×
Ad

ಐವರು ಚಿನ್ನಾಭರಣ ಕಳವು ಆರೋಪಿಗಳ ಬಂಧನ: 24.6 ಲಕ್ಷ ರೂ. ಮೌಲ್ಯದ ಸೊತ್ತು ಜಪ್ತಿ

Update: 2020-03-11 22:53 IST

ತುಮಕೂರು, ಮಾ.11: ಗಮನ ಬೇರೆಡೆ ಸೆಳೆದು ಮಹಿಳೆಯರ ಚಿನ್ನಾಭರಣವನ್ನು ದೋಚುತ್ತಿದ್ದ ಆರೋಪಿಗಳನ್ನು ಬಂಧಿಸಿ 592 ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣ ತಿಳಿಸಿದರು.

ಕಳೆದ ಒಂದು ವರ್ಷದಿಂದ ಜಿಲ್ಲೆಯಲ್ಲಿ ಈ ತಂಡವನ್ನು ಸೆರೆ ಹಿಡಿಯಲು ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ದಾವಣಗೆರೆ ಜಿಲ್ಲೆ ಸಂತೇ ಬೆನ್ನೂರಿನ ಚಿಕ್ಕಬೆನ್ನೂರಿನ ಮಂಜಪ್ಪ, ಮಾರುತಿ, ಹನುಮಂತ, ಜಯರಾಮ, ಲಕ್ಷ್ಮಮ್ಮ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದರು.

ಆರೋಪಿಗಳು ತುಮಕೂರು ನಗರ ಠಾಣೆಯ 4, ಮಧುಗಿರಿಯ 5, ಕ್ಯಾತ್ಸಂದ್ರ, ತಿಪಟೂರು, ಕೊರಟಗೆರೆ 1 ಪ್ರಕರಣದಲ್ಲಿ ಭಾಗಿಯಾಗಿದ್ದು, ಬಂಧಿತರಿಂದ ಒಟ್ಟು 24,68,000 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದು, ಮೂಲ ಮಾಲಕರಿಗೆ ಕಾನೂನು ರೀತಿಯ ಪರಿಹಾರ ನೀಡಲಾಗುವುದು ಎಂದು ಹೇಳಿದರು.

ತರಕಾರಿ ವ್ಯಾಪಾರ ಮಾಡುತ್ತಿದ್ದ ಆರೋಪಿಗಳು ದೋಚುತ್ತಿದ್ದ ಚಿನ್ನಾಭರಣಗಳನ್ನು ಹರಪನಹಳ್ಳಿ, ದಾವಣಗೆರೆಯಲ್ಲಿ ಮಾರಾಟ ಮಾಡುತ್ತಿದ್ದರು, ಈ ಆರೋಪಿಗಳ ಚಲನವಲನದ ಬಗ್ಗೆ ಮಾಹಿತಿ ಸಂಗ್ರಹಿಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಮಟ್ಕಾ ಹಾಗೂ ಜೂಜು ಮಟ್ಕಾ ಹಾಕಲು 25ಕ್ಕೂ ಹೆಚ್ಚು ಮಂದಿಯ ಮೇಲೆ ರೌಡಿಶೀಟರ್ ದಾಖಲಾಗಿಸಲಾಗಿದ್ದು, ಪದೇ ಪದೇ ಇಂತಹ ಕೃತ್ಯದಲ್ಲಿ ಭಾಗಿಯಾಗುವ ಮಂದಿಯನ್ನು ಪಟ್ಟಿ ಮಾಡಲಾಗಿದ್ದು ಅಂತಹವರ ಮೇಲೆ ರೌಡಿಶೀಟರ್ ತೆಗೆಯಲು ಚಿಂತನೆ ನಡೆಸಲಾಗುತ್ತಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಎಎಸ್ಪಿ ಉದೇಶ್, ಡಿವೈಎಸ್ಪಿ ತಿಪ್ಪೇಸ್ವಾಮಿ, ಸಿಪಿಐ ಶ್ರೀಧರ್, ತುಮಕೂರು ನಗರ ಠಾಣೆಯ ಪಿಎಸ್‍ಐ ವಿಜಯಲಕ್ಷ್ಮಿ ಸೇರಿದಂತೆ ಇತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News