ತುಮಕೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಐಟಿಯು ಧರಣಿ

Update: 2020-03-11 17:18 GMT

ತುಮಕೂರು, ಮಾ.11: ಕೆಲಸವನ್ನು ಖಾಯಂಗೊಳಿಸಬೇಕು, ಸೇವಾಭದ್ರತೆ ನೀಡಬೇಕು ಮತ್ತು ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವುದು ಸೇರಿದಂತೆ ಹಲವು ಬೇಡಿಕೆಗಳಿಗೆ ಈಡೇರಿಸುವಂತೆ ಆಗ್ರಹಿಸಿ ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದು ಕೂಡಲೇ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸುವಂತೆ ಫಿಟ್‍ವೆಲ್ ಟೂಲ್ಸ್ ಅಂಡ್ ಫೋರ್ಜಿಂಗ್ ಕಾರ್ಮಿಕ ಸಂಘ ಸಿಐಟಿಯು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿತು.

ತುಮಕೂರಿನ ಅಂತರಸನಹಳ್ಳಿ ಕೈಗಾರಿಕಾ ಪ್ರದೇಶದಿಂದ ಬಂದು ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಲಾಯಿತು. ಅಲ್ಲಿ ಸಮಾವೇಶಗೊಂಡ ಧರಣಿ ಸತ್ಯಾಗ್ರಹ ನಡೆಸಲಾಯಿತು.

ಕಳೆದ 12-13 ವರ್ಷಗಳಿಂದ ತಾತ್ಕಾಲಿಕ ಕಾರ್ಮಿಕರಾಗಿ ದುಡಿಯುತ್ತಿದ್ದು ನಮ್ಮ ಕೆಲಸವನ್ನು ಖಾಯಂ ಮಾಡುವುದು, ಸೇವಾಭದ್ರತೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಆಡಳಿತ ಮಂಡಳಿ ಮುಂದಿಟ್ಟಿದ್ದೇವೆ. ಇದಕ್ಕೆ ಆಡಳಿತ ಮಂಡಳಿ ಸ್ಪಂದಿಸಿಲ್ಲ. ಆದ್ದರಿಂದ ತಾವು ಮಧ್ಯಪ್ರವೇಶ ಮಾಡಿ ನ್ಯಾಯ ಕಲ್ಪಿಸಕೊಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.

ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಅವರು ಕಾರ್ಮಿಕರ ಅಹವಾಲನ್ನು ಸ್ವೀಕರಿಸಿ ತಕ್ಷಣ ಅಧಿಕಾರಿಗಳ ಸಭೆ ಕರೆದು ಚರ್ಚಿಸಿ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು.

ಇದೇ ವೇಳೆ ಮಾತನಾಡಿದ ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಆರ್.ಸುಜಿತ್, ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಕಾರ್ಮಿಕರು ಕನಿಷ್ಟ ಕೂಲಿ ವೇತನದ ಬಾಕಿ ಹಣಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಅವರನ್ನು ಕೆಲಸದಿಂದ ಅಮಾನತು ಮಾಡಿದ್ದಾರೆ. ಅವರಿಗೆ ಕೆಲಸ ಮಾಡಲು ಅವಕಾಶ ಮಾಡಿಕೊಡುಬೇಕು ಎಂದು ಮನವಿ ಮಾಡಿದರು.  

ಕೆಲಸ ಮಾಡುವ ವೇಳೆ ಕೈಬೆರಳುಗಳನ್ನು ಕಳೆದುಕೊಂಡಿದ್ದೇವೆ. ನಮಗೆ ಆಡಳಿತ ಮಂಡಳಿಯವರು ಸೂಕ್ತ ಪರಿಹಾರವನ್ನು ನೀಡಿಲ್ಲ. ಕೂಡಲೇ ಕೈಬೆರಳು ಕಳೆದುಕೊಂಡಿರುವವರಿಗೆ ಪರಿಹಾರ ಕೊಡಿಸಬೇಕು. ಇಎಸ್‍ಐ ಯಿಂದ ಪ್ರತಿತಿಂಗಳು ಕೊಡಮಾಡುವ ಪಿಂಚಣಿಯನ್ನು ಕೊಡಿಸಿಕೊಡಬೇಕೆಂದು ನೊಂದ ಕಾರ್ಮಿಕರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ಕಳಿಸಿ ತಕ್ಷಣವೇ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್, ಗೌರವಾಧ್ಯಕ್ಷ ಎನ್.ಕೆ.ಸುಬ್ರಮಣ್ಯ, ಸಂಘದ ಆಧ್ಯಕ್ಷ ವೈ.ಎನ್. ಮುತ್ತುರಾಜ್, ಸಿಐಟಿಯು ತಾಲೂಕು ಪ್ರಧಾನ ಕಾರ್ಯದರ್ಶಿ ರಂಗಧಾಮಯ್ಯ, ಕಾಳೇಶ್ವರಿ ಮುತ್ತುರಾಜ್, ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News