ, ಓಡಿ ಹೋಗಲು ಯತ್ನಿಸಿದ್ದಾನೆ. ರೌಡಿ ನಿಗ್ರಹ ಪಡೆ ಇನ್‌ಸ್ಪೆಕ್ಟರ್ ಗುರುರಾಜ್ ಅವರು ವಾರ್ನಿಂಗ್ ನೀಡಿದ್ದಾರೆ. ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದ್ದಾರೆ. ಇದಕ್ಕೂ ಕ್ಯಾರೆ ಅನ್ನದೆ ಸೈನಾದಿ ಲಕ್ಷ್ಮಣ್ ಓಡುತ್ತಿದ್ದಾಗ, ಕಾಲಿಗೆ ಗುಂಡು ಹಾರಿಸಿದ್ದಾರೆ ಎಂದು ಎಸ್ಪಿ ಕೆ.ಎಂ.ಶಾಂತರಾಜು ಹೇಳಿದರು.

ರೌಡಿ ಶೀಟರ್ ಸೈನಾದಿ ಲಕ್ಷ್ಮಣ್ ರೌಡಿ ಶೀಟರ್ ಮಾರ್ಕೆಟ್ ಲೋಕಿಯ ಸಹಚರ. ಈತನ ವಿರುದ್ಧ ಹಲವು ಪ್ರಕರಣಗಳಿವೆ. 2006ರಲ್ಲಿ ಲವಕುಶ ಡಬಲ್ ಮರ್ಡರ್ ಕೇಸ್, 2015ರಲ್ಲಿ ರೌಡಿ ಶೀಟರ್ ಮೋಟಿ ವೆಂಕಟೇಶ್ ಹತ್ಯೆ ಪ್ರಕರಣ, 2017ರಲ್ಲಿ ಕೋಕ ಕೇಸ್, 2018ರಲ್ಲಿ ಮಾರ್ಕೆಟ್ ಗಿರಿ ಹತ್ಯೆ ಪ್ರಕರಣದ ಆರೋಪಿಯಾಗಿದ್ದಾನೆ. ಮಾರ್ಕೆಟ್ ಗಿರಿ ಹತ್ಯೆಯ ಬಳಿಕ ಸೈನಾದಿ ಲಕ್ಷ್ಮಣ್ ತಲೆ ಮರೆಸಿಕೊಂಡಿದ್ದ ಎಂದು ಎಸ್ಪಿ ಸ್ಪಷ್ಟಪಡಿಸಿದ್ದಾರೆ.

ಕೂಡಲೇ ಆತನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸೈನಾದಿ ಲಕ್ಷ್ಮಣ್ ಎಸ್ಕೇಪ್ ಆಗುವ ಹಂತದಲ್ಲಿ ಮುಖ್ಯ ಪೇದೆ ಹರ್ಷ ಮೇಲೆ ಹಲ್ಲೆ ನಡೆಸಿದ್ದ. ಹರ್ಷ ಅವರ ತಲೆಗೆ ಗಾಯವಾಗಿದ್ದು, ಮ್ಯಾಕ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅವರಿಗೂ ಚಿಕಿತ್ಸೆ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News